ಬೆಂಗಳೂರು: ಖಾತೆ ಬದಲಾವಣೆಯಿಂದ ಪಕ್ಷದಲ್ಲಿ ಉಂಟಾಗಿದ್ದ ಅಸಮಾಧಾನವನ್ನ ಶಮನಗೊಳಿಸುವಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಯಶಸ್ವಿಯಾಗಿದ್ದಾರೆ. ಇಂದು ಸಚಿವ ಸುಧಾಕರ್ ಮತ್ತು ಶ್ರೀರಾಮುಲು ಇಬ್ಬರನ್ನ ಕಾವೇರಿ ನಿವಾಸಕ್ಕೆ ಕರೆಸಿಕೊಂಡಿದ್ದರು. ಈ ವೇಳೆ ಇಬ್ಬರು ಸಚಿವರ ಜೊತೆಗೆ ಮಾತುಕತೆ ನಡೆಸಿ ಸಂಪುಟ ವಿಸ್ತರಣೆ ವೇಳೆ ನೋಡಿಕೊಳ್ಳೋಣ ಎಂದ ಸಿಎಂ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಸಿಎಂ ಭರವಸೆ ಹಿನ್ನೆಲೆ ಶ್ರೀರಾಮುಲು ಸಮಾಜ ಕಲ್ಯಾಣ ಇಲಾಖೆ ಖಾತೆ ಒಪ್ಪಿಕೊಂಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ತಿಳಿದು ಬಂದಿದೆ.
Advertisement
ಸಿಎಂ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶ್ರೀರಾಮುಲು, ಈ ಹಿಂದೆ ನನಗೆ ಸಮಾಜ ಕಲ್ಯಾಣ ಖಾತೆ ನೀಡಬೇಕೆಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದ್ದೆ. ಅದರಂತೆ ಸಿಎಂ ಆ ಖಾತೆಯನ್ನ ನೀಡಿದ್ದಾರೆ. ಮಾಧ್ಯಮಗಳಲ್ಲಿ ಬಿತ್ತರವಾಗಿರುವಂತೆ ಯಾವುದೇ ಅಸಮಾಧಾನ ಇಲ್ಲ. ಕೊರೊನಾ ಕಾಲದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಒಬ್ಬರೇ ಬಳಿ ಇರೋದು ಉತ್ತಮ. ಹಾಗಾಗಿ ಆರೋಗ್ಯ ಇಲಾಖೆ ಖಾತೆಯನ್ನ ಸೋದರರಾಗಿರುವ ಸುಧಾಕರ್ ಅವರಿಗೆ ನೀಡಲಾಗಿದೆ. ಸುಧಾಕರ್ ವೈದ್ಯರಾಗಿದ್ದು, ಆರೋಗ್ಯ ಇಲಾಖೆಯನ್ನ ಉತ್ತಮವಾಗಿ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
Advertisement
Advertisement
ಇದೇ ವೇಳೆ ಮಾತನಾಡಿದ ಸುಧಾಕರ್, ಬಿಹಾರ ಮತ್ತು ಉಪ ಚುನಾವಣೆ ಹಿನ್ನೆಲೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಈ ಹಿನ್ನೆಲೆ ಕೆಲ ತಾಂತ್ರಿಕೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಖಾತೆಗಳ ಬದಲಾವಣೆಯಾಗಿದೆ. ಶ್ರೀರಾಮುಲು ಅಣ್ಣನವರು ರಾಜಕೀಯದಲ್ಲಿ ನನಗಿಂತ ಹಿರಿಯರು. ಸಮಾಜ ಕಲ್ಯಾಣ ಅನ್ನೋದು ಪ್ರಬಲ ಖಾತೆ. ಮುಖ್ಯಮಂತ್ರಿಗಳ ಖಾತೆಯ ಬದಲಾವಣೆ ಬಗ್ಗೆ ಒಂದು ತಿಂಗಳಿನಿಂದ ನಮ್ಮೊಂದಿಗೆ ಚರ್ಚೆ ನಡೆಸಿದ್ದರು. ಸಮಾಜದ ಸ್ವಾಸ್ಥ್ಯವನ್ನ ಚೆನ್ನಾಗಿ ಮಾಡಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಹೊಣೆಯನ್ನ ಶ್ರೀರಾಮುಲು ಅವರಿಗೆ ನೀಡಲಾಗಿದೆ ಎಂದು ತಿಳಿಸಿದರು.