ಹಾಸನ: ಬೆಂಗಳೂರಿನ ಕೆ ಜಿ ಹಳ್ಳಿಯಲ್ಲಿ ನಡೆದ ಗಲಾಟೆಯ ಬಗ್ಗೆ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.
ಹಾಸನದ ಹೊಳೆನರಸೀಪುರದಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಸಮಸ್ಯೆ ಇದ್ದಾಗ ಪೊಲೀಸರು, ಶಾಸಕರ ಜೊತೆ ಕುಳಿತು ಮಾತನಾಡಬೇಕು. ಯಾರೂ ಕೂಡ ಕಾನೂನನ್ನು ಕೈಗೆತ್ತಿಗೊಳ್ಳಬಾರದು. ವಿವಾದಿತ ಪೋಸ್ಟ್ ಹಾಕಲು ಫೇಸ್ ಬುಕ್ ಹ್ಯಾಕ್ ಆಗಿದೆ ಅಂತಿದ್ದಾರೆ. ಅದನ್ನು ನಾನು ಮಾಧ್ಯಮದಲ್ಲಿ ನೋಡಿದ್ದೇನೆ. ಯಾರೇ ಜನರು ಕಾನೂನು ಕೈಗೆತ್ತಿಕೊಳ್ಳಬಾರದು. ಕೋವಿಡ್ ಸಂದರ್ಭದಲ್ಲಿ ಕೆಲವೊಬ್ಬರು ಭಯದಿಂದ ಗಲಾಟೆ ಮಾಡಿದ್ರು. ಅದನ್ನು ಸರ್ಕಾರ ನಿಯಂತ್ರಿಸಿತು. ಅದೇ ರೀತಿ ಈಗ ಸರ್ಕಾರ ಪರಿಸ್ಥಿತಿ ನಿಯಂತ್ರಿಸಲಿದೆ ಎಂದಿದ್ದಾರೆ.
Advertisement
Advertisement
ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣ, ಸಾರ್ವಜನಿಕರ ಆಸ್ತಿಗೆ ಹಾನಿಯಾಗುವ ಕೆಲಸ ಯಾರೂ ಮಾಡಬಾರದು. ರಾಜ್ಯದಲ್ಲಿ ಶಾಂತಿ ಕಾಪಾಡೋದು ಮುಖ್ಯ. ಜನರ ಸಾವುನೋವಿಗೆ ಯಾರೂ ಕಾರಣ ಆಗಬಾರದು. ಪೊಲೀಸರ ಜೊತೆ ಕುಳಿತು ಮಾತನಾಡಿ ಸಮಸ್ಯೆ ಹೇಳಿಕೊಳ್ಳಬೇಕು. ಈ ರೀತಿ ದಾಂಧಲೆ ಮಾಡಬಾರದು. ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದು ಕೆಟ್ಟ ಸನ್ನಿವೇಶ. ನಮ್ಮ ರಾಜ್ಯ ಶಾಂತಿಪ್ರಿಯ ರಾಜ್ಯವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತೆ ಎಂಬ ಬಗ್ಗೆ ನಾನು ಮಾತನಾಡಲ್ಲ. ಆದರೆ ಸಾರ್ವಜನಿಕರ ಆಸ್ತಿಗೆ ಹಾನಿಯಾಗುವ ಕೆಲಸ ಯಾರೂ ಮಾಡಬಾರದು ಎಂದು ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.