ಉಡುಪಿ: ವಿದ್ಯೋದಯ ಪ್ರೌಢ ಶಾಲೆಯ ವಿದ್ಯಾರ್ಥಿ ಅನಿರುದ್ಧ್ ಸರಳತ್ತಾಯರನ್ನು ಶಿರೂರು ಮಠದ ನೂತನ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ. ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣನಾಗಿರುವ ಅನಿರುದ್ಧ್ ಸರಳತ್ತಾಯಗೆ ಈಗ ಕೇವಲ 16 ವರ್ಷಗಳು.
Advertisement
ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಉಡುಪಿಯ ಶೀರೂರು ಮಠದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಅನಿರುದ್ಧ್ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ ಸಮೀಪದ ನಿಡ್ಲೆ ಮೂಲದವರಾಗಿದ್ದು, ಮೇ 11 ರಿಂದ 14ರ ವರೆಗೆ ಪಟ್ಟಾಭಿಷೇಕ ಪ್ರಕ್ರಿಯೆ ಉತ್ತರ ಕನ್ನಡ ಜಿಲ್ಲೆಯ ಸೋಂದಾ ಮಠದಲ್ಲಿ ನಡೆಯಲಿದೆ.
Advertisement
Advertisement
ಅಷ್ಟಮಠಗಳಲ್ಲಿ ಬಾಲಸನ್ಯಾಸ ಸ್ವೀಕಾರ ಸಂಪ್ರದಾಯ ಇದೆ. ಹಿಂದಿನ ಸಂಪ್ರದಾಯದ ಪ್ರಕಾರವೇ ವಟುವಿನ ಆಯ್ಕೆ ನಡೆದಿದೆ. ಅಷ್ಟಮಠಗಳ ಯತಿಗಳಿಂದ ಸನ್ಯಾಸ ವಿಚಾರದಲ್ಲಿ ಯಾವುದೇ ಸಂವಿಧಾನ ರಚನೆಯಾಗಿಲ್ಲ. ಇಂತಿಷ್ಟೇ ವಯಸ್ಸು ಎಂಬುದು ನಿಗದಿಯಾಗಿಲ್ಲ. ಎಲ್ಲ ಯತಿಗಳ ಗಮನಕ್ಕೆ ತಂದು ಶಿಷ್ಯನ ಆಯ್ಕೆ ಮಾಡಿದ್ದೇವೆ ಎಂದು ಸ್ವಾಮೀಜಿ ಹೇಳಿದರು.
Advertisement
ಶ್ರೀ ಕೃಷ್ಣನನ್ನು ಮುಟ್ಟಿ ಪೂಜೆ ಮಾಡುವ ಆಸೆ. ಇನ್ನೂ ಹಲವು ವರ್ಷ ನಾನು ಅಧ್ಯಯನ ಮಾಡಬೇಕಾಗಿದೆ, ಹತ್ತು ವರ್ಷ ಶಿಕ್ಷಣ ಮಾಡಿದ್ದೇನೆ ಮುಂದೆ ವೇದಾಧ್ಯಯನಕ್ಕೆ ಸಮಯ ಮೀಸಲಿಡಬೇಕಾಗುತ್ತದೆ. ಗುರುಗಳ ಮಾರ್ಗದರ್ಶನದಂತೆ ವಿದ್ವಾಂಸರ ಸೂಚನೆಯಂತೆ ಪಾಠ, ಪ್ರವಚನಗಳಲ್ಲಿ ತಲ್ಲೀನನಾಗುತ್ತೇನೆ ಎಂದು ವಟು ಅನಿರುದ್ಧ್ ಹೇಳಿದರು.
ಇದೊಂದು ಅವಕಾಶ, ಮಗನಿಗೆ ಸನ್ಯಾಸ ಯೋಗ ಇದ್ದು, ಹಲವು ಕಡೆ ಜಾತಕ ತೋರಿಸಿ ಸಲಹೆ ಪಡೆದು ಈ ತೀರ್ಮಾನಕ್ಕೆ ಬರಲಾಗಿದೆ. ಶಿರೂರು ಮಠದ ಪೀಠಕ್ಕೆ ನನ್ನ ಮಗ ಉತ್ತರಾಧಿಕಾರಿ ಆಗುತ್ತೇನೆ ಎಂದರೆ ಸಂತಸವಾಗುತ್ತದೆ. ಈ ವಿಚಾರದಲ್ಲಿ ನಮ್ಮ ಕುಟುಂಬದ ಯಾವುದೇ ಒತ್ತಾಯ ಇಲ್ಲ. ಅನಿರುದ್ಧ್ ನ ಆಸಕ್ತಿಯ ಪ್ರಕಾರ ಎಲ್ಲವೂ ನಡೆಯುತ್ತಿದೆ. ನಾನು ಸನ್ಯಾಸಿ ಆಗುತ್ತೇನೆ ಎಂದಾಗ ಸಂಸಾರ ಅಂದರೆ ಏನು ಸನ್ಯಾಸತ್ವ ಎಂದರೆ ಏನು ಎಂಬ ಬಗ್ಗೆ ಮಾಹಿತಿ ನೀಡಿದ್ದೇನೆ. ನಂತರ ಕೂಡ ಆತ ತನ್ನ ಇಚ್ಛೆಯನ್ನು ಬದಲು ಮಾಡಲಿಲ್ಲ ಎಂದು ಅನಿರುದ್ಧ್ ತಂದೆ ಉದಯ ಕುಮಾರ್ ಸರಳತೆಯ ಹೇಳಿದರು.
ಈ ಸಂದರ್ಭದಲ್ಲಿ ವಟು ಅನಿರುದ್ಧ್ ತಾಯಿ ಶ್ರೀವಿದ್ಯಾ, ತಂಗಿ ಹಿರಣ್ಮಯಿ ಸೋದೆ ಮತ್ತು ಶಿರೂರು ಮಠದ ಭಕ್ತವೃಂದ ಉಪಸ್ಥಿತವಿತ್ತು. 16 ವರ್ಷದ ಬಾಲಕನಿಗೆ ಸನ್ಯಾಸತ್ವ ನೀಡಬಾರದು ಎಂದು ವೃಂದಾವನಸ್ಥರಾದ ಲಕ್ಷ್ಮೀವರತೀರ್ಥ ಸ್ವಾಮೀಜಿ ಪೂರ್ವಾಶ್ರಮದ ಸಹೋದರರು ತಗಾದೆ ಎತ್ತಿದ್ದರು. ಅವರ ಪ್ರಶ್ನೆಗಳಿಗೆ ಉತ್ತರಿಸುವ ಅಗತ್ಯ ಇಲ್ಲ ಎಂದು ಸೋದೆ ಸ್ವಾಮೀಜಿ ಹೇಳಿದ್ದಾರೆ.