ಚಾಮರಾಜನಗರ: ವಿದ್ಯುತ್ ಸ್ಪರ್ಶದಿಂದ ನೆಲಕ್ಕುರುಳಿದ್ದ ಎರಡು ರಣ ಹದ್ದುಗಳಿಗೆ ಚಿಕಿತ್ಸೆ ಕೊಡಿಸಿ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ಅವರು ಮಾನವೀಯತೆ ಮೆರೆದಿದ್ದಾರೆ.
ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ಅವರ ನಿವಾಸದ ಬಳಿ, ಮಂಗಳವಾರ ಸಂಜೆ ವಿದ್ಯುತ್ ತಂತಿಯ ಸ್ಪರ್ಶದಿಂದ ಎರಡು ಹದ್ದುಗಳು ನೆಲಕ್ಕೆ ಬಿದ್ದು ನಿತ್ರಾಣಗೊಂಡಿದ್ದವು. ತಮ್ಮ ನಿವಾಸದ ಪಕ್ಕದಲ್ಲೇ ಹದ್ದುಗಳು ನಿತ್ರಾಣಗೊಂಡಿದ್ದನ್ನು ಕಂಡ ಎಸ್ಪಿ ದಿವ್ಯ ಸಾರಾ ಥಾಮಸ್ ಅವರು ತಕ್ಷಣ ತಮ್ಮ ವಾಹನದಲ್ಲಿದ್ದ ಗನ್ ಮ್ಯಾನ್ ಸಹಾಯದೊಂದಿಗೆ ಹದ್ದುಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಸಮೀಪದಲ್ಲೇ ಇದ್ದ ಶ್ವಾನ ವೈದ್ಯ ಡಾ.ಮನೋಹರ್ ಅವರ ಕ್ಲಿನಿಕ್ ನಲ್ಲಿ ಹದ್ದುಗಳಿಗೆ ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಯ ಬಳಿಕ ಹದ್ದುಗಳು ಚೇತರಿಸಿಕೊಂಡಿವೆ.
Advertisement
Advertisement
ಹದ್ದುಗಳ ಜೀವ ಉಳಿಸಿ ಮಹಿಳಾ ಅಧಿಕಾರಿ ಮಾನವೀಯತೆ ಮೆರೆದಿದ್ದಾರೆ. ಹದ್ದುಗಳ ಚಿಕಿತ್ಸಾ ವೆಚ್ಚವನ್ನು ಸ್ವತಃ ಎಸ್ಪಿ ದಿವ್ಯ ಸಾರಾ ಥಾಮಸ್ ಅವರೇ ಭರಿಸಿದ್ದು, ಪೊಲೀಸ್ ವರಿಷ್ಠಾಧಿಕಾರಿ ಮಾನವೀಯ ಕಾರ್ಯಕ್ಕೆ ಡಾ.ಮನೋಹರ್ ಅವರು ಮೆಚ್ಚುಗೆ ಸೂಚಿಸಿದರು. ಇದನ್ನೂ ಓದಿ: ಕಂಟೈನ್ಮೆಂಟ್ ವಲಯದಲ್ಲಿರುವ ಜಾನುವಾರುಗಳಿಗೆ ಮೇವು ವಿತರಿಸಿದ ಪೊಲೀಸರು
Advertisement
ಮಹಿಳಾ ಪೊಲೀಸ್ ಅಧಿಕಾರಿಯ ಮಾನವೀಯತೆಗೆ ಸ್ಥಳೀಯ ಜನರಿಂದಲೂ ಪ್ರಶಂಸೆ ವ್ಯಕ್ತವಾಗಿದ್ದು, ಸದ್ಯ ಎಸ್ಪಿ ನಿವಾಸದಲ್ಲೇ ಎರಡು ಹದ್ದುಗಳು ಆಶ್ರಯ ಪಡೆದಿವೆ. ಅಲ್ಲದೇ ಕೆಲವು ತಿಂಗಳ ಹಿಂದೆ ಸಂತೇಮರಹಳ್ಳಿ ಗ್ರಾಮದಲ್ಲಿ ಕೋವಿಡ್ ರೋಗಿಯೊಬ್ಬ ಆಸ್ಪತ್ರೆಯಲ್ಲಿದ್ದ ವೇಳೆ ಎಸ್ಪಿಗೆ ವಾಟ್ಸಾಪ್ ಸಂದೇಶ ಕಳುಹಿಸಿ ತಮ್ಮ ಹಸುಗಳಿಗೆ ಮೇವಿಲ್ಲ, ಮೇವು ಒದಗಿಸುವಂತೆ ಮನವಿ ಮಾಡಿದ್ದರು. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ್ದ ಎಸ್ಪಿ ಹಸುಗಳಿಗೆ ಪೊಲೀಸರ ಮೂಲಕ ಮೇವು ಒದಗಿಸಿ ಮೆಚ್ಚುಗೆ ಗಳಿಸಿದ್ದರು. ಇದನ್ನೂ ಓದಿ: ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ರಾಜಮೌಳಿ ಭೇಟಿ