– ಕಾರ್ಮಿಕರ ಮೃತದೇಹ ಛಿದ್ರ ಛಿದ್ರ
ಶಿವಮೊಗ್ಗ: ಜಿಲ್ಲೆಯಲ್ಲಿ ಗುರುವಾರ ರಾತ್ರಿ ನಡೆದಿರುವ ನಿಗೂಢ ಶಬ್ದ, ಇಡೀ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಯ ಜನರಲ್ಲೂ ಆತಂಕ ಮನೆ ಮಾಡಿತ್ತು. ನಿಗೂಢ ಶಬ್ಧ, ಭೂಕಂಪನಾ ಎಂದು ಜನರು ಮಾತನಾಡಿಕೊಳ್ಳುವ ವೇಳೆಯಲ್ಲಿಯೇ ಇದು ಶಿವಮೊಗ್ಗದ ಸಮೀಪದ ಹುಣಸೋಡು ಗ್ರಾಮದ ಬಳಿ ಇರುವ ಕ್ರಷರ್ ನಲ್ಲಿ ಒಂದು ಲಾರಿ ಲೋಡ್ ಜಿಲೆಟಿನ್ ಕಡ್ಡಿಗಳು ಒಮ್ಮೆಲೆ ಸ್ಫೋಟಗೊಂಡಿದ್ದು ಎಂಬುದು ತಿಳಿಯಿತು. ಘಟನೆಯಲ್ಲಿ 15 ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದೆ.
Advertisement
ಜನರು ನಿನ್ನೆ ರಾತ್ರಿ ಊಟ ಮಾಡಿ ಮಲಗೋ ಸಮಯ. ಹಾಸಿಗೆ ಹಾಸಿಕೊಂಡು ಮಲಗಲು ಅಣಿಯಾಗುತ್ತಿದ್ದಂತೆ, ಒಮ್ಮೆಲೆ ಕೇಳಿ ಬಂದ ಶಬ್ದ ಇಡೀ ಶಿವಮೊಗ್ಗ ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿತ್ತು. ಇದೇನು ಭೂಕಂಪನಾ ಎಂದು ತಿಳಿದುಕೊಳ್ಳುವ ಹೊತ್ತಿಗಾಗಲೇ, ಜನರು ಎದ್ನೋ ಬಿದ್ನೋ ಎಂದು ಮನೆಯಿಂದ ಹೋರ ಓಡಿ ಬಂದಿದ್ದರು. ಭೂಕಂಪನಾ ಎಲ್ಲಿ…!? ಏನೂ ಎಂದು ಮಾತನಾಡಿಕೊಳ್ಳುವ ಹೊತ್ತಲ್ಲೇ, ಶಿವಮೊಗ್ಗದ ಹುಣಸೋಡು ಗ್ರಾಮದಲ್ಲಿ ಒಂದು ಲಾರಿಯಲ್ಲಿ ತಂದಿಟ್ಟುಕೊಂಡಿದ್ದ ಸುಮಾರು 50 ಡಬ್ಬಗಳಲ್ಲಿದ್ದ ಜಿಲೆಟಿನ್ ಕಡ್ಡಿಗಳು ಒಮ್ಮೆಲೆ ಸ್ಫೋಟಗೊಂಡಿರುವುದು ಬಯಲಾಯಿತು.
Advertisement
Advertisement
ಶಿವಮೊಗ್ಗ ಸಮೀಪದ ಹುಣಸೋಡು ಗ್ರಾಮದಲ್ಲಿರುವ ಅಕ್ರಮ ಕ್ರಷರ್ ಗಳ ಮಾಫಿಯಾ ಇದೀಗ ಈ ರೀತಿ ಬಯಲುಗೊಂಡಿದ್ದು, ಅಕ್ರಮ ಕ್ರಷರ್ ಗಳಿಗೆ ಇದೀಗ ಅಧಿಕಾರಿಗಳ ತಲೆದಂಡವಾಗುವ ಎಲ್ಲಾ ಲಕ್ಷಣಗಳೂ ಕಂಡು ಬರುತ್ತಿವೆ. ಅಷ್ಟಕ್ಕೂ ನಿನ್ನೆ ರಾತ್ರಿ ಸುಮಾರು 10.30 ರ ವೇಳೆಗೆ ಕೇಳಿ ಬಂದ ಭಾರೀ ಶಬ್ದ, ಇಲ್ಲಿನ ಅಕ್ರಮ ಕ್ರಷರ್ ನಲ್ಲಿ ಜಿಲೆಟಿನ್ ಕಡ್ಡಿಗಳು ಒಮ್ಮೆಲೆ ಸ್ಫೋಟಗೊಂಡಿದ್ದು, ಭೂಮಿಯೇ ನಲುಗಿ ಹೋಗಿದೆ. ಕ್ರಷರ್ ನಲ್ಲಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಸುಮಾರು 15ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿರುವ ಬಗ್ಗೆ ಶಂಕಿಸಲಾಗಿದೆ. ಕಾರ್ಮಿಕರ ದೇಹಗಳು ಛಿದ್ರ ಛಿದ್ರವಾಗಿವೆ. ಭಾರೀ ಶಬ್ದಕ್ಕೆ ಕೆಲವು ಕಡೆಗಳಲ್ಲಿ ಕಿಟಕಿ ಗಾಜುಗಳು ಒಡೆದು ಹೋಗಿದ್ದು, ಕೆಲವು ಕಾರುಗಳ ಗಾಜುಗಳು ಒಡೆದು ಹೋಗಿವೆ ಎನ್ನಲಾಗಿದೆ.
Advertisement
ಈ ಅಕ್ರಮ ಕ್ರಷರ್ ಗಳ ಹಾವಳಿ ಇಲ್ಲಿ ಮಿತಿ ಮೀರಿದ್ದು, ಇದರಿಂದಾಗಿ ಈ ಭಾಗದ ಗ್ರಾಮಸ್ಥರು ಬೇಸರಗೊಂಡಿದ್ದಾರೆ. ಈಗಲಾದರೂ, ಅಕ್ರಮ ಕ್ರಷರ್ ಗಳು ನಿಲ್ಲಿಸುವಂತೆ ಮನವಿ ಮಾಡಿದ್ದಾರೆ. ಈಗಾಗಲೇ ಈ ಸ್ಫೋಟದಿಂದಾಗಿ ಒಂದು ಲಾರಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸುಮಾರು 15 ಕ್ಕೂ ಹೆಚ್ಚು ಬಿಹಾರ ಮತ್ತು ಪಶ್ಚಿಮ ಬಂಗಾಳ ಮೂಲದ ಕಾರ್ಮಿಕರು ಸಾವನಪ್ಪಿದ್ದು, ಇಡೀ ಪ್ರದೇಶ ಧೂಳಿನಿಂದ ಆವೃತಗೊಂಡಿದೆ. ಅಷ್ಟೇ ಅಲ್ಲ ಕ್ರಷರ್ ನಲ್ಲಿದ್ದ ಮರಗಳು ಸಂಪೂರ್ಣವಾಗಿ ಮುರಿದು ಹೋಗಿವೆ. ಸ್ಫೋಟದ ತೀವ್ರತೆಗೆ ಇಡೀ ಕ್ರಷರ್ ಸೇರಿದಂತೆ, ಅಕ್ಕಪಕ್ಕದ ಗ್ರಾಮಸ್ಥರು ನಲುಗಿ ಹೋಗಿದ್ದಾರೆ.
ಒಟ್ಟಿನಲ್ಲಿ ಅಕ್ರಮ ಕ್ರಷರ್ ನ ಸ್ಫೋಟಕ್ಕೆ ಇಡೀ ರಾಜ್ಯವಷ್ಟೇ ಅಲ್ಲ, ದೇಶವೇ, ಶಿವಮೊಗ್ಗದ ಕಡೆಗೆ ತಿರುಗಿ ನೋಡುವಂತೆ ಮಾಡಿದೆ. ಭೂಕಂಪದ ಬಳಿಕ ಈ ಸ್ಫೋಟ ಸಂಭವಿಸಿದೆಯೋ ಅಥವಾ ಭೂಕಂಪನ ಆಗಿಯೇ ಇಲ್ಲವೋ ಅಥವಾ ಭೂಕಂಪನದ ತೀವ್ರತೆಗೆ ಈ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡಿವೆಯೋ ಎಂಬುದು ತನಿಖೆ ನಡೆಸಿದ ಬಳಿಕವಷ್ಟೇ ಸತ್ಯಾಂಶ ಹೊರಬೀಳಬೇಕಿದೆ. ಏನೇ ಆಗಲಿ ಈ ಅಕ್ರಮ ಕ್ರಷರ್ ನಲ್ಲಿ ನಡೆದಿರುವ ಸ್ಪೋಟದ ಹಿನ್ನೆಲೆಯಲ್ಲಿ ಅದೆಷ್ಟು ಜನ ಅಧಿಕಾರಿಗಳ ತಲೆದಂಡವಾಗಲಿದೆಯೋ ಕಾದು ನೋಡಬೇಕಿದೆ.