ಕೊಪ್ಪಳ: ಲಾಕ್ಡೌನ್ ಹಿನ್ನೆಲೆಯಲ್ಲಿ ಸಾಕಷ್ಟು ಕುಟುಂಬಗಳು ಸಂಕಷ್ಟವನ್ನು ಎದುರಿಸುತ್ತಿವೆ. ಕುಟುಂಬಗಳನ್ನು ನಡೆಸಲು ಆಗದಂತ ಪರಿಸ್ಥಿತಿಯಲ್ಲಿ ಪಾಲಕರಿದ್ದಾರೆ. ಆದರೆ ಇಲ್ಲಿನ ಕೆಲ ಮಕ್ಕಳ ಗುಂಪು ಪ್ರತಿ ದಿನವೂ ರಾಜ್ಯ ಹೆದ್ದಾರಿಯಲ್ಲಿ ಮಲ್ಲಿಗೆ ಹೂ ಮಾರಿಕೊಂಡು ಬರುವ ಲಾಭದಲ್ಲಿಯೇ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ.
ಕೊಪ್ಪಳದ ಗಂಗಾವತಿ ತಾಲೂಕಿನ ಆಗೋಲಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಈ ಮಕ್ಕಳು ಹೂ ಮಾರುತ್ತಿದ್ದಾರೆ. ಪ್ರಾಥಮಿಕ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದ ಈ ಮಕ್ಕಳು ಸದ್ಯ ಶಾಲೆಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಹಾಗೂ ಲಾಕ್ಡೌನ್ ಇರುವ ಕಾರಣ ಕುಟುಂಬದ ಹೊಣೆ ಹೊರಲು ಮುಂದಾಗಿದ್ದಾರೆ. ಪ್ರತಿ ದಿನ ಗ್ರಾಮದಿಂದ 20ಕ್ಕೂ ಅಧಿಕ ಮಕ್ಕಳು ಮಲ್ಲಿಗೆ ಹೂ ಮಾರಲು ಗ್ರಾಮದಿಂದ 15 ಕಿ.ಮೀ ದೂರವಿರುವ ದಾಸನಾಳ ಗ್ರಾಮ ಸಮೀಪದ ರಾಜ್ಯ ಹೆದ್ದಾರಿಗೆ ಆಗಮಿಸುತ್ತಾರೆ.
Advertisement
Advertisement
ಆಗೋಲಿ ಗ್ರಾಮದಲ್ಲಿಯೇ ಇರುವ ಮಲ್ಲಿಗೆ ಹೂ ತೋಟದಲ್ಲಿ ಮಾಲೀಕರಿಂದ ಕೆ.ಜಿಗಳ ಆಧಾರದ ಬಿಡಿಯಾಗಿರುವ ಮಲ್ಲಿಗೆ ಹೂವನ್ನು ಖರೀದಿಸಿ ನಂತರ ಬಿಡಿಯಾಗಿರುವ ಹೂವನ್ನು ಕಟ್ಟಿಕೊಂಡು ಬೆಳಗ್ಗಿನ ಜಾವದಲ್ಲಿಯೇ ಆಗೋಲಿ ಗ್ರಾಮವನ್ನು ಬಿಟ್ಟು, ಬೆಳಗ್ಗೆ 9 ಗಂಟೆಗಾಗಲೇ ದಾಸನಾಳ ಗ್ರಾಮದ ರಸ್ತೆಗಳಲ್ಲಿ ಹೂ ಮಾರಲು ಮುಂದಾಗುತ್ತಾರೆ. ರಸ್ತೆಯಲ್ಲಿ ಹಾದು ಹೋಗುವ ಕಾರು, ಲಾರಿ, ಬೈಕ್ಗಳನ್ನು ತಡೆದು ಹೂ ಮಾರುವ ಕಾಯಕವನ್ನು ಮಕ್ಕಳು ಮಾಡುತ್ತಿದ್ದಾರೆ. ಈಗಾಗಲೇ ಕಳೆದ 40 ದಿನಗಳಿಂದ ಹೂ ಮಾರಾಟ ಮಾಡುತ್ತಿದ್ದು, ಪ್ರತಿ ದಿನ ದೊರೆಯುವ ಕೊಂಚ ಲಾಭದಲ್ಲಿ ಬದುಕು ಕಟ್ಟಿಕೊಳ್ಳಲು ಮುಂದಾಗಿದ್ದಾರೆ.
Advertisement
Advertisement
150 ರೂಗಳಿಗೆ ಕೆ.ಜಿ. ಹೂ: ನೇರವಾಗಿ ಹೂ ತೋಟಗಳಿಗೆ ಭೇಟಿ ನೀಡುವ ಈ ಮಕ್ಕಳು ಪ್ರತಿ ಕೆ.ಜಿ. ಹೂವಿಗೆ 150 ರೂಗಳನ್ನು ನೀಡಿ, ಖರೀದಿ ಮಾಡಿಕೊಂಡು ಆಗಮಿಸುತ್ತಾರೆ. ಅವುಗಳನ್ನು ಮನೆಯಲ್ಲಿ ಕಟ್ಟಿಕೊಂಡು, ಮಲ್ಲಿಗೆ ಹೂವಿಗೆ ಅಲಂಕಾರಕ್ಕಾಗಿ ಬಣ್ಣವನ್ನು ಹಾಕಿಕೊಂಡು ಬುಟ್ಟಿಯಲ್ಲಿ ಮಾರಲು ಆಗಮಿಸುತ್ತಾರೆ. ಪ್ರತಿ ಕೆ.ಜಿ. ಮಲ್ಲಿಗೆ 40 ರಿಂದ 45 ಮೊಳ ಹೂ ದೊರೆಯುತ್ತಿದ್ದು, ಪ್ರತಿ ಮೊಳಕ್ಕೆ 5 ರೂ.ಗಳಂತೆ ಮಾರಾಟ ಮಾಡುತ್ತಾರೆ. 1 ಕೆ.ಜಿ. ಮಲ್ಲಿಗೆ ಹೂ ಮಾರಾಟ ಮಾಡಿದರೆ ಮಕ್ಕಳಿಗೆ ಖರ್ಚು ತೆಗೆದು 80 ರಿಂದ 100 ರೂ.ಗಳ ಲಾಭ ಗಳಿಸುತ್ತಾರೆ. ಹೀಗೆ ಪ್ರತಿ ದಿನ ಮಕ್ಕಳು ಮಲ್ಲಿಗೆ ಹೂ ಮಾರಾಟ ಮಾಡುವ ಮೂಲಕ ಕುಟುಂಬ ಕಷ್ಟಗಳ ನಿವಾರಣೆಗೆ ಅಳಿಲು ಸೇವೆಯನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ಆಶಾ ಕಾರ್ಯಕರ್ತೆಯರಿಗೆ ಬಾಗಿನ, ಚಿನ್ನದ ಮೂಗುತಿ ಗಿಫ್ಟ್ ಕೊಟ್ಟ ಯುವಕ