– ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆಯಲ್ಲೂ ತಾತ್ಕಾಲಿಕ ಚಿತಾಗಾರ
– ನೂತನ ಚಿತಾಗಾರ ಪರಿಶೀಲಿಸಿದ ಸಚಿವರು
ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಜಯಪುರ ಸಮೀಪದ ಕೋರಮಂಗಲ ಗ್ರಾಮದ ಸರ್ವೆ ನಂ. 54 ರಲ್ಲಿ ನಿರ್ಮಾಣವಾಗುತ್ತಿರುವ ನೂತನ ತಾತ್ಕಾಲಿಕ ಚಿತಾಗಾರ ಕಾಮಗಾರಿಯನ್ನು ಸಚಿವ ಆರ್.ಅಶೋಕ್ ಪರಿಶೀಲಿಸಿದರು.
ಕೋವಿಡ್ ಸೆಂಟರ್ ಗಳಲ್ಲೇ ಆಕ್ಸಿಜನ್ ವ್ಯವಸ್ಥೆ ಮಾಡಿದರೆ ಆಸ್ಪತ್ರೆಗೆ ದಾಖಲಾಗುವ ಪ್ರಮೇಯ ಇರುವುದಿಲ್ಲ. ಐಸಿಯು ಬೇಕಾದಲ್ಲಿ ಮಾತ್ರ ಆಸ್ಪತ್ರೆಗೆ ಹೋಗಿ. ಇಂತಹ ಒಂದು ಸುವ್ಯವಸ್ಥೆ ನಾಳೆ ದೇವನಹಳ್ಳಿಯಲ್ಲಿ ಆಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ತಿಳಿಸಿದರು.
Advertisement
Advertisement
ಕೊರೊನಾ ಮಹಾಮಾರಿ ಕರ್ನಾಟಕ ರಾಜ್ಯದಲ್ಲೂ ಹೆಚ್ಚಿನ ಪರಿಣಾಮ ಬೀರಿದೆ. ಸಾವು ನೋವುಗಳು ಹೆಚ್ಚಾಗುತ್ತಿದೆ. ಯಾವುದೇ ಸಾವಾದರೂ ಸುಡಬೇಕು ಎನ್ನುವ ಕಾರಣಕ್ಕೆ ಚಿತಾಗಾರಕ್ಕೆ ಹೆಚ್ಚು ಶವಗಳು ಬರುತ್ತಿವೆ. ತಾಲೂಕಿನಲ್ಲಿ ಆಕಾಶ್ ಮೆಡಿಕಲ್ ಆಸ್ಪತ್ರೆ ಇರುವ ಕಾರಣ ಈ ಪರಿಸ್ಥಿತಿಯಲ್ಲಿ ಸದ್ಯಕ್ಕೆ ತಾತ್ಕಾಲಿಕವಾಗಿ ಕೋರಮಂಗಲ ಗ್ರಾಮದಲ್ಲಿ ಚಿತಾಗಾರ ವ್ಯವಸ್ಥೆ ಮಾಡಲಾಗಿದೆ. ಮೃತರ ಧರ್ಮದ ಪ್ರಕಾರ ಶವಸಂಸ್ಕಾರ ಮಾಡಲು ಅಣಿವು ಮಾಡಿಕೊಡುತ್ತಿದ್ದು, ಮುಂದಿನ ದಿನಗಳಲ್ಲಿ ಇದನ್ನು ಗ್ರಾ.ಪಂ. ಗೆ ಹಸ್ತಾಂತರ ಮಾಡಿದ ಮೇಲೆ ಶವ ಹೂಳುವ ಸಂಪ್ರದಾಯ ಇರುವವರಿಗೂ ಇಲ್ಲಿ ಸ್ಮಶಾನದ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದರು.
Advertisement
Advertisement
ತಾವರೆಕೆರೆ, ಆನೇಕಲ್ ನಲ್ಲಿಯೂ ಚಿತಾಗಾರ ವ್ಯವಸ್ಥೆ ಕಲ್ಪಿಸುತ್ತಿದ್ದು, ದೊಡ್ಡಬಳ್ಳಾಪುರ, ನೆಲಮಂಗಲ, ಹೊಸಕೋಟೆ ಹೀಗೆ ಪ್ರತಿ ತಾಲೂಕಿನಲ್ಲಿ ಚಿತಾಗಾರ ವ್ಯವಸ್ಥೆ ತಾತ್ಕಾಲಿಕವಾಗಿ ಮಾಡಲಾಗುತ್ತಿದೆ. ಶವ ಸಂಸ್ಕಾರಕ್ಕೆ ಪರದಾಡುವ ಪರಿಸ್ಥಿತಿ ಯಾವ ಕುಟುಂಬಕ್ಕೂ ಬಾರದಿರಲಿ ಎಂಬ ಕಾಳಜಿ ಇದೆ. ಶವ ತರುವ ಅಂಬ್ಯುಲೆನ್ಸ್ ಸಹ ಉಚಿತವಾಗಿ ಕಾರ್ಯ ನಿರ್ವಹಿಸುವಂತೆ ನಾಳೆ ಆದೇಶ ನೀಡಲಿದ್ದೇನೆ ಎಂದು ತಿಳಿಸಿದರು.
ಯಾವುದೇ ಆಸ್ಪತ್ರೆಯ ಸಿಬ್ಬಂದಿ ಕೊರೊನಾ ರೋಗಿಗಳಿಗೆ ಬೆಡ್ ಇದ್ದರೂ ನೀಡದೆ ಕರ್ತವ್ಯ ಲೋಪ ಎಸಗಿದರೆ ನೋಟಿಸ್ ಸಹ ನೀಡದೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ಆಕ್ಸಿಜನ್ ವ್ಯವಸ್ಥೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಕೋವಿಡ್ ಸೆಂಟರ್ ಗಳಲ್ಲೂ ಮಾಡಲು ದೇವನಹಳ್ಳಿಯಲ್ಲಿ ನಾಳೆ ಚಾಲನೆ ನೀಡುತ್ತಿರುವುದಾಗಿ ತಿಳಿಸಿದರು. ತಹಶೀಲ್ದಾರ್ ಅನಿಲ್ ಕುಮಾರ್ ಮಾತನಾಡಿ, ಸಚಿವರು ಮತ್ತು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪ್ರತಿ ತಾಲೂಕಿನಲ್ಲಿ ಚಿತಾಗಾರ ಮಾಡಬೇಕೆಂಬ ಸೂಚನೆ ಇದ್ದು, ದೇವನಹಳ್ಳಿ ತಾಲೂಕಿನ ವಿಜಯಪುರ ಸಮೀಪದ ಕೋರಮಂಗಲ ಗ್ರಾಮದಲ್ಲಿ ಚಿತಾಗಾರ ವ್ಯವಸ್ಥೆ ಮಾಡುತ್ತಿದ್ದು, ಒಂದು ಬಾರಿಗೆ 10 ಶವಗಳನ್ನು ಸುಡುವ ಅವಕಾಶವಿದೆ.
ವಾಹನ ಮತ್ತು ಸಿಬ್ಬಂದಿ ಶವವನ್ನು ಪ್ಯಾಕ್ ಮಾಡಿ ತಂದು ದಹನ ಮಾಡಿ ಚಿತಾಭಸ್ಮ ತಲುಪಿಸುವ ಕಾರ್ಯ ಮಾಡುತ್ತಾರೆ. ಇದು ಗ್ರಾಮದ ಹೊರವಲಯದಲ್ಲಿದ್ದು, ಗ್ರಾಮಸ್ಥರಿಗೆ ಯಾವುದೇ ತೊಂದರೆ ಇಲ್ಲ. ಚಿತಾಗಾರ ಎಲ್ಲಾ ಸುವ್ಯವಸ್ಥೆ ಹಾಗೂ ನಿಯಮ ಪಾಲನೆಗಳನ್ನು ಅನುಸರಿಸಿ ನಿರ್ಮಾಣವಾಗುತ್ತಿದೆ ಎಂದು ತಿಳಿಸಿದರು.