ಚಾಮರಾಜನಗರ: ಸಾಕು ನಾಯಿಗಳ ಸಹಾಯದಿಂದ ಉಡ ಬೇಟೆಯಾಡುತ್ತಿದ್ದ ಇಬ್ಬರು ಆರೋಪಿಗಳ ಪೈಕಿ, ಒರ್ವನನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.
ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಸಮೀಪದ ಜಾಗೇರಿಯ ರಾಶಿಬೋಳನದೊಡ್ಡಿ ಗ್ರಾಮದ ಪ್ರವೀಣ್ ಬಂಧಿತ ಆರೋಪಿ. ಮತ್ತೋರ್ವ ಆರೋಪಿಯಾದ ರಮೇಶ್ ಪರಾರಿಯಾಗಿದ್ದಾನೆ. ಮಹದೇಶ್ವರ ವನ್ಯಧಾಮ ಜಾಗೇರಿ ಅರಣ್ಯ ಪ್ರದೇಶದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರವನ್ನು ಅರಣ್ಯಾಧಿಕಾರಿಗಳು ಪರಿಶೀಲಿಸಿದಾಗ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿದೆ.
Advertisement
Advertisement
ಮೇ 20 ರಂದು ಆರೋಪಿಗಳಾದ ಪ್ರವೀಣ್ ಹಾಗೂ ರಮೇಶ್ ಅಕ್ರಮವಾಗಿ ಅರಣ್ಯದೊಳಗೆ ಪ್ರವೇಶ ಮಾಡಿ ಸಾಕು ನಾಯಿಗಳ ಮೂಲಕ ಉಡವನ್ನು ಭೇಟೆಯಾಡಿ ಸ್ಥಳದಿಂದ ಪರಾರಿಯಾಗಿದ್ದರು. ಈ ದೃಶ್ಯಗಳು ಅರಣ್ಯ ಇಲಾಖೆ ಅಧಿಕಾರಿಗಲು ಅಳವಡಿಸಿದ್ದ ಕ್ಯಾಮರದಲ್ಲಿ ಸೆರೆಯಾಗಿತ್ತು. ದೃಶ್ಯಗಳನ್ನು ಪರಿಶೀಲನೆ ನಡೆಸಿದ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಗಳಿದ್ದ ಸತ್ತೇಗಾಲ ಸಮೀಪದ ಜಾಗೇರಿಯ ರಾಶಿಬೋಳನದೊಡ್ಡಿ ತೆರಳಿ ದಾಳಿ ನಡೆಸಿದಾಗ ಪ್ರವೀಣ್ ಸಿಕ್ಕಿಬಿದಿದ್ದಾನೆ. ಆದರೆ ಈ ವೇಳೆ ರಮೇಶ್ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಆರೋಪಿ ರಮೇಶ್ ಬಂಧನಕ್ಕಾಗಿ ಕ್ರಮಕೈಗೊಂಡಿದ್ದಾರೆ.