-ಇದು ಮ್ಯೂಸಿಕಲ್ ಹಿಟ್ ಆಗೋ ಮುನ್ಸೂಚನೆ
ಶೀತಲ್ ಶೆಟ್ಟಿ ನಿರ್ದೇಶನದ ಚೊಚ್ಚಲ ಚಿತ್ರವಾದ ‘ವಿಂಡೋ ಸೀಟ್’ ಶುಭ ಸೂಚನೆಗಳಿಂದ ಕಂಗೊಳಿಸುತ್ತಿದೆ. ಕೊರೊನಾ ಕಾಲದ ತುಂಬಾ ಜನರ ಮನಸುಗಳೆಲ್ಲವೂ ಅನಿಶ್ಚಿತತೆಯಿಂದ ಕಂಗಾಲಾಗಿತ್ತಲ್ಲಾ? ಆ ಘಳಿಗೆಯಲ್ಲಿ ಅಮೋಘ ಮನೋರಂಜನೆಯ ಸ್ಪಷ್ಟ ಸೂಚನೆಗಳೊಂದಿಗೆ ಏಕಾಏಕಿ ವಿಂಡೋ ಸೀಟ್ ಫಳಗುಟ್ಟಿತ್ತು. ಮೋಷನ್ ಪೋಸ್ಟರ್ ಒಂದರಿಂದಲೇ ಶೀತಲ್ ಕಮಾಲ್ ಮಾಡಿದ್ದರು. ಅದರ ಬೆನ್ನಿಗೇ ಲಾಂಚ್ ಆಗಿರೋ ಫಸ್ಟ್ ಲುಕ್ ಅಂತೂ ಸಮಸ್ತ ಪ್ರೇಕ್ಷಕರನ್ನೂ ಥ್ರಿಲ್ ಆಗಿಸಿ ಬಿಟ್ಟಿದೆ.
Advertisement
ಮೋಷನ್ ಪೋಸ್ಟರ್, ಫಸ್ಟ್ ಲುಕ್ಕುಗಳೆಲ್ಲ ಒಂದು ಸಿನಿಮಾದ ಪಾಲಿಗೆ ಗೆಲುವಿನ ಮೆಟ್ಟಿಲುಗಳಿದ್ದಂತೆ. ಅದರಲ್ಲಿ ಆಯ ತಪ್ಪದೆ ಸಲೀಸಾಗಿ ಹತ್ತಿ ನಿಲ್ಲುವ, ಸಾವಧಾನದಿಂದಲೇ ವಿಕ್ಟರಿ ಸಿಂಬಲ್ಲು ತೋರಿಸುವ ಛಾತಿಯೊಂದು ಕಲೆಗಾರಿಕೆ. ಅದನ್ನು ಶೀತಲ್ ಶೆಟ್ಟಿ ಮೊದಲ ಹೆಜ್ಜೆಯಲ್ಲಿಯೇ ಸಮರ್ಥವಾಗಿ ಪ್ರದರ್ಶಿಸಿದ್ದಾರೆ. ರೊಮ್ಯಾಂಟಿಕ್ ಥ್ರಿಲ್ಲರ್ ಜಾನರಿನ ಈ ಕಥನವನ್ನು ರೊಮ್ಯಾಂಟಿಕ್ ಶೈಲಿಯಲ್ಲಿಯೇ ಪ್ರೇಕ್ಷಕರಿಗೆಲ್ಲ ದಾಟಿಸಿದ್ದಾರೆ.
Advertisement
Advertisement
ಈಗಂತೂ ವ್ಯಾಪಕವಾಗಿ ಎಲ್ಲ ಕಡೆಗಳಿಂದಲೂ ಈ ಫಸ್ಟ್ ಲುಕ್ಕಿಗೆ ಪ್ರಶಂಸೆಗಳು ಕೇಳಿ ಬರಲಾರಂಭಿಸಿವೆ. ಈ ಸಿನಿಮಾದಲ್ಲಿ ಏನೋ ಇದೆ ಅನ್ನೋ ಗಾಢ ನಂಬಿಕೆ ಎಲ್ಲರಲ್ಲಿಯೂ ಮೊಳೆತುಕೊಂಡಿದೆ. ಇದು ಶೀತಲ್ ಶೆಟ್ಟಿ ಮಾತ್ರವಲ್ಲದೆ ಅವರ ಇಡೀ ತಂಡದ ಮುಖದಲ್ಲಿ ಸಂತಸ ಮಿರುಗುವಂತೆ ಮಾಡಿದೆ. ಯಾಕಂದ್ರೆ, ಈಗ ಎಲ್ಲೆಡೆ ಮನೆ ಮಾಡಿಕೊಂಡಿರೋದು ವಿಂಡೋ ಸೀಟ್ನ ಗೆಲುವಿನ ಸ್ಪಷ್ಟವಾದ ಮುನ್ಸೂಚನೆ!
Advertisement
ಹೀಗೆ ಫಸ್ಟ್ ಲುಕ್ಗೆ ಪಾಸಿಟಿವ್ ಪ್ರತಿಕ್ರಿಯೆ ಪಡಿಮೂಡಿಕೊಂಡಿರೋದರ ಹಿಂದೆ ನಿರ್ಮಾಪಕ ಜಾಕ್ ಮಂಜು ಅವರ ಅಗಾಧವಾದ ಸಿನಿಮಾ ಪ್ರೇಮವಿದೆ. ಅದಿಲ್ಲದೇ ಹೋಗಿದ್ದರೆ ವಿಂಡೋ ಸೀಟ್ ಹೀಗೆ ಗೆಲುವಿನ ಪ್ರಭಾವಳಿಯಲ್ಲಿ ಮಿರಗುಡೋದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಸಾಮಾನ್ಯವಾಗಿ ಎಲ್ಲರ ಚಿತ್ತವೂ ಅದಾಗಲೇ ಗೆದ್ದವರ ಮೇಲಿರುತ್ತೆ. ಆದರೆ ಒಂದೊಳ್ಳೆ ಕಥೆ ಹಿಡಿದು ಕಾದು ನಿಂತ ಹೊಸಬರಿಗೆ ಸಾಥ್ ನೀಡೋ ಮನಸ್ಥಿತಿಯ ನಿರ್ಮಾಪಕರ ಸಂಖ್ಯೆ ಕಡಿಮೆ. ಆ ವಿರಳರ ಸಾಲಿನಲ್ಲಿ ಜಾಕ್ ಮಂಜು ಮೊದಲಿಗರಾಗಿ ನಿಲ್ಲುತ್ತಾರೆ.
ಅಷ್ಟಕ್ಕೂ ಜಾಕ್ ಮಂಜು ಸಿನಿಮಾ ರಂಗದಲ್ಲಿ ದಶಕಗಳಿಗೂ ಹೆಚ್ಚು ಕಾಲ ಪಳಗಿಕೊಂಡಿರುವವರು. ಕಥೆಯ ಕಸುವನ್ನು ಸೂಕ್ಷ್ಮವಾಗಿ ಗ್ರಹಿಸೋ ಗುಣ ಅವರ ನಿಜವಾದ ಶಕ್ತಿ. ಅದರ ಮೂಲಕವೇ ಶೀತಲ್ ಶೆಟ್ಟಿಯವರ ವಿಂಡೋ ಸೀಟ್ ಅನ್ನವರು ನಿರ್ಮಾಣ ಮಾಡಿದ್ದಾರೆ. ಇದೀಗ ಆರಂಭಿಕವಾಗಿ ಅವರಿಟ್ಟಿದ್ದ ಭರವಸೆ ಫಸ್ಟ್ ಲುಕ್ಕಿಗೆ ಸಿಗುತ್ತಿರೋ ವ್ಯಾಪಕ ಮನ್ನಣೆಯಿಂದ ಮತ್ತಷ್ಟು ಗಟ್ಟಿಗೊಳ್ಳುತ್ತಿದೆ.
ನಿರ್ದೇಶಕಿ ಶೀತಲ್ ಶೆಟ್ಟಿ ಈ ಸಿನಿಮಾ ಬಗ್ಗೆ ಬಿಟ್ಟುಕೊಟ್ಟಿರೋ ವಿಚಾರಗಳೇ ಕಡಿಮೆ. ಅದುವೇ ಒಂದಷ್ಟು ಬೆರಗುಗಳ ಹುಟ್ಟಿಗೆ ಕಾರಣವಾಗಿರೋದು ಸುಳ್ಳಲ್ಲ. ಅದು ಸುಳ್ಳಾಗೋದೂ ಇಲ್ಲ ಅನ್ನೋದನ್ನು ಈ ಫಸ್ಟ್ ಲುಕ್ ಸಾಕ್ಷೀಕರಿಸಿದೆ. ವಿಂಡೋ ಸೀಟ್ನ ಆಚೀಚೆಯ ಅಚ್ಚರಿಗಳು ನಿಜಕ್ಕೂ ಸಾಕಷ್ಟಿವೆ. ಅದರಲ್ಲಿ ಮೊದಲ ನೋಟಕ್ಕೆ ಕಾಣಿಸೋದು ಅರ್ಜುನ್ ಜನ್ಯಾ ಸಾರಥ್ಯದ ಸಂಗೀತ. ಅದುವೇ ಈ ಸಿನಿಮಾದ ನಿಜವಾದ ಶಕ್ತಿಯಂತಿದೆ ಅನ್ನೋ ವಿಚಾರ ಫಸ್ಟ್ ಲುಕ್ಕಿನಲ್ಲಿ ತೇಲಿ ಬಂದ ಮಂದ್ರ ಸಂಗೀತದ ಫಲುಕುಗಳಲ್ಲಿಯೇ ಸ್ಪಷ್ಟವಾಗಿದೆ.
ಅರ್ಜುನ್ ಜನ್ಯಾ ಸದ್ಯ ಕನ್ನಡ ಚಿತ್ರರಂಗದ ಸ್ಟಾರ್ ಸಂಗೀತ ನಿರ್ದೇಶಕ. ಬರೀ ಸಂಗೀತ ವಿಭಾಗ ಮಾತ್ರವಲ್ಲ; ಇಡೀ ಕಥೆ ಹಿಡಿಸಿದರೆ, ಅದರಲ್ಲಿ ಹೊಸತನ ಮಿರುಗಿದಂತೆ ಕಂಡರೆ ಮಾತ್ರವೇ ಅವರು ಸಂಗೀತ ಸಾರಥ್ಯ ವಹಿಸಿಕೊಳ್ಳಲು ಒಪ್ಪಿಕೊಳ್ಳುತ್ತಾರೆ. ವಿಂಡೋ ಸೀಟ್ ಕಥೆಯನ್ನಂತೂ ಅವರು ಕೇಳಿ ಥ್ರಿಲ್ ಆಗಿದ್ದಾರಂತೆ. ಈ ಕಾರಣದಿಂದಲೇ ಅತ್ಯುತ್ಸಾಹದಿಂದ, ಎಂದಿನ ಭಕ್ತಿಯಿಂದ ಈ ಸಿನಿಮಾಗಾಗಿ ವಿಶಿಷ್ಟ ಸಂಗೀತದ ಪಟ್ಟುಗಳನ್ನ ಹಾಕಿದ್ದಾರಂತೆ. ಇದು ವಿಂಡೋ ಸೀಟ್ ಮ್ಯೂಸಿಕಲ್ ಹಿಟ್ ಆಗೋದರ ಮಧುರವಾದ ಮುನ್ಸೂಚನೆ ಎನ್ನಲಡ್ಡಿಯಿಲ್ಲ.