ಹಾಸನ: ಸಾಲದ ಹಣ ಮರುಪಾವತಿಸದ್ದಕ್ಕೆ ಗೆಳೆಯನನ್ನೇ ಕೊಲೆ ಮಾಡಿದ್ದ ಐವರನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.
ಭವಿತ್, ತೇಜಸ್, ಪುನೀತ, ನವೀನ್ ಮತ್ತು ವಿವೇಕ್ ಬಂಧಿತ ಆರೋಪಿಗಳು. ಡಿಸೆಂಬರ್ 5 ರಂದು ರಾತ್ರಿ ರಂಗೋಲಿಹಳ್ಳದ ಬಳಿ ರಘು ಎಂಬಾತನನ್ನು ಸಿನಿಮೀಯ ರೀತಿಯಲ್ಲಿ ಅಟ್ಟಾಡಿಸಿ ಹತ್ಯೆ ಮಾಡಿದ್ದರು. ಆರೋಪಿಗಳೆಲ್ಲರೂ ಕೊಲೆಯಾದವನ ಸ್ನೇಹಿತರಾಗಿದ್ದರು. ಹತ್ಯೆಯಾದ ರಘು ತೇಜಸ್ ಎಂಬಾತನಿಂದ ಒಂದೂವರೆ ಲಕ್ಷ ಸಾಲ ಪಡೆದಿದ್ದ. ಸಾಲದ ಹಣ ಹಿಂದಿರುಗಿಸಲು ರಘು ನಿರಾಕರಿಸಿದ್ದ. ಈ ವಿಚಾರವಾಗಿ ರಘು, ತೇಜಸ್ ಇತರರ ನಡುವೆ ಜಗಳ ನಡೆದಿತ್ತು.
Advertisement
Advertisement
ಇದರಿಂದ ಕೋಪಿತರಾದ ತೇಜಸ್ ಮತ್ತು ಆತನ ನಾಲ್ವರು ಸಹಚರರು ಸೇರಿ ರಘುನನ್ನು ಮುಗಿಸಲು ಸ್ಕೆಚ್ ಹಾಕಿ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಈ ವೇಳೆ ಕೊಲೆಗಡುಕರಿಂದ ತಪ್ಪಿಸಿಕೊಳ್ಳಲು ರಘು ಟೀ ಅಂಗಡಿಗೆ ನುಗ್ಗಿದ್ದ. ಆರೋಪಿಗಳು ಟೀ ಅಂಗಡಿಗೆ ನುಗ್ಗಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದರು. ಇದೀಗ ಗೆಳೆಯನನ್ನು ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.