ಬೆಂಗಳೂರು: ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ರಾಷ್ಟ್ರೀಯ ನಾಯಕರು. ಅವರನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಯಾರೂ ಒಪ್ಪಿಲ್ಲ ಎಂದು ಹೇಳಲು ಬರುತ್ತಾ ಎಂದು ಸಿಟಿ ರವಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯಸಭಾ ಟಿಕೆಟ್ ಹಂಚಿಕೆ ಸಂಬಂಧ ಬಿಎಲ್ ಸಂತೋಷ್ ಅವರ ಪಾತ್ರದ ಬಗ್ಗೆ ಕೇಳಲಾದ ಪ್ರಶ್ನೆಗೆ, ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಲು ಸಂತೋಷ್ ಅವರ ಪಾತ್ರವಿದೆ. ಅದೇ ರೀತಿ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿಯವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಸಂತೋಷ್ ಅವರ ಪಾತ್ರವಿದೆ. ಹೇಗೆ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಅವರನ್ನು ನಾವು ಒಪ್ಪಿಕೊಂಡಿದ್ದೇವೋ ಅದೇ ರೀತಿಯಾಗಿ ಸಂತೋಷ್ ಅವರನ್ನು ನಾವು ಒಪ್ಪಿಕೊಂಡಿದ್ದೇವೆ ಎಂದು ಉತ್ತರಿಸಿದರು.
Advertisement
Advertisement
ನಾವು ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿ ಅಧಿಕೃತವಾಗಿ ಮಾಧ್ಯಮಗಳಿಗೆ ತಿಳಿಸಿಲ್ಲ. ನಮ್ಮ ಪಕ್ಷ ಮೊದಲಿನಿಂದಲೂ ಕೇಡರ್ ಆಧಾರಿತ ಪಕ್ಷ. ಟಿಕೆಟ್ ಸಿಕ್ಕಿರುವುದು ಅವರಿಗೂ ಅನಿರೀಕ್ಷಿತ, ನಮಗೂ ಅನಿರೀಕ್ಷಿತ. ನಮ್ಮ ಪಕ್ಷ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ ಎಂದು ತಿಳಿಸಿದರು.
Advertisement
Advertisement
ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನ ಘೋಷಣೆ ಮಾಡಿದ್ದು ನಮ್ಮ ಸಂಸದೀಯ ಮಂಡಳಿ. ಟಿಕೆಟ್ ಹಂಚಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು ರಾಜ್ಯಾಧ್ಯಕ್ಷರ ಜತೆ ನಮ್ಮ ವರಿಷ್ಠರು ಸಮಾಲೋಚಿಸಿದ್ದಾರೆ. ಈ ಸಭೆಯಲ್ಲಿ ಏನು ಚರ್ಚೆ ನಡೆದಿದೆ ಎಂದು ಹೇಳಲು ನಾನು ಪ್ರತ್ಯಕ್ಷದರ್ಶಿಯಲ್ಲ. ರಾಜಕೀಯದಲ್ಲಿ ಲಾಬಿ ಇದ್ದದ್ದೆ. ಆದರೆ ಯಾವಾಗಲೂ ಲಾಬಿ ನಡೆಯುವುದಿಲ್ಲ ಎಂದರು.
ಈಗ ಯಡಿಯೂರಪ್ಪನವರೇ ಸಿಎಂ. ಅವರ ನೇತೃತ್ವದಲ್ಲಿ ಚುನಾವಣೆ ಎದುರಿದ್ದು, ಅವರೇ ನಮ್ಮ ನಾಯಕರು. ನಾಯಕತ್ವ ವಿಚಾರದಲ್ಲಿ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಮೂಗು ಇರುವ ತನಕ ನೆಗಡಿ ಬರುತ್ತದೆ. ನೆಗಡಿ ಬಂತು ಎಂದು ಹೇಳಿ ಮೂಗನ್ನು ಕುಯ್ದುಕೊಳ್ಳಲು ಆಗುತ್ತಾ ಎಂದು ಪ್ರಶ್ನಿಸಿದರು.