ಕಾರವಾರ: ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ವಿದ್ಯಾರ್ಥಿಯ ಬದುಕೇ ಬದಲಾಗುತ್ತದೆ. ಶಿಕ್ಷಕನ ಪಾತ್ರ ಅಂತಹ ಮಹತ್ವದ್ದಾಗಿದೆ. ಆದರೆ ಶಿಕ್ಷಣಾಧಿಕಾರಿ ಕಚೇರಿಗಳು ಮಾತ್ರ ಹಾಳು ಕೊಂಪೆಯಂತೆ ಇರುವುದು ನಮ್ಮ ಅಧಿಕಾರಿಗಳ ನಿರ್ಲಕ್ಷಕ್ಕೆ ಕೈಗನ್ನಡಿಯಾಗಿದೆ. ಇದೀಗ ಶಿಕ್ಷಕರ ಕೈಚಳಕದಿಂದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಚಿತ್ರಣವೇ ಬದಲಾಗಿದೆ.
Advertisement
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಿಕ್ಷಕರು ತಮ್ಮ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಹೋಗಲು ಹೆದರುವಂತಿತ್ತು. ಬಣ್ಣವಿಲ್ಲದ ಗೋಡೆಗಳು, ಜೋತು ಬಿದ್ದ ಕಿಟಕಿಗಳು, ಕಚೇರಿಯಲ್ಲಿ ಎಲ್ಲಿ ಬೇಕೆಂದರಲ್ಲಿ ಬಿದ್ದಿರುತ್ತಿದ್ದ ಕಡತಗಳು, ಕಚೇರಿಯ ಆವರಣದ ತುಂಬ ತುಂಬಿದ ಮಟ್ಟಿಗಳು ಹೀಗೆ ಸ್ಮಷಾನದಲ್ಲಿ ನೇತು ಹಾಕಿದ ದೃಷ್ಟಿ ಗೊಂಬೆಯಂತೆ ಗೋಚರಿಸುತಿತ್ತು. ಆದರೆ ಇತ್ತೀಚೆಗೆ ವರ್ಗವಾಗಿ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ದೇವಿದಾಸ್ ಮೊಗೇರ್ ಅವರು ತಮ್ಮ ಕಚೇರಿಯನ್ನು ಬದಲಿಸುವ ಪ್ರಯತ್ನಕ್ಕೆ ಕೈ ಹಾಕಿದರು. ಇದಕ್ಕೆ ಶಿಕ್ಷಕರ ಸಂಘ ಸಹ ಸಹಕಾರ ನೀಡಿತು.
Advertisement
Advertisement
ಸರ್ಕಾರದ ಅನುದಾನವಿಲ್ಲ, ದಾನಿಗಳ ಸಹಕಾರದಲ್ಲಿ ಕೇವಲ ಸುಣ್ಣ ಬಣ್ಣ ಮಾಡಿ ಬಿಟ್ಟರೆ ಸಾಕಾಗದು, ಇಡೀ ಜಿಲ್ಲೆಗೆ ಮಾದರಿಯಾಗಬೇಕು ಎಂಬ ಹಂಬಲದಿಂದ ಲಾಕ್ಡೌನ್ ಸಂದರ್ಭದಲ್ಲಿ ಕಾಲಿ ಕುಳಿತಿದ್ದ ತಮ್ಮ ಕ್ಷೇತ್ರದ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷರನ್ನು ಕರೆಸಿ ಈ ಕುರಿತು ವಿಚಾರ ವಿನಿಮಯ ಮಾಡಿಕೊಂಡರು. ಚಿತ್ರಕಲಾ ಶಿಕ್ಷಕರಾದ ಸಂಜಯ್ ಗುಡಿಗಾರ್, ಮಹೇಶ್ ನಾಯ್ಕ, ನಾರಾಯಣ ಮೊಗೇರ, ಸಾದಿಕ್ ಶೇಖ್, ಮಂಜುನಾಥ ದೇವಾಡಿಗ, ಚನ್ನವೀರ ಹೊಸಮುನಿ ಅವರ ತಂಡ ಕೇವಲ ಕೆಂಪು ಮತ್ತು ಬಿಳಿಯ ಬಣ್ಣವನ್ನು ಬಳಸಿ ಇಡೀ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಕಂಗೊಳಿಸುವಂತೆ ಮಾಡಿದೆ.
Advertisement
ಜಿಲ್ಲೆಯ ಸಂಪ್ರದಾಯಿಕ ಜನಪದ ಕಲೆ ವರ್ಲಿ ಮತ್ತು ಕಾಲ್ಪನಿಕ ಚಿತ್ರಗಳು ಬಿರುಕು ತುಂಬಿದ್ದ ಗೋಡೆಗಳನ್ನು ಕಳೆಗಟ್ಟಿಸಿದೆ. ಹತ್ತು ದಿನಗಳ ಕಾಲ ಪ್ರೌಢಶಾಲಾ ಚಿತ್ರಕಲಾ ಶಿಕ್ಷಕರು ಯಾವುದೇ ಅಪೇಕ್ಷೆ ಇಲ್ಲದೆ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸುಂದರವಾಗಿಸಿದ್ದಾರೆ. ಸರ್ಕಾರದ ಅನುದಾನ ಬೇಡದ ಶಿಕ್ಷಕರ ಸಂಘ ಬಣ್ಣ ನೀಡಿ ಬೆಳಕಾಗುವಂತೆ ಮಾಡಲಾಗಿದೆ. ಕಚೇರಿಯ ಒಳಗೆ ಶಿಕ್ಷಕ ಸದಾಶಿವ ದೇಶಭಂಡಾರಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಸುಂದರಗೊಳಿಸಿದ್ದಾರೆ.
ಕಚೇರಿಯ ಒಳ ಗೇಟನ್ನು ಪ್ರವೇಶಿಸುತಿದ್ದಂತೆ ಶಿಕ್ಷಣವೇ ಜೀವನ, ಜಿವನವೇ ಶಿಕ್ಷಣ ಎಂಬ ಉಕ್ತಿ ಸ್ವಾಗತಿಸುತ್ತದೆ. ಗೋಡೆಗಳಲ್ಲಿ ಯೋಗ ಮುದ್ರೆಗಳು, ಅಕ್ಷರ ದಾಸೋಹ, ನಾಡಹಬ್ಬ ಮುಂತಾದ ಚಿತ್ರಗಳು ಬರುವ ಜನರ ಮನಸ್ಸನ್ನು ಕದಿಯದೇ ಇರದು. ಸರ್ಕಾರಿ ಕಚೇರಿ ಎಂದರೆ ಸರ್ಕಾರವೇ ಎಲ್ಲ ಮಾಡಬೇಕು ಎಂಬ ಧೋರಣೆ ಹೊಂದಿದ ಈ ದಿನಗಳಲ್ಲಿ ಯಾವ ಪ್ರತಿಫಲ ಹಂಬಲವಿಲ್ಲದೇ ಸರ್ಕಾರಿ ಕಚೇರಿಯನ್ನು ಬದಲಿಸಿದ ಈ ಶಿಕ್ಷಕರು ಸಮಾಜಕ್ಕೆ ಮಾದರಿಯಾಗಿದ್ದಾರೆ.