ಹಾಸನ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸಹಾಯಕ ಸ್ಥಿತಿ ತಲುಪಿದ್ದು, ಅವರನ್ನು ಈ ಸ್ಥಿತಿಗೆ ತಂದ ಶಕ್ತಿ ಹೆಸರನ್ನು ಸಮಯ ಬಂದಾಗ ತಿಳಿಸುತ್ತೇನೆ ಎಂದು ಶಾಸಕ ಶಿವಲಿಂಗೇಗೌಡ ತಿಳಿಸಿದ್ದಾರೆ.
ಅರಸೀಕೆರೆ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಬಳಿಕ ಮಾತನಾಡಿದ ಅವರು, ಅರಸೀಕೆರೆ ನಗರದ ಅಭಿವೃದ್ಧಿ ಕುಲಗೆಡಿಸಲು ಮಾಡಿದ ಅನೈತಿಕ ಮೀಸಲಾತಿಯಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದೆ. ಅವರು ರಾಜಕೀಯದ ಒತ್ತಡದಿಂದ ಇದೆಲ್ಲ ಆಗುತ್ತಿದೆ ಎಂದು ಅಸಹಾಯಕತೆ ತೋಡಿಕೊಂಡರು. ಅವರನ್ನು ಅಸಹಾಯಕ ಸ್ಥಿತಿಗೆ ತಂದು, ಹಿಡಿದು ಆಡಿಸುತ್ತಿರುವ ಶಕ್ತಿ ಯಾವುದು ಎಂದು ಕಾಲ ಬಂದಾಗ ತಿಳಿಸುತ್ತೇನೆ ಎಂದರು.
Advertisement
Advertisement
ಅರಸೀಕೆರೆ ನಗರಸಭೆಯಲ್ಲಿ ಅಧ್ಯಕ್ಷ ಸ್ಥಾನ ಎಸ್ಟಿಗೆ ಮೀಸಲಾಗಿದೆ. ಒಟ್ಟು 31 ಸದಸ್ಯರಿದ್ದು, ಜೆಡಿಎಸ್ ನಿಂದ 22, ಬಿಜೆಪಿ 5, ಕಾಂಗ್ರೆಸ್ 1, ಪಕ್ಷೇತರ 3 ಮಂದಿ ಸದಸ್ಯ ಬಲವಿದೆ. ಬಿಜೆಪಿಯಲ್ಲಿ ಮಾತ್ರ ಎಸ್ಟಿ ಸಮುದಾಯದ ಅಭ್ಯರ್ಥಿ ಗೆದ್ದಿದ್ದು, ಕೇವಲ 5 ಮಂದಿ ಸದಸ್ಯರಿರುವ ಬಿಜೆಪಿಗೆ ಅಧ್ಯಕ್ಷ ಸ್ಥಾನ ಮೀಸಲಾಗಿದೆ. ಹೀಗಾಗಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯುವ ಉದ್ದೇಶದಿಂದ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ಕಾನೂನು ಬಾಹಿರವಾಗಿ ಎಸ್ಟಿ ಜನಾಂಗಕ್ಕೆ ಅಧ್ಯಕ್ಷಗಾದಿ ಮೀಸಲಾತಿ ನೀಡಿದ್ದಾರೆ ಆಕ್ರೋಶ ವ್ಯಕ್ತಪಡಿಸಿದರು.
Advertisement
ಬಿಜೆಪಿಯ ಅನಂತಕುಮಾರ್ ಹೆಗಡೆ ನಾವು ಮೀಸಲಾತಿ ತೆಗೆಯಲು ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳಿದ್ದರು. ಅಂತಹ ಮೀಸಲಾತಿ ವಿರೋಧಿ ಸರ್ಕಾರ ಮೀಸಲಾತಿ ಪರ ಎಂದು ಹೇಳಿಕೊಂಡು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ. ನಾನು ಮೀಸಲಾತಿ ಸ್ವಾಗತಿಸುವವರಲ್ಲಿ ಮೊದಲಿಗ. ಆದರೆ ಕಾನೂನಿಗೆ ವಿರುದ್ಧವಾಗಿ ಮೀಸಲಾತಿ ಮಾಡಿದಕ್ಕೆ ವಿರೋಧವಿದೆ ಎಂದು ತಿಳಿಸಿದರು.
Advertisement
ಇದೇ ವೇಳೆ ಮಾತನಾಡಿದ ಅಧ್ಯಕ್ಷ ಸ್ಥಾನದ ಸ್ಪರ್ಧಿ ಗಿರೀಶ್, ಇಂದು ಚುನಾವಣೆ ನಡೆದರೂ ಫಲಿತಾಂಶ ಪ್ರಕಟಿಸದಂತೆ ಶಾಸಕ ಶಿವಲಿಂಗೇಗೌಡ ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದಾರೆ. ಅವರ ನಡೆ ಮೀಸಲಾತಿ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ.