ಮುಂಬೈ: ಲಾಕ್ಡೌನ್ ಸಮಯದಲ್ಲಿ ಬಾಲಿವುಡ್ ನಟ ಸೋನು ಸೂದ್ ಅಪಾರ ಜನರಿಗೆ ಸಹಾಯ ಮಾಡಿದ್ದಾರೆ. ಇಂದಿಗೂ ತಮ್ಮ ಬಳಿ ಸಹಾಯ ಕೇಳುವ ಮಂದಿಗೆ ಕೂಡಲೇ ಸ್ಪಂದಿಸುತ್ತಿದ್ದಾರೆ. ಹೀಗಾಗಿ ಅವರ ಲೋಕೋಪಕಾರಿ ಕೆಲಸಕ್ಕಾಗಿ ಅವರಿಗೆ ವಿಶ್ವಸಂಸ್ಥೆ ಪ್ರತಿಷ್ಠಿತ ಎಸ್ಡಿಜಿ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ. ಇದನ್ನೂ ಓದಿ: ಕೊಟ್ಟ ಮಾತಿನಂತೆ ನಡೆದ ಸೋನು ಸೂದ್ – ಯಾದಗಿರಿಯ ಕುಟುಂಬಕ್ಕೆ ಬಂತು ದಿನಸಿ
Advertisement
ಸೋನು ಸೂದ್ ಅವರಿಗೆ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್ಡಿಪಿ)ದ ಪ್ರತಿಷ್ಠಿತ ಎಸ್ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿಯನ್ನು ನೀಡಲಾಗಿದೆ. ಸೋಮವಾರ ಸಂಜೆ ನಡೆದ ಸಮಾರಂಭ ಕಾರ್ಯಕ್ರಮದಲ್ಲಿ ಸೋನ್ ಸೂದ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ತಮಗೆ ನೀಡಿದ ಗೌರವದ ಬಗ್ಗೆ ಸೋನು ಸೂದ್ ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನೀವು ನಿಜಕ್ಕೂ ದೇವರ ತದ್ರೂಪಿ – ಕೊಟ್ಟ ಮಾತಿನಂತೆ ಶಸ್ತ್ರಚಿಕಿತ್ಸೆಗೆ ಸೋನು ಸೂದ್ ಸಹಾಯ
Advertisement
Advertisement
ಯುಎನ್ಡಿಪಿ ನನ್ನ ಪ್ರಯತ್ನಗಳಿಗೆ ಸಂಪೂರ್ಣವಾಗಿ ಬೆಂಬಲಿಸಿದೆ. ಇದು ಅಪರೂಪದ ಗೌರವವಾಗಿದೆ. ಯುಎನ್ ಮಾನ್ಯತೆ ಬಹಳ ವಿಶೇಷವಾಗಿದೆ. ನಾನು ಯಾವುದೇ ನಿರೀಕ್ಷೆಗಳಿಲ್ಲದೆ ನನ್ನ ದೇಶವಾಸಿಗಳಿಗೆ ಅಲ್ಪಸ್ವಲ್ಪ ಕಾರ್ಯವನ್ನು ಮಾಡಿದ್ದೇನೆ. ಆದರೆ ಅದನ್ನು ಗುರುತಿಸಿ ಯುಎನ್ಡಿಪಿ ಪ್ರಶಸ್ತಿ ನೀಡುವ ಮೂಲಕ ಗೌರವಿಸಿದೆ. ನಿಜಕ್ಕೂ ನನಗೆ ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.
Advertisement
ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ಪಡೆದವರಿಗೆ ಈ ಪ್ರಶಸ್ತಿಯ ನೀಡಿ ಗೌರವಿಸಲಾಗುತ್ತದೆ. ಈ ಹಿಂದೆ ಏಂಜಲೀನಾ ಜೋಲಿ, ಡೇವಿಡ್ ಬೆಕ್ಹ್ಯಾಮ್, ಲಿಯೊನಾರ್ಡೊ ಡಿಕಾಪ್ರಿಯೊ, ಎಮ್ಮಾ ವ್ಯಾಟ್ಸನ್ ಮತ್ತು ಲಿಯಾಮ್ ನೀಸನ್ ಅವರು ಈ ಪ್ರಶಸ್ತಿಗೆ ಭಾಜನರಾಗಿದ್ದರು.
ಕೊರೊನಾ ಹಿನ್ನೆಲೆ ಲಾಕ್ಡೌನ್ ಮಾಡಿದ ಸಂದರ್ಭದಲ್ಲಿ ಸುಮಾರು 45,000ಕ್ಕೂ ಹೆಚ್ಚು ಜನರಿಗೆ ಆಹಾರ ಮತ್ತು ಆಶ್ರಯ ವ್ಯವಸ್ಥೆಗಳನ್ನು ಒದಗಿಸಿದ್ದರು. ಜೊತೆಗೆ 15,000ಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಮನೆಗಳಿಗೆ ತಲುಪಲು ಸಹಾಯ ಮಾಡಿದ್ದರು. ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರಗಳ ಜೊತೆಗೆ ಚರ್ಚಿಸಿ ಕಲಬುರಗಿಯಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಅನುಮತಿ ಪಡೆದಿದ್ದರು. ಈ ಮೂಲಕ ತಮ್ಮ ಸ್ವಂತ ಖರ್ಚಿನಲ್ಲಿ ಒಟ್ಟು ಹತ್ತು ಬಸ್ಗಳ ವ್ಯವಸ್ಥೆ ಮಾಡಿ ಥಾಣೆಯಿಂದ ಕಲಬುರಗಿಗೆ ತಾವೇ ಮುಂದೆ ನಿಂತು ಕಳುಹಿಸಿಕೊಟ್ಟಿದ್ದರು.
ಅಷ್ಟೇ ಅಲ್ಲದೇ ಸೋನು ಸೂದ್ ವೈಯಕ್ತಿಕವಾಗಿ ಸೋಶಿಯಲ್ ಮೀಡಿಯಾದ ಮೂಲಕ ಸಹಾಯವನ್ನು ಕೋರಿ ಕಳುಹಿಸಿದ ಕರೆಗಳು ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸುತ್ತಿದ್ದರು. ಇದಲ್ಲದೆ ಲಾಕ್ಡೌನ್ ಸಮಯದಲ್ಲಿ ತಮ್ಮ ಬಳಿ ಸಹಾಯ ಕೇಳಿದ ಬಡ ಜನರಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿದ್ದ ಅನೇಕರಿಗೆ ಉದ್ಯೋಗಾವಕಾಶವನ್ನು ನೀಡಿದ್ದಾರೆ.
ಲಾಕ್ಡೌನ್ ವೇಳೆ ಒಡಿಶಾದ ಸುಮಾರು 177 ಯುವತಿಯರು ಕೇರಳದಲ್ಲಿ ಸಿಲುಕಿಕೊಂಡಿದ್ದರು. ಈ ಯುವತಿಯರ ಬಗ್ಗೆ ಭುವನೇಶ್ವರದಲ್ಲಿರುವ ಸ್ನೇಹಿತರೊಬ್ಬರ ಮೂಲಕ ಸೋನು ಸೂದ್ ತಿಳಿದುಕೊಂಡಿದ್ದರು. ತಕ್ಷಣ ವಿಮಾನ ನಿಲ್ದಾಣಗಳನ್ನು ತೆರೆಯಲು ಕೇರಳ ಮತ್ತು ಒಡಿಶಾ ಸರ್ಕಾರಗಳಿಂದ ಅನೇಕ ಅನುಮತಿಗಳನ್ನು ಪಡೆದುಕೊಂಡಿದ್ದರು. ಬಳಿಕ ಸೋನು ಸೂದ್ ಯುವತಿಯರ ರಕ್ಷಣೆ ಮಾಡಿದ್ದು, ಅಲ್ಲಿಂದ ಅವರನ್ನು ವೈಮಾನಿಕ ಮಾರ್ಗದ ಮೂಲಕ ಒಡಿಶಾಕ್ಕೆ ಕಳುಹಿಸಿದ್ದರು.
ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದ ಪದ್ಮಾಗೆ ಮೂರು ಗಂಡು ಮಕ್ಕಳು ಜನಿಸಿದ್ದವು. ಕಡು ಬಡತನದಲ್ಲಿದ್ದ ಈ ಕುಟುಂಬ ಪಬ್ಲಿಕ್ ಟಿವಿ ಮೂಲಕ ಸಹಾಯ ಹಸ್ತವನ್ನು ಚಾಚಿದ್ದರು, ಈ ಸುದ್ದಿಯನ್ನು ಯಾದಗಿರಿಯ ಮಲ್ಲಿಕಾರ್ಜುನ ರೆಡ್ಡಿಯವರು ನಟ ಸೋನು ಸೂದ್ಗೆ ಕಳುಹಿಸಿದ್ದರು. ಸುದ್ದಿ ನೋಡಿದ ಸೋನು ಸೂದ್ ಪದ್ಮಾ ಕುಟುಂಬಕ್ಕೆ ರೇಷನ್ ನೀಡುವ ಭರವಸೆ ನೀಡಿದ್ದರು. ಭರವಸೆ ನೀಡಿದ ಎರಡೇ ದಿನಕ್ಕೆ ಮುಂಬೈಯಿಂದ ದಿನಸಿ ಕಳುಹಿಸಿದ್ದರು.