ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಇಚ್ಚಂಗಿ ಗ್ರಾಮದ ಶ್ರೀ ಶಿವಾನಂದ ಮಠದ ಶರಣಮ್ಮನವರು(ಪಾರ್ವತೆಮ್ಮನವರು) ಇಂದು ಲಿಂಗೈಕ್ಯರಾಗಿದ್ದಾರೆ.
ಶರಣಮ್ಮನವರಿಗೆ ಸುಮಾರು 105 ವರ್ಷ ವಯಸ್ಸಾಗಿತ್ತು. ಹೀಗಾಗಿ ವಯೋಸಹಜ ಖಾಯಿಲೆಯಿಂದ ಶಿವಾನಂದ ಮಠದ ಶರಣಮ್ಮನವರು ಶುಕ್ರವಾರ ಬೆಳಗ್ಗೆ ಲಿಂಗೈಕ್ಯರಾಗಿದ್ದಾರೆ. ಕಳೆದ 65 ವರ್ಷಗಳ ಹಿಂದೆಯೇ ಸಂಸಾರ ತ್ಯಜಿಸಿ, ಗದಗ ಶಿವಾನಂದ ಮಠದ ಜಗದ್ಗುರುಗಳಿಂದ ಧೀಕ್ಷೆ ಪಡೆದಿದ್ದ ಅಮ್ಮನವರು, ಅಪಾರ ಭಕ್ತ ಸಮೂಹವನ್ನು ಹೊಂದಿದ್ದರು. ತಮ್ಮ ಇಡೀ ಬದುಕನ್ನೇ ಸಮಾಜ ಸೇವೆಗಾಗಿ ಮುಡುಪಾಗಿಟ್ಟಿದ್ದರು.
Advertisement
ಇಚ್ಚಂಗಿ ಗ್ರಾಮದಲ್ಲಿ ಶ್ರೀ ಶಿವಾನಂದರ ಆಶ್ರಮವನ್ನು ಸ್ಥಾಪಿಸಿ, ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಅವ್ಯಾಹತವಾಗಿ ನಡೆಸಿಕೊಂಡು ಬಂದಿದ್ದರು. ಆಶ್ರಮದಲ್ಲಿ ಎರಡು ಹೊತ್ತು ಪೂಜೆ ನಡೆಸಿಕೊಂಡು ಬಂದಿದ್ದ ಅಮ್ಮನವರು, ಭಜನಾ ತಂಡಗಳನ್ನು ಕಟ್ಟಿಕೊಂಡು ಊರೂರು ಸುತ್ತಿ ಧಾರ್ಮಿಕ ಪ್ರಚಾರ ಕೈಗೊಂಡಿದ್ದರು. ಆರೂಢ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿದ್ದ ಅಮ್ಮನವರು ಭಕ್ತರಲ್ಲಿ ಆ ತತ್ವಗಳನ್ನು ತುಂಬಿದ್ದರು.
Advertisement
ಗದಗ ಜಗದ್ಗುರು ಶಿವಾನಂದರ ಮಠ, ಹುಬ್ಬಳ್ಳಿಯ ಸದ್ಗುರು ಸಿದ್ಧಾರೂಢ ಮಠ, ಐರಣಿ ಹೊಳೆಮಠಗಳ ಜೊತೆ ಧಾರ್ಮಿಕ ಒಡನಾಟ ಹೊಂದಿದ್ದ ಅಮ್ಮನವರು, ಗುರು-ವಿರಕ್ತ ಸಂಪ್ರದಾಯದ ಮಠಗಳ ಸ್ವಾಮೀಜಿಗಳನ್ನು ಆಶ್ರಮಕ್ಕೆ ಕರೆಯಿಸಿ ಧಾರ್ಮಿಕ ಭೋದನೆ ಮಾಡಿಸಿದ್ದರು. ಇಚ್ಚಂಗಿ ಸುತ್ತಮುತ್ತ ಯಾರೇ ಪೂಜ್ಯರು ಆಗಮಿಸಿದ್ದರೂ ಭಕ್ತರ ತಂಡ ಕರೆದುಕೊಂಡು ಹೋಗಿ ದರ್ಶನಾಶೀರ್ವಾದ ಮಾಡಿಸಿಕೊಂಡು ಬರುತ್ತಿದ್ದರು.
Advertisement
ಕಷ್ಟ ಹೇಳಿಕೊಂಡು ಯಾರೇ ಆಶ್ರಮಕ್ಕೆ ಬಂದರೂ ಸಂತೈಸಿ, ಮಾನಸಿಕ ಸ್ಥೈರ್ಯ ತುಂಬುತ್ತಿದ್ದರು. ಪ್ರತಿ ಸೋಮವಾರ ಆಶ್ರಮದಲ್ಲಿ ತಪ್ಪದೇ ಭಜನೆ ನಡೆಸಿಕೊಂಡು ಬಂದಿದ್ದರು. ಗದಗ ಜಿಲ್ಲೆ ರೋಣ ತಾಲೂಕಿನ ಕುರುಡಗಿ ಗ್ರಾಮದ ಪ್ರತಿಷ್ಠಿತ ಜಕ್ಕನಗೌಡರ ಮನೆತನದ ಮಲ್ಲನಗೌಡರನ್ನು ಮದುವೆಯಾಗಿ ಸಂಸಾರ ನಡೆಸಿದ್ದ ಅವರು, ಯಾವುದೋ ಕಾರಣಕ್ಕೆ ಸಂಸಾರ ಬೇಸರವೆನಿಸಿ ಆಸ್ತಿ, ಅಂತಸ್ತು, ಮನೆ ಬಿಟ್ಟು ಸನ್ಯಾಸ ಧೀಕ್ಷೆ ಪಡೆದಿದ್ದರು.
Advertisement
ಪಂಚ ಪೀಠಗಳ ಜಗದ್ಗುರುಗಳ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಅಮ್ಮನವರು ಜಗದ್ಗುರುಗಳ ಉತ್ಸವ ಕಾರ್ಯಗಳಲ್ಲಿ ತಪ್ಪದೇ ಭಾಗಿಯಾಗುತ್ತಿದ್ದರು. ಯಾರೇ ಪೂಜ್ಯರು ಲಿಂಗೈಕ್ಯರಾದರೂ ಭಜನಾ ತಂಡಗಳನ್ನು ಕಟ್ಟಿಕೊಂಡು ಹೋಗಿ ಸೇವೆ ಮಾಡುತ್ತಿದ್ದರು. ಶರಣಮ್ಮನವರು ಪೂರ್ವಾಶ್ರಮದ ಏಳು ಜನ ಪುತ್ರಿಯರು, ಮೊಮ್ಮಕ್ಕಳು ಸೇರಿದಂತೆ ಅಪಾರ ಭಕ್ತ ಸಮೂಹವನ್ನು ಅಗಲಿದ್ದಾರೆ. ಇಚ್ಚಂಗಿ ಶಿವಾನಂದರ ಆಶ್ರಮದ ಶ್ರೀ ಶರಣಮ್ಮನವರು ಲಿಂಗೈಕ್ಯರಾಗಿದ್ದಕ್ಕೆ ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.