ಮುಂಬೈ: ಕ್ರಿಕೆಟ್ ದಿಗ್ಗಜ, ದೇವರು ಖ್ಯಾತಿಯ ಸಚಿನ್ ತೆಂಡೂಲ್ಕರ್ ಅವರ ಟೆಸ್ಟ್ ವಿದಾಯದ ಪಂದ್ಯವು ಅವರ ಶತಕೋಟಿ ಭಾರತೀಯ ಅಭಿಮಾನಿಗಳಿಗೆ ಹಾಗೂ ಕ್ರೀಡಾಂಗಣದಲ್ಲಿ ಹಾಜರಿದ್ದವರಿಗೆ ಮಾತ್ರವೇ ಭಾವನಾತ್ಮಕ ಕ್ಷಣವಲ್ಲ. ಅಂದು ಭಾರತದ ವಿರುದ್ಧ ಆಡಿದ ತಂಡದ ಕೆಲವು ಆಟಗಾರರಿಗೂ ಸಹ ಇದೊಂದು ಭಾವನಾತ್ಮಕ ಕ್ಷಣವಾಗಿದೆ.
ಮಾಸ್ಟರ್ ಬ್ಲಾಸ್ಟರ್ ಅವರು ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ವೃತ್ತಿಜೀವನದ 200ನೇ ಟೆಸ್ಟ್ ಮತ್ತು ವಿದಾಯದ ಪಂದ್ಯವನ್ನು 2013ರ ನವೆಂಬರ್ 14-16ರ ನಡುವೆ ತವರು ಮೈದಾನ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಆಡಿದ್ದರು. ಸಚಿನ್ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಇಳಿದಾಗ ಮೈದಾನದಲ್ಲಿದ್ದ ವಿಂಡೀಸ್ ಆಟಗಾರರು ಮತ್ತು ಇಬ್ಬರು ಅಂಪೈರ್ ಗಳು ಗೌರವ ಸೂಚಿಸಿ ಅವರನ್ನು ಸ್ವಾಗತಿಸಿದ್ದರು. ಬಳಿಕ ಬ್ಯಾಟಿಂಗ್ ಮಾಡಿದ ತೆಂಡೂಲ್ಕರ್ ತಮ್ಮ ಅಂತಿಮ ಇನ್ನಿಂಗ್ಸ್ ನಲ್ಲಿ 74 ರನ್ ಗಳಿಸಿದ್ದರು.
Advertisement
Advertisement
ಈ ವೇಳೆ ವಿಂಡೀಸ್ ವಿರುದ್ಧದ ಭಾರತವು ಇನ್ನಿಂಗ್ಸ್ ಮತ್ತು 126 ರನ್ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು. ನಂತರ ಸಚಿನ್ ತಮ್ಮ ಪ್ರಸಿದ್ಧ ನಿವೃತ್ತಿ ಭಾಷಣ ಮಾಡಿದರು. ಇದು ನೋಡಿವರೆಲ್ಲರೂ ಕಣ್ಣೀರು ಸುರಿಸಿದರು.
Advertisement
ಈ ಕ್ಷಣವನ್ನು ನೆನೆದು ವೆಸ್ಟ್ ಇಂಡೀಸ್ನ ಆಲ್ರೌಂಡರ್ ಕಿರ್ಕ್ ಎಡ್ವರ್ಡ್ಸ್ ಮತ್ತು ಸ್ಟಾರ್ ಓಪನರ್ ಕ್ರಿಸ್ ಗೇಲ್, ಅಂದು ನಮ್ಮ ಕಣ್ಣೀರನ್ನು ತಡೆಹಿಡಿಯುವುದು ಕಷ್ಟಕರವಾಗಿತ್ತು. ಸಚಿನ್ ಕ್ರಿಕೆಟ್ ಮೈದಾನದಲ್ಲಿ ಕಾಣುವುದು ಇದು ಅಂತಿಮ ಸಮಯ ಎಂದು ತಿಳಿದು ಭಾವುಕರಾಗಿದ್ದೇವು ಎಂದು ಹೇಳಿಕೊಂಡಿದ್ದಾರೆ.
Advertisement
“ಸಚಿನ್ ಅವರ ಟೆಸ್ಟ್ ವಿದಾಯದ ಪಂದ್ಯದ ವೇಳೆ ನಾನು ವೆಸ್ಟ್ ಇಂಡೀಸ್ ತಂಡದಲ್ಲಿದ್ದೆ. ಆ ಗಳಿಗೆ ನನಗೆ ತುಂಬಾ ಭಾವನಾತ್ಮಕವಾಗಿತ್ತು. ಸಚಿನ್ ಅವರನ್ನು ಸ್ವಾಗತಿಸುವಾಗ ಗೇಲ್ ಪಕ್ಕದಲ್ಲಿ ನಾನು ಇದ್ದೆ. ಇಬ್ಬರೂ ಕಣ್ಣೀರು ಹಾಕಿದ್ದೇವು” ಎಂದು ಕಿರ್ಕ್ ಎಡ್ವರ್ಡ್ಸ್ ಹೇಳಿದ್ದಾರೆ.
ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ 1989ರ ನವೆಂಬರ್ 15ರಂದು ವಿರುದ್ಧ ನಡೆದ ಟೆಸ್ಟ್ ಪಂದ್ಯದ ಮೂಲಕ ಸಚಿನ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದರು. ಲಿಟಲ್ ಮಾಸ್ಟರ್ ಭಾರತ ಪರ ದಾಖಲೆಯ 200 ಟೆಸ್ಟ್, 463 ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಿದ್ದಾರೆ. ಸುದೀರ್ಘ ಸಮಯದಲ್ಲಿ ಟೆಸ್ಟ್ ನಲ್ಲಿ 15,921 ರನ್ ಮತ್ತು ಏಕದಿನ ಕ್ರಿಕೆಟ್ನಲ್ಲಿ 18,426 ರನ್ ಗಳಿಸಿದ್ದಾರೆ. ಇವೆರಡೂ ವಿಶ್ವ ದಾಖಲೆಗಳಾಗಿವೆ. ಜೊತೆಗೆ ಸಚಿನ್ ಅವರು ಟೆಸ್ಟ್ ನಲ್ಲಿ 51 ಹಾಗೂ ಏಕದಿನ ಪಂದ್ಯದಲ್ಲಿ 49 ಶತಕ ಸಿಡಿಸಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕಗಳನ್ನು ಗಳಿಸಿದ ಅದ್ಭುತ ದಾಖಲೆಯನ್ನು ಮಾಸ್ಟರ್ ಬ್ಲಾಸ್ಟರ್ ಹೊಂದಿದ್ದಾರೆ.