– 35 ಲಕ್ಷ ರೂ. ಬೆಲೆಬಾಳುವ ಮದ್ಯ ಕಾಣೆ
ಲಕ್ನೋ: ಸೀಜ್ ಮಾಡಿ ಪೊಲೀಸ್ ಠಾಣೆಯಲ್ಲಿರಿಸಿದ್ದ 1,459 ಬಾಕ್ಸ್ ಅಕ್ರಮ ಮದ್ಯ ಕಾಣೆಯಾಗಲು ಇಲಿಗಳು ಕಾರಣ ಎಂದು ಪೊಲೀಸರು ದೂರಿರುವ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ನಡೆದಿದೆ.
ಇಟಾ ಜಿಲ್ಲೆಯ ಕೊತ್ವಾಲಿ ದೇಹತ್ ಪೊಲೀಸ್ ಠಾಣೆಯಲ್ಲಿದ್ದ 1,459 ಅಕ್ರಮ ಮದ್ಯದ ಬಾಕ್ಸ್ ಗಳು ಕಾಣೆಯಾಗಿದ್ದು, ಇದೆಲ್ಲವನ್ನೂ ಪೊಲೀಸರು ಸೀಜ್ ಮಾಡಿ ಠಾಣೆಯಲ್ಲಿಟ್ಟುಕೊಂಡಿದ್ದರು. ಆದರೆ ಇದೀಗ ಮದ್ಯದ ಎಲ್ಲ ಬಾಕ್ಸ್ ಗಳು ಕಾಣೆಯಾಗಿವೆ. ಈ ಬಗ್ಗೆ ಪೊಲೀಸರನ್ನು ಕೇಳಿದರೆ ಇದೆಲ್ಲದಕ್ಕೂ ಇಲಿಗಳೇ ಕಾರಣ, ಬಾಕ್ಸ್ ಗಳನ್ನು ಕಚ್ಚಿ ಹಾಳು ಮಾಡಿವೆ ಎಂದು ಹೇಳಿದ್ದಾರೆ.
Advertisement
Advertisement
ಅಕ್ರಮ ಮದ್ಯ ತುಂಬಿದ್ದ ಪ್ಲಾಸ್ಟಿಕ್ ಕ್ಯಾನ್ಗಳನ್ನು ಇಲಿಗಳು ಕಚ್ಚಿದ್ದು, ಗಾಜಿನ ಬಾಟಲಿ ಒಡೆದು, ಇತರ ಹಾನಿಗೊಳಗಾದ ಚೀಲಗಳನ್ನು ಹರಿದಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಆಗ್ರಾ ವಲಯದ ಎಡಿಜಿ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದ್ದು, ಅಲೀಘರ್ ಐಪಿಎಸ್ ಅಧಿಕಾರಿಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಬರೋಬ್ಬರಿ 35 ಲಕ್ಷ ರೂ. ಬೆಲೆಬಾಳುವ ಮದ್ಯ ಕಾಣೆಯಾಗಿದೆ ಎಂದು ಅಂದಾಜಿಸಲಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ ಗ್ಯಾಂಗ್ಸ್ಟರ್ ಬಂಟು ಯಾದವ್ಗೆ ಪೊಲೀಸರು ಮದ್ಯವನ್ನು ಮಾರಾಟ ಮಾಡಿದ್ದಾರೆ ಎನ್ನಲಾಗಿದ್ದು, ಫೇಕ್ ಢಾಬಾ ಎನ್ಕೌಂಟರ್ ಕೇಸ್ಗೆ ಸಂಬಂಧಿಸಿದಂತೆ ಯಾದವ್ನನ್ನು ಶುಕ್ರವಾರ ಬಂಧಿಸಲಾಗಿದೆ.
Advertisement
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಭಾ ಚಹಲ್ ಹಾಗೂ ಎಸ್ಎಸ್ಪಿ ಸುನಿಲ್ ಸಿಂಗ್ ಅವರು ಸರ್ಪ್ರೈಸ್ ಇನ್ಸ್ಪೆಕ್ಷನ್ಗೆ ಠಾಣೆಗೆ ಆಗಮಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. 1,459 ಬಾಕ್ಸ್ ಮದ್ಯ ಕಾಣೆಯಾಗಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ಎಸ್ಎಚ್ಒ ಇಂದ್ರೇಶ್ಪಾಲ್ ಸಿಂಗ್ ಹಾಗೂ ಪ್ರಧಾನ ಕ್ಲರ್ಕ್ ರಸಾಲ್ ಸಿಂಗ್ ಪ್ರಕರಣದ ಕುರಿತು ವಿವರಿಸುವಲ್ಲಿ ವಿಫಲರಾಗಿದ್ದಾರೆ.
ಬಳಿಕ ಎಸ್ಎಚ್ಒ ಹಾಗೂ ಕ್ಲರ್ಕ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇಬ್ಬರನ್ನು ಅಮಾನತು ಮಾಡಲಾಗಿದೆ. ಇಬ್ಬರು ಪೊಲೀಸ್ ಅಧಿಕಾರಿಗಳ ವಿರುದ್ಧ ಸೆಕ್ಷನ್ 409(ನಂಬಿಕೆ ಇರಿಸಿದ್ದ ಸಾರ್ವಜನಿಕ ಸೇವೆಯಲ್ಲಿರುವವರಿಂದ ಅಪರಾಧ ಕೃತ್ಯ), ಭ್ರಷ್ಟಾಚಾರ ತಡೆ ಕಾಯ್ದೆ, ಎಕ್ಸೈಜ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಎಸ್ಎಚ್ಒ ತಲೆಮರೆಸಿಕೊಂಡಿದ್ದಾರೆ.
ಈ ಕುರಿತು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದು, 239 ಬಾಕ್ಸ್ ಗಳನ್ನು ಇಲಿಗಳು ಡ್ಯಾಮೇಜ್ ಮಾಡಿವೆ ಎಂದು ಪೊಲೀಸ್ ಜನರಲ್ ಡೈರಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ, ಈ ವಿಷಯ ಬಾಲಿಶ ಎನ್ನಿಸುತ್ತದೆ. ಕೃತ್ಯವನ್ನು ಮುಚ್ಚಿಡಲು ಈ ರೀತಿ ಉಲ್ಲೇಖಿಸಲಾಗಿದೆ ಎಂದು ಭಾಸವಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.