ಉಡುಪಿ: ಸೋದೆ ಮಠಾಧೀಶರಿಂದ ಬುಧವಾರ ಶೀರೂರು ಮಠಕ್ಕೆ ನೂತನ ಪೀಠಾಧಿಪತಿ ಘೋಷಣೆ ಆಗಲಿದೆ. ನೂತನ ಪೀಠಾಧಿಪತಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ, ವೃಂದಾವನಸ್ಥ ಲಕ್ಷ್ಮಿವರ ತೀರ್ಥ ಶ್ರೀಗಳ ಸಹೋದರರಿಂದ ಆಕ್ಷೇಪ ವ್ಯಕ್ತವಾಗಿದೆ.
ಲಕ್ಷ್ಮೀವರತೀರ್ಥ ಸ್ವಾಮೀಜಿ 2018ರ ಜುಲೈ 19 ರಂದು ಸಂಶಯಾಸ್ಪದ ರೀತಿಯಲ್ಲಿ ನಿಧನರಾಗಿದ್ದರು. ಆನಂತರ ಪೀಠ ಖಾಲಿಯಿತ್ತು. ದ್ವಂದ್ವ ಮಠವಾಗಿರುವ ಸೋದೆ ಮಠ ಶಿರೂರು ಮಠದ ನಿರ್ವಹಣೆ ಮಾಡುತ್ತಿದ್ದು, ಮಠದ ವ್ಯವಹಾರ, ಆಸ್ತಿಪಾಸ್ತಿ, ತೆರಿಗೆ ನಿರ್ವಹಣೆಯಲ್ಲಿ ಪಾರದರ್ಶಕತೆ ಇಲ್ಲ. ಈ ಬಗ್ಗೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ ಎಂದು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಹೋದರ ಲಾತವ್ಯ ಆಚಾರ್ಯ ಹೇಳಿದ್ದಾರೆ.
Advertisement
Advertisement
ಪ್ರಕರಣ ನ್ಯಾಯಾಲಯದಲ್ಲಿ ಇರುವಾಗ ಪೀಠಾಧಿಪತಿ ನೇಮಕ ಸರಿಯಲ್ಲ. ಅದರಲ್ಲೂ ಎಳೆಯ ವಯಸ್ಸಿನ ವಟುವನ್ನು ನಾಳೆ ಪೀಠಕ್ಕೆ ಘೋಷಣೆ ಮಾಡುತ್ತಿದ್ದಾರೆ. ಕನಿಷ್ಠ ಹತ್ತು ವರ್ಷದ ವೇದ ಅಧ್ಯಯನ ಮಾಡಿದವರನ್ನು ಪೀಠಾಧಿಪತಿ ಮಾಡಬೇಕು. ನೂತನ ಪೀಠಾಧಿಪತಿ ನೇಮಕಕ್ಕೆ ನಮ್ಮ ಸಮ್ಮತಿ ಇಲ್ಲ. ಈ ಬಗ್ಗೆ ಅಷ್ಟ ಮಠಾಧೀಶರ ಗಮನಕ್ಕೂ ತಂದಿದ್ದೇವೆ ಎಂದರು.
Advertisement
Advertisement
ಶೀರೂರು ಶ್ರೀ ನಿಧನ ನಂತರ ಅನೇಕ ಅಪವಾದ ಬಂದವು. ಆಸ್ತಿ ವಿಚಾರದಲ್ಲಿ ವ್ಯವಹಾರ ಸರಿಯಿಲ್ಲ. ಪಾರದರ್ಶಕದ ಕೊರತೆ ಕಂಡುಬಂದಿದೆ. ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇವೆ. ಮೊಕದ್ದಮೆ ಜಾರಿಯಲ್ಲಿದೆ. 17 ವರ್ಷದ ಹುಡುಗನನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡುವುದು ಸರಿಯಲ್ಲ. 10 ವರ್ಷ ಯೋಗ್ಯ ವಿದ್ವತ್ ಬೇಕಿತ್ತು. ಸೋದೆ ಮಠದ ವ್ಯವಹಾರ ನಡೆಸುವ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಮತ್ತೋರ್ವ ಸಹೋದರ ವಾದಿರಾಜ ಆಚಾರ್ಯ ಮಾತನಾಡಿ, ದೊಡ್ಡ ಹುದ್ದೆ ಸ್ವೀಕರಿಸುವಾಗ ಜ್ಞಾನ ಪರಿಪೂರ್ಣ ಆಗಿರಬೇಕು. ಒಂದು ಕಾಲದಲ್ಲಿ ಬಾಲ ಸನ್ಯಾಸ ನಡೆದಿದೆ. ಈಗ ಒಪ್ಪಲು ತಯಾರಿಲ್ಲ. ಮೂರು ವರ್ಷದ ಹಿಂದೆ ಎಲ್ಲಾ ಪೀಠಾಧಿಪತಿಗಳ ಮಾತು ಕತೆಯಾಗಿತ್ತು. ದಾವೆ ಇರುವಾಗ ಪೀಠಾಧಿಪತಿ ನೇಮಕ ಸರಿಯಲ್ಲ ಎಂದರು. ಶೀರೂರು ಸ್ವಾಮೀಜಿ ವೃಂದಾವನಸ್ಥರಾಗಿ ಎರಡು ತಿಂಗಳೊಳಗೆ ನೂತನ ಪೀಠಾಧಿಪತಿ ನೇಮಕವಾಗಬೇಕಿತ್ತು. ಒಂದು ಪರ್ಯಾಯ ದಾಟಿ ಹೋಗಿದೆ. ಯತಿಯಿಲ್ಲದೆ ಎರಡೂವರೆ ವರ್ಷ ಕಳೆದು ಹೋದದ್ದು ಇತಿಹಾಸದಲ್ಲೇ ಇದೇ ಮೊದಲು ಎಂದರು.