– ಸಾಮಾಜಿಕ ಅಂತರವನ್ನೇ ಮರೆತ ಸಚಿವರು, ಶಾಸಕರು, ಸಂಸದರು.
– ಚಿಂತಾಮಣಿಯಲ್ಲಿ ಕೆ.ಸಿ.ವ್ಯಾಲಿ ನೀರಿನ ವಿಚಾರದಲ್ಲಿ ಮಾಜಿ, ಹಾಲಿ ಶಾಸಕರ ನಡ್ವೆ ಫೈಟ್
ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರುಟಹಳ್ಳಿ ಕೆರೆಗೆ ಕೆಸಿ ವ್ಯಾಲಿ ನೀರು ಹರಿಯುತ್ತಿರುವ ಹಿನ್ನೆಲೆ ಸಣ್ಣ ನೀರಾವರಿ ಇಲಾಖೆ ಸಚಿವ ಮಾಧುಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಚಿವರಿಗೆ ಕೋಲಾರ ಸಂಸದ ಮುನಿಸ್ವಾಮಿ, ಚಿಂತಾಮಣಿ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಸಾಥ್ ನೀಡಿದ್ದರು.
ಭೇಟಿ ವೇಳೆ ಸಚಿವರು, ಶಾಸಕರು ಹಾಗೂ ಸಂಸದರು ಸಾಮಾಜಿಕ ಅಂತರವನ್ನು ಮರೆತಿದ್ದರು. ಸಂಸದ ಮುನಿಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಆಗಮಿಸಿದ್ದರೆ, ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಕೂಡ ತಮ್ಮ ಬೆಂಬಲಿಗರೊಂದಿಗೆ ಗುಂಪು ಗುಂಪಾಗಿ ಆಗಮಿಸಿದ್ದು, ಸಾಮಾಜಿಕ ಅಂತರ ಪಾಲನೆ ಮಾಡಲಿಲ್ಲ.
Advertisement
Advertisement
ಸಚಿವರ ಎದುರೇ ಬಿಜೆಪಿ ಕಾರ್ಯಕರ್ತರ ಫೈಟ್: ಇದೇ ವೇಳೆ ಬಿಜೆಪಿ ಕಾರ್ಯಕರ್ತ ಸಂಸದ ಮುನಿಸ್ವಾಮಿ, ಸಚಿವರು ತಮ್ಮ ತಾಲೂಕಿಗೆ ಬರುವ ಮಾಹಿತಿಯನ್ನೇ ಕೊಟಿಲ್ಲ. ನಾವು ನಿಮಗೆ ಮತ ಹಾಕಿದ್ದು, ನೀವೇ ಹೀಗೆ ಮಾಡಿದರೇ ಹೇಗೆ ಎಂದು ಆಕ್ರೋಶ ಹೊರಹಾಕಿದ್ದರು. ಈ ವೇಳೆ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ, ಶಿವು ಪ್ರದೀಪ್ ವಿರುದ್ಧ ತಿರುಗಿಬಿದ್ದು ಮಾತಿನ ಚಕಮಕಿ ಆರಂಭಿಸಿದ್ದರು. ಅಲ್ಲದೇ ಅಂತಿಮವಾಗಿ ಎಂಪಿ ಆದವನಿಗೆ ಮಾನ ಇಲ್ಲ. ಯಾರ್ಯಾರನ್ನೋ ಜೊತೆಯಲ್ಲಿ ಇಟ್ಟುಕೊಂಡು ಬರ್ತಾನೆ ಎಂದು ಬಿಜೆಪಿ ಕಾರ್ಯಕರ್ತ ಪ್ರದೀಪ್ ಏಕವಚನದಲ್ಲೇ ತಮ್ಮದೇ ಪಕ್ಷದ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದ್ದ.
Advertisement
ಮಾಧುಸ್ವಾಮಿ ಗರಂ: ಕುರುಟಹಳ್ಳಿ ಕೆರೆಗೆ ಭೇಟಿ ನೀಡಿದ್ದ ಸಚಿವ ಮಾಧುಸ್ವಾಮಿಗೆ ಜೆಡಿಎಸ್ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಬೆಂಬಲಿತೆ ಹಾಗೂ ನೀರಾವರಿ ಹೋರಾಟಗಾರ್ತಿ ಆಯಿಷಾ ಹಲವು ಪ್ರಶ್ನೆಗಳನ್ನು ಕೇಳುತ್ತಿದ್ದರು. ಸಚಿವರ ಉತ್ತರಿಸುತ್ತಿದ್ದರೂ ಮರು ಪ್ರಶ್ನೆ ಮಾಡುತ್ತಿದ್ದ ವೇಳೆ ಗರಂ ಆದ ಸಚಿವ ಮಾಧುಸ್ವಾಮಿ ಅವರು, ‘ನಾನು ನೀನು ಹೇಳಿದ ಹಾಗೆ ಕೇಳಲು ಮಂತ್ರಿ ಆಗಿಲ್ಲ’ ಎಂದು ತಿರುಗೇಟು ನೀಡಿದರು. ಇತ್ತ ಮಾಧ್ಯಮದವರಿಗೆ ಸಚಿವ ಮಾಧುಸ್ವಾಮಿ ಪ್ರತಿಕ್ರಿಯೆ ನೀಡುವ ವೇಳೆ, ಆಯಿಷಾರನ್ನು ಉದ್ದೇಶಿಸಿ ಮಾತು ಸ್ವಲ್ಪ ಸಾಕು ಮಾಡಮ್ಮ ಎಂದು ಸಂಸದ ಮುನಿಸ್ವಾಮಿ ಹೇಳಿದರು. ಇದರಿಂದ ಮತ್ತಷ್ಟು ಕೆರಳಿದ ಆಯಿಷಾ ಸಚಿವರು ಹಾಗೂ ಸಂಸದರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದರು.
Advertisement
ನೀರಿಗಾಗಿ ಮಾಜಿ, ಹಾಲಿ ಶಾಸಕರ ರಾಜಕಾರಣ: ಚಿಕ್ಕಬಳ್ಳಾಪುರ ಜಿಲ್ಲೆಗೆ ಎಚ್.ಎನ್.ವ್ಯಾಲಿ ಹಾಗೂ ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ಯೋಜನೆಗಳನ್ನು ರಾಜ್ಯ ಸರ್ಕಾರ ಜಾರಿ ಮಾಡಿದೆ. ಹೆಬ್ಬಾಳ ನಾಗವಾರ ಕೆರೆಯ ನೀರನ್ನು ಶುದ್ಧೀಕರಿಸಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತಿದೆ. ಕೋಲಾರ ಜಿಲ್ಲೆಯ ಕೆರೆಗಳಿಗೆ ಕೆ.ಸಿ.ವ್ಯಾಲಿ ನೀರು ಹರಿಸಲಾಗುತ್ತಿದೆ. ಆದರೆ ಚಿಂತಾಮಣಿ ತಾಲೂಕಿನ 5 ಕೆರೆಗಳಿಗೆ ಕೆ.ಸಿ.ವ್ಯಾಲಿಯ ನೀರನ್ನು ಹರಿಸಲು ಸರ್ಕಾರ ಮುಂದಾಗಿದೆ. ಹೀಗಾಗಿ ಈಗಾಗಲೇ ಕುರುಟಹಳ್ಳಿ ಕೆರೆಗೆ ಕಳೆದ ಒಂದು ವಾರದಿಂದ ನೀರು ಹರಿಸಲಾಗುತ್ತಿದೆ.
ಆದರೆ ಈ ನಡುವೆ ಕೆರೆಗೆ ಭೇಟಿ ನೀಡಿದ್ದ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅವರು, ಕೆರೆಯಲ್ಲಿನ ಜಾಲಿ ಮರಗಳನ್ನು ಸ್ವಚ್ಚಗೊಳಿಸದೆ ನೀರು ಹರಿಸೋದು ಸರಿಯಲ್ಲ ಎಂದು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದರು. ಪರಿಣಾಮ ನೀರಿನ ಹರಿಯುವಿಕೆ ನಿಲ್ಲಿಸಿಲಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಈಗಾಗಲೇ ಬಿಜೆಪಿಯವರ ಜೊತೆ ಗುರುತಿಸಿಕೊಂಡಿರುವ ಮಾಜಿ ಶಾಸಕ ಎಂ.ಸಿ.ಸುಧಾಕರ್ ರೆಡ್ಡಿ ಬೆಂಬಲಿಗರೊಂದಿಗೆ ಕುರುಟಹಳ್ಳಿ ಕೆರೆ ಬಳಿ ಪ್ರತಿಭಟನಾ ಧರಣಿ ನಡೆಸಿದರು. ಸದ್ಯ ಈ ವಿಚಾರದಲ್ಲಿ ಹಾಲಿ, ಮಾಜಿ ಶಾಸಕರ ರಾಜಕಾರಣದ ಫೈಟ್ ಜೋರಾಗಿ ನಡೆಯುತ್ತಿದೆ. ಹೀಗಾಗಿ ಇಂದು ಸಚಿವ ಮಾಧುಸ್ವಾಮಿ ಕುರುಟಹಳ್ಳಿ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮಾತನಾಡಿದ ಸಚಿವರು, ಕೆರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೀವಿ. ಸಂಸದರು, ಶಾಸಕರು ಎಲ್ಲಾ ಸೇರಿ ಏನು ಮಾಡಬೇಕು ಅಂತ ತೀರ್ಮಾನ ಮಾಡುತ್ತೇವೆ ಎಂದು ಹೇಳಿ ಸ್ಥಳದಿಂದ ಹೊರಟರು.