– ಆಸ್ಪತ್ರೆ ಸಿಬ್ಬಂದಿ ಮೂಗು ಮುಚ್ಚಿಕೊಂಡು ಕೆಲಸ ಮಾಡ್ಬೇಕು
ಗದಗ: ಸರ್ಕಾರಿ ಆಸ್ಪತ್ರೆಗಳು ಬಡವರ ಪಾಲಿನ ಸಂಜೀವಿನಿ ಅಂತಾರೆ. ಆದರೆ ಈ ಆಸ್ಪತ್ರೆಯಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸದೆ ತುಂಬಿ ತುಳುಕುತ್ತಿದ್ದು, ನಿತ್ಯ ಮೂಗು ಮುಚ್ಚಿಕೊಂಡೇ ರೋಗಿಗಳು ಚಿಕಿತ್ಸೆ ಪಡೆಯಬೇಕು. ಆಸ್ಪತ್ರೆ ಸಿಬ್ಬಂದಿಯದು ಸಹ ಇದೇ ಕಥೆಯಾಗಿದೆ.
Advertisement
ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆ ಬಡವರ ಪಾಲಿಗೆ ಯಮಸ್ವರೂಪಿಯಾಗಿದೆ. ಆಸ್ಪತ್ರೆಯ ಶೌಚಾಲಯ ತುಂಬಿ ತುಳಕುತ್ತಿದ್ದು, ದುರ್ವಾಸನೆಯಿಂದ ಗಬ್ಬೆದ್ದು ನಾರುತ್ತಿದೆ. ಈ ಸರ್ಕಾರಿ ಆಸ್ಪತ್ರೆಯಲ್ಲಿ ಹೇಳೊರು ಕೇಳೊರು ಯಾರು ಇಲ್ಲದಂತಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಶೌಚಾಲಯ ತುಂಬಿ ಆಸ್ಪತ್ರೆ ತುಂಬೆಲ್ಲಾ ದುರ್ವಾಸನೆ ಬೀರುತ್ತಿದೆ. ಚಿಕಿತ್ಸೆ ನೀಡುವ ಸಿಬ್ಬಂದಿ ಮೂಗು ಮುಚ್ಚಿಕೊಂಡು ಚಿಕಿತ್ಸೆ ನೀಡುವಂತಾಗಿದೆ.
Advertisement
Advertisement
ಆಸ್ಪತ್ರೆಯಲ್ಲಿರುವ ಒಳ ರೋಗಿಗಳು ಮಲ-ಮೂತ್ರ ವಿಸರ್ಜನೆಗೆ ಬಸ್ ನಿಲ್ದಾಣಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ. ತೀರಾ ಅನಾರೋಗ್ಯದಿಂದ ಬಳಲುವವರು ಹಾಗೂ ಮಹಿಳೆಯರ ಪರಸ್ಥಿತಿಯಂತೂ ಹೇಳ ತೀರದು. ಹತ್ತಾರು ಸಮಸ್ಯೆಗಳ ಸರಮಾಲೆ ಈ ತಾಲೂಕು ಆಸ್ಪತ್ರೆಯಲ್ಲಿವೆ.
Advertisement
ಈ ಲಕ್ಷ್ಮೇಶ್ವರ ಆಸ್ಪತ್ರೆಗೆ ಸುತ್ತಲಿನ ಹತ್ತಾರು ಹಳ್ಳಿಯ ನೂರಾರು ಜನರು ಇಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಆದರೆ ಇಲ್ಲಿ ವೈದ್ಯರು, ಸಿಬ್ಬಂದಿ, ಔಷಧಿಗಳ ಕೊರತೆ ಎದ್ದು ಕಾಣುವುದರ ಜೊತೆಗೆ ಸ್ವಚ್ಛತೆ ಇಲ್ಲವಾಗಿದೆ. ಇಂತಹ ಆಸ್ಪತ್ರೆಯಲ್ಲಿ ಗುಣಮುಖರಾಗುವ ಬದಲು, ಹೆಚ್ಚು ರೋಗ ಸೇರುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿವೆ. ಆರೋಗ್ಯ ಅಧಿಕಾರಿಗಳು ಹಾಗೂ ಪುರಸಭೆ ಅಧಿಕಾರಿಗಳು ಮಾತ್ರ ಡೋಂಟ್ ಕೇರ್ ಅಂತಿದ್ದಾರೆ. ಅಧಿಕಾರಿಗಳ ವಿರುದ್ಧ ರೋಗಿಗಳು ಹಾಗೂ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕೂಡಲೇ ಆಸ್ಪತ್ರೆ ಸ್ವಚ್ಛತೆ ಹಾಗೂ ಇಲ್ಲಿನ ಸಮಸ್ಯೆಗಳು ಸರಿಹೋಗದಿದ್ರೆ ಉಗ್ರ ಹೋರಾಟ ಮಾಡುವುದಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.