ವಿಜಯಪುರ: ಕಳೆದ ಎರಡ್ಮೂರು ದಿನಗಳಿಂದ ಸಿಎಂ ಬದಲಾವಣೆ ಅಂತೆಲ್ಲ ಸುದ್ದಿ ಹರಡುತ್ತಿದೆ. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಅವರ ವಿರುದ್ಧ ಷಡ್ಯಂತ್ರ ನಡೆಸುವವರ ಮೇಲೆ ಕ್ರಮಕೈಗೊಳ್ಳಬೇಕು ಎಂದು ಸಿಎಂ ಬಿಎಸ್ವೈ ಪರ, ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ ಬ್ಯಾಟ್ ಬೀಸಿದ್ದಾರೆ.
ವಿಜಯಪುರದ ಮುದ್ದೇಬಿಹಾಳದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ನಡಹಳ್ಳಿ, ಮುಂದಿನ 23 ತಿಂಗಳು ಬಿಎಸ್ವೈ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ. ನಾನು ವೈಯಕ್ತಿಕವಾಗಿ ಅವರ ಜೊತೆಗಿದ್ದೇನೆ. ಬಿಜೆಪಿಯ ಎಲ್ಲ ಶಾಸಕರು ಅವರ ಜೊತೆಗಿದ್ದಾರೆ. ಯಡಿಯೂರಪ್ಪರಿಂದ ಸಹಾಯ ಪಡೆದವರೇ ಅವರ ಆಡಳಿತಕ್ಕೆ ತೊಂದರೆ ಮಾಡುತ್ತಿದ್ದು, ಅಂಥವರನ್ನು ಪಕ್ಷದಿಂದ ಉಚ್ಛಾಟನೆ ಮಾಡಬೇಕು. ದೇಶದಲ್ಲಿ ವಾಜಪೇಯಿ, ಅಡ್ವಾಣಿಯವರಂತೆ ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪನವರು ಪಕ್ಷವನ್ನು ಕಟ್ಟಿದ್ದಾರೆ. ಬಿಎಸ್ವೈ ಯಾರಿಗೆ ಸಹಾಯ ಮಾಡ್ತಾರೋ ಅವರೆ ರಾಜಕೀಯ ಜೀವನದಲ್ಲಿ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂದು ಗುಡುಗಿದ್ದಾರೆ.
ಕೆಲವು ಶಾಸಕರು ಅವರ ಗೌರವಕ್ಕೆ ಧಕ್ಕೆ ಬರುವಂತೆ ಹೇಳಿಕೆ ಕೊಡುತ್ತಿದ್ದಾರೆ. ಯಾರೇ ರಾಜಕೀಯ ಕುತಂತ್ರ ನಡೆಸಿದ್ದರು ಪಕ್ಷದಿಂದ ಕೈ ಬಿಡಬೇಕು. ಕುತಂತ್ರಿಗಳಿಂದ ಪಕ್ಷದ, ಸರ್ಕಾರದ ಇಮೇಜಿಗೆ ದಕ್ಕೆಯಾಗುತ್ತದೆ. ಪಕ್ಷ ನಿಷ್ಠರು ಎಂದು ಹೇಳಿಕೊಂಡು ಯಡಿಯೂರಪ್ಪನವರ ವಿರುದ್ಧ ಮಾತನಾಡುತ್ತಿರುವವರು ಮೂರ್ಖರು. ಜೊತೆಗಿದ್ದುಕೊಂಡೇ ಬೆನ್ನಿಗೆ ಚೂರಿ ಹಾಕುವವರಿದ್ದಾರೆ. ಅಂತಹವರನ್ನು ಸಿಎಂ ನಂಬಬಾರದು ಎಂದು ಕಿಡಿಕಾರಿದರು.