ಉಡುಪಿ: ಕೊರೊನಾ ಟಾಪ್ ತ್ರೀ ಜಿಲ್ಲೆ ಉಡುಪಿಯಲ್ಲಿ ಆತಂಕದ ನಡುವೆಯೇ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭವಾಗಿದೆ. ಶಿಕ್ಷಕರು ಪೊಲೀಸರು ಆರೋಗ್ಯ ಇಲಾಖೆಯ ಕಾರ್ಯಕರ್ತರ ಸರ್ಪಗಾವಲಿನಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷೆ ಬರೆಯುವ ಮಕ್ಕಳಿಗಿಂತ ಪೋಷಕರಿಗೆ ಹೆಚ್ಚಿನ ಆತಂಕ ಕಂಡುಬಂತು.
ಉಡುಪಿ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಷ್ಟೇ ಸಂಖ್ಯೆಯಲ್ಲಿ ಪೋಷಕರು ಕೂಡ ಕಾಣಿಸಿಕೊಂಡರು. ತಮ್ಮ ಮಕ್ಕಳಿಗೆ ಧೈರ್ಯ ಹೇಳಿ ಶುಭ ಕೋರುವ ಪೋಷಕರನ್ನು ಪರೀಕ್ಷಾ ಕೇಂದ್ರದಿಂದ ಕಳುಹಿಸಲು ಪೊಲೀಸರು ಹರಸಾಹಸ ಪಟ್ಟರು. ತಮ್ಮ ವಾಹನಗಳಲ್ಲಿ ಕರೆದುಕೊಂಡು ಬಂದ ಪೋಷಕರು ಪರೀಕ್ಷಾ ಕೇಂದ್ರದ ಸುತ್ತಮುತ್ತ ಕೆಲ ಕಾಲ ಟ್ರಾಫಿಕ್ ಜಾಮ್ ಮಾಡಿದರು.
Advertisement
Advertisement
ಎಸ್ಸೆಸ್ಸೆಲ್ಸಿ ಪರೀಕ್ಷೆ 10:30ಕ್ಕೆ ನಿಗದಿಯಾಗಿದ್ದರೂ 8 ಗಂಟೆಗೆ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಆಗಮಿಸಿದ್ದರು. ಪೋಷಕರು ಹೆಚ್ಚು ಮುತುವರ್ಜಿ ವಹಿಸಿ ಮಕ್ಕಳನ್ನು ಪರೀಕ್ಷಾ ಕೇಂದ್ರಗಳಿಗೆ ಬಿಟ್ಟು ತೆರಳುವ ದೃಶ್ಯ ಸಾಮಾನ್ಯವಾಗಿತ್ತು.
Advertisement
ಪ್ರತಿ ಶಾಲೆಗಳಿಗೆ ಒಂದೊಂದು ಕೋಡ್ ಕೊಡಲಾಗಿದ್ದು ಅದರಂತೆಯೇ ಅಧಿಕಾರಿಗಳು ಮಕ್ಕಳನ್ನು ಪರೀಕ್ಷಾ ಕೇಂದ್ರದ ಒಳಗೆ ಬಿಟ್ಟುಕೊಂಡರು. ಹೆಸರು ನಮೂದು ಮಾಡಿ ಆಯಾಯ ಪರೀಕ್ಷಾ ಕೊಠಡಿಗಳತ್ತ ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು ಮಕ್ಕಳನ್ನು ಕಳುಹಿಸಿಕೊಟ್ಟರು. ಸಾಮಾಜಿಕ ಅಂತರ ಥರ್ಮಲ್ ಸ್ಕ್ಯಾನಿಂಗ್ ಮತ್ತು ಸ್ಯಾನಿಟೈಸರ್ ಬಳಸಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಗೆ ಕಳುಹಿಸಲಾಯಿತು.
Advertisement
ಎರಡು ಗಂಟೆ ಮುಂಚಿತವಾಗಿಯೇ ವಿದ್ಯಾರ್ಥಿಗಳು ಬಂದಿರುವುದರಿಂದ ಪರೀಕ್ಷೆ ನಡೆಯುವ ಕೊಠಡಿಯಲ್ಲೇ ವಿದ್ಯಾರ್ಥಿಗಳಿಗೆ ಕೊನೆಯ ಹಂತದ ತಯಾರಿ ಮಾಡಲು ಅಧಿಕಾರಿಗಳು ಶಿಕ್ಷಕರು ಅವಕಾಶ ಮಾಡಿಕೊಟ್ಟರು. ಅರ್ಧ ಗಂಟೆ ಮುಂಚಿತವಾಗಿ ವಿದ್ಯಾರ್ಥಿಗಳ ಬ್ಯಾಗ್ ಮತ್ತು ಪುಸ್ತಕಗಳನ್ನು ಸಿಬ್ಬಂದಿ ಹೊರಗೆ ಇಡುವ ವ್ಯವಸ್ಥೆ ಮಾಡಿದರು.
ವಿದ್ಯಾರ್ಥಿನಿ ರಕ್ಷಾ ಪಬ್ಲಿಕ್ ಟಿವಿ ಜೊತೆ ಮಾತಾಡಿ, ಎರಡು ತಿಂಗಳಿಂದ ಪರೀಕ್ಷೆಯ ದಿನಾಂಕದ ಬಗ್ಗೆ ಬಹಳಷ್ಟು ಗೊಂದಲ ಇತ್ತು. ಒಂದು ಬಾರಿ ಪರೀಕ್ಷೆ ಮುಗಿದರೆ ಸಾಕು ಅನ್ನುವ ಭಾವನೆ ನಮಗೂ ತಂದೆ ತಾಯಿಗೂ ಬಂದಿತ್ತು. ಮನೆಯವರಲ್ಲಿ ಕೊಂಚ ಆತಂಕ ಇದೆ. ಆದರೆ ನಾವು ಫ್ರೀ ಮೈಂಡ್ನಿಂದ ಪರೀಕ್ಷೆ ಬರೆಯುತ್ತಿದ್ದೇವೆ ಎಂದಳು.
ವಿದ್ಯಾರ್ಥಿನಿ ಪೋಷಕಿ ಲತಾ ಮಾತನಾಡಿ, ಕೊರೊನಾ ನಡುವೆ ಪರೀಕ್ಷೆ ಗೊಂದಲ ಇವತ್ತಿಗೆ ನಿವಾರಣೆಯಾಗಿದೆ. ಶಿಕ್ಷಣ ಇಲಾಖೆ ಸರಕಾರ ಎಲ್ಲ ಮುಂಜಾಗ್ರತೆ ಕ್ರಮ ಕೈಗೊಂಡಿದೆ. ಇಷ್ಟು ವಿಳಂಬ ಪರೀಕ್ಷೆ ಮಕ್ಕಳ ಮೇಲೆ ಅವರ ಫಲಿತಾಂಶದ ಮೇಲೆ ಪರಿಣಾಮ ಬೀರದಿರಲಿ ಎಂಬುದು ನಮ್ಮ ಹಾರೈಕೆ ಎಂದರು.