– ಸಿಂಪಲ್ ಶ್ರೀನಿವಾಸನ ಮನೆಯಲ್ಲಿ ಸಿಂಪಲ್ ಸಂಭ್ರಮ
ಉಡುಪಿ: ಕೋಟಾ ಶ್ರೀನಿವಾಸ ಪೂಜಾರಿ ಅವರು ಮೂರನೇ ಬಾರಿಗೆ ಸಚಿವರಾಗಿದ್ದಾರೆ. ಸಿಂಪಲ್ ಶ್ರೀನಿವಾಸ ಎಂದೆ ಹೆಸರು ಪಡೆದಿರುವ ಕೋಟಾ ಗ್ರಾಮದ ಅವರ ಮನೆಯಲ್ಲಿ ಯಾವುದೇ ಸಂಭ್ರಮಾಚರಣೆ ಇರಲಿಲ್ಲ. ನಾಲ್ಕು ಜನ ಆಪ್ತರು ಮಾತ್ರ ಇಂದು ಸಿಹಿ ಹಂಚಿ, ತಿಂದು ಸಿಂಪಲ್ಲಾಗಿ ಖುಷಿಪಟ್ಟರು.
ಇದೇ ವೇಳೆ ಕೋಟಾ ಶ್ರೀನಿವಾಸ ಪೂಜಾರಿ ಪತ್ನಿ ಶಾಂತಾ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಪತಿ ಸಚಿವರಾಗಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ. ಅವರು ಸಚಿವರಾಗಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಎರಡು ಅವಧಿಯಲ್ಲಿ ಅವರು ತುಂಬಾ ಚೆನ್ನಾಗಿ ಕೆಲಸ ಮಾಡಿರುವುದರಿಂದ ಈ ಬಾರಿ ಮತ್ತೆ ಸಚಿವ ಸ್ಥಾನ ಸಿಗಬಹುದು ಎಂಬ ನಂಬಿಕೆ ಇತ್ತು ಎಂದರು.
Advertisement
Advertisement
ಸಾಲ ಮಾಡಿ ಮನೆ ಕಟ್ಟುತ್ತಿದ್ದೇವೆ
ಮನೆ ಕಟ್ಟುತ್ತಿರುವಾಗ ಜನ ಆರು ಕೋಟಿ ಮನೆ ಎಂದು ಆರೋಪ ಮಾಡಿದರು. ಆದರೆ ನಾವು ಹಾಗೆ ಇಲ್ಲ, ಸಾಲ ಮಾಡಿ 13 ಸೆಂಟ್ಸ್ ಜಾಗ ತೆಗೆದುಕೊಂಡಿದ್ದೆವು. ಈಗ ಜಾಗದ ಮೇಲೆ ಸಾಲ ಮಾಡಿ ಮನೆ ಕಟ್ಟುತ್ತಿದ್ದೇವೆ. ಆರೋಪಗಳನ್ನೆಲ್ಲ ಕೇಳುವಾಗ ಮನಸ್ಸಿಗೆ ಬಹಳ ಬೇಸರವಾಗುತ್ತದೆ, ತುಂಬಾ ನೋವಾಗುತ್ತದೆ. ಮೂರು ವರ್ಷದಿಂದ ಮನೆಯ ಕೆಲಸ ಆಗುತ್ತಿದೆ ಇನ್ನೂ ಪೂರ್ಣಗೊಂಡಿಲ್ಲ ಎಂದರು.
Advertisement
ಪತಿ ಎರಡು ಬಾರಿ ಸಚಿವರಾಗಿದ್ದಾರೆ, ದಶಕಗಳಿಂದ ಶಾಸಕರಾಗಿ ಕೆಲಸಮಾಡುತ್ತಿದ್ದಾರೆ. ಜೀವನಪೂರ್ತಿ ರಾಜಕಾರಣ ಮಾಡಿಕೊಂಡು ಬಂದವರು, ನನ್ನ ಮಗ ಸ್ವಂತ ಉದ್ಯೋಗ ಮಾಡುತ್ತಿದ್ದಾರೆ. ನಾವು ಮನೆ ಕಟ್ಟುವುದು ತಪ್ಪಾ? ನಮ್ಮ ಬಳಿ ಕೋಟಿಗಟ್ಟಲೆ ಹಣ ಇದ್ದಿದ್ದರೆ ಯಾವತ್ತೋ ಮನೆ ಕಟ್ಟುತ್ತಿದ್ದೆವು. ಐಶಾರಾಮಿ ಜೀವನ ನಡೆಸುತ್ತಿದ್ದೆವು. ಹಣ ಇದ್ದಿದ್ದರೆ ಸರಳ ಜೀವನ ನಡೆಸಬೇಕಾಗಿರಲಿಲ್ಲ ಎಂದು ಶಾಂತಾ ಕಣ್ಣೀರಿಟ್ಟರು.
Advertisement
ಎಲ್ಲರಿಗೂ ಒಳ್ಳೆಯದೇ ಮಾಡಬೇಕು, ಪತಿ ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ಮೇಲೆ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ದೇವರು ಆಯುಷ್ಯ, ಆರೋಗ್ಯ ಕೊಟ್ಟು ಕೆಲಸ ಮಾಡುವ ಶಕ್ತಿ ಸಿಗಲಿ. ನಾನು ಮೊದಲಿಂದಲೂ ಹೀಗೆ ಇದ್ದದ್ದು, ಮುಂದೆ ಹೇಗೆಯೇ ಇರುತ್ತೇನೆ. ಸಚಿವರ ಯಾವ ಕೆಲಸ ಕಾರ್ಯದಲ್ಲೂ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಸಚಿವರು ಇಲ್ಲದಂತಹ ಸಂದರ್ಭದಲ್ಲಿ ಕೆಲವು ಬೇಡಿಕೆಗಳನ್ನು ಜನ ತಂದುಕೊಡುತ್ತಾರೆ. ಅದನ್ನು ಸ್ವೀಕರಿಸಿ ಸಚಿವರಿಗೆ ಮುಟ್ಟಿಸುವುದು ಮಾತ್ರ ನನ್ನ ಕೆಲಸ. ನಾನು ಯಾರ ಪರವಾಗಿಯೂ ಕೆಲಸ ಮಾಡಿಕೊಡಿ ಎಂದು ಈವರೆಗೆ ಹೇಳಿಲ್ಲ, ಮುಂದೆಯೂ ಹೇಳುವುದಿಲ್ಲ. ಕಷ್ಟದಲ್ಲಿರುವವರಿಗೆ ಮಾತ್ರ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ ಎಂದರು.
ಅಪ್ಪ ಸಚಿವರಾಗಿದ್ದು ಖುಷಿಯಾಗಿದೆ
ಅಪ್ಪ ಸಚಿವರಾಗುತ್ತಾರೆ ಎಂದು ನಮಗೆ ಗೊತ್ತಿರಲಿಲ್ಲ. ಹಾಗಾಗಿ ನಾವು ಬೆಂಗಳೂರಿಗೆ ಹೋಗಿಲ್ಲ. ಅವರು ಕೂಡ ನಮಗೆ ಯಾವುದೇ ಮಾಹಿತಿಯನ್ನು ಕೊಟ್ಟಿಲ್ಲ. ಸಚಿವರಾಗುತ್ತಾರೆ ಎಂದು ಗೊತ್ತಿದ್ದರೆ ನಾವು ಖಂಡಿತ ಬೆಂಗಳೂರಿಗೆ ಹೋಗುತ್ತಿದ್ದೆವು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಮಗಳು ಸ್ವಾತಿ ಎಸ್.ಪೂಜಾರಿ ಹೇಳಿದರು.
ಮತ್ತೋರ್ವ ಮಗಳು ಶೃತಿ ಮಾತನಾಡಿ, ಮಾಧ್ಯಮಗಳಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಅವರ ಬಗ್ಗೆ ಚರ್ಚೆ ಇಲ್ಲದಿದ್ದರೂ, ಅವರು ಮಂತ್ರಿ ಆಗಬಹುದು ಎಂಬ ನಂಬಿಕೆಯಲ್ಲಿ ನಾನಿದ್ದೆ. ಒಳ್ಳೆ ಕೆಲಸ ಮಾಡಿದ್ದಾರೆ ಅವರ ಕೆಲಸ ನೋಡಿ ಸ್ಥಾನಮಾನ ಸಿಕ್ಕಿದೆ ಎಂದರು. ಕೋಟಾ ಗ್ರಾಮದ ಮನೆಯ ಮುಂದೆ, ಸಾಲಿಗ್ರಾಮ ಜಂಕ್ಷನ್ ನಲ್ಲಿ ಶ್ರೀನಿವಾಸ ಪೂಜಾರಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.