ಯಾದಗಿರಿ: ಜಿಲ್ಲೆಯಲ್ಲಿ ಚೀನಿ ವೈರಸ್ ಕೊರೊನಾ ನಾಗಾಲೋಟ ಮುಂದುವರಿಸಿದೆ. ಮತ್ತೊಂದೆಡೆ ವರುಣನ ಆರ್ಭಟ ಬಹಳ ಜೋರಾಗಿದೆ. ಕಳೆದ 15 ದಿನಗಳಿಂದ ವರುಣದೇವ ಅರ್ಭಟಿಸುತ್ತಿದ್ದು, ಪರಿಣಾಮ ಜಿಲ್ಲೆಯ ನಗರ ಮತ್ತು ಗ್ರಾಮೀಣ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ನಿಯಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮಗಳಲ್ಲಿನ ಮಣ್ಣಿನ ಮನೆಗಳು ಶಿಥಲಗೊಳ್ಳುತ್ತಿವೆ. ಗೋಡೆ ಕುಸಿದು ವೃದ್ಧೆ ಸಾವನ್ನಪ್ಪುತ್ತಿದ ಘಟನೆ, ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಕಂದಕೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ 65 ವರ್ಷದ ಸಾವಿತ್ರಮ್ಮ ಮನೆ ಎದುರು ಬಟ್ಟೆ ತೊಳೆಯುವ ವೇಳೆ ಗೋಡೆ ಏಕಾಏಕಿ ವೃದ್ಧೆ ಮೇಲೆ ಕುಸಿದು ಬಿದ್ದ ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
Advertisement
Advertisement
ಯಾದಗಿರಿ ಹೃದಯ ಭಾಗದಲ್ಲಿರುವ ಲುಂಬಿನಿ ಕೆರೆ 25 ವರ್ಷ ಬಳಿಕ ಮತ್ತೆ ತುಂಬಿದೆ. ಪರಿಣಾಮ ಕೆರೆಯ ಹಿನ್ನಿರಿನಲ್ಲಿರುವ ಅಂಬೇಡ್ಕರ್ ಮತ್ತು ರಾಜೀವ್ ಗಾಂಧಿ ನಗರದ ಹಲವು ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿರುವ ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳು ಸಂಪೂರ್ಣ ಜಲಾವೃತಗೊಂಡಿವೆ.
Advertisement
ಸತತ ಮಳೆಯಿಂದಾಗಿ ಜಿಲ್ಲೆಯ ಬಿಳ್ಹಾರ, ಕೊಡಲಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಕೆಸರು ಗದ್ದೆಗಳಾಗಿವೆ.ಇನ್ನು ಯಾದಗಿರಿ ನಗರಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿರುವ ರೈಲ್ವೆ ಸೇತುವೆ ಒಂದು ಭಾಗ ಸಂಪೂರ್ಣ ಕುಸಿದ್ದು, ಭಾರಿ ಅನಾಹುತ ತಪ್ಪಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪರ್ಯಾಯ ಮಾರ್ಗದಿಂದ ನಗರಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ಮಳೆಯಿಂದ ಸಾಕಷ್ಟು ಅನಾಹುತ ನಡೆದರು ಸ್ಥಳೀಯ ನಗರಸಭೆ, ಗ್ರಾಮ ಪಂಚಾಯತಿ ಮತ್ತು ಜಿಲ್ಲಾಡಳಿತ ಕಣ್ಣುಚ್ಚಿ ಕುಳಿತಿರುವುದು ಜಿಲ್ಲೆಯ ಜನರ ಅಸಮಾಧಾನಕ್ಕೆ ಕಾರಣವಾಗಿದೆ.