– ಯಾವುದೇ ದಾಖಲಾತಿ ನೀಡದಿದ್ರೂ ಆಗುತ್ತೆ ಬ್ಯಾಂಕ್ ಅಕೌಂಟ್
ಚಿಕ್ಕೋಡಿ(ಬೆಳಗಾವಿ): ನೀವೆನಾದ್ರೂ ಒಂದು ಬ್ಯಾಂಕ್ ಅಕೌಂಟ್ ಮಾಡ್ಬೇಕು ಅಂದ್ರೆ ಏನ್ಮಾಡ್ತಿರಿ ನೀಟಾಗಿ ಆಧಾರ್ ಪ್ಯಾನ್ ಕಾರ್ಡ್, ರಹವಾಸಿ ಪ್ರಮಾಣ ಪತ್ರ ಹಿಡಿದು ಬ್ಯಾಂಕಿಗೆ ಹೋಗಿ ಅಕೌಂಟ್ ಮಾಡಿಸಿಕೊಳ್ಳುತ್ತೀರಿ. ಆದರೆ ಬೆಳಗಾವಿಯಲ್ಲಿ ಇದ್ಯಾವುದು ಕೊಡದಿದ್ದರೂ ವಕೀಲರೊಬ್ಬರ ಹೆಸರಿನ ಮೇಲೆ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಅವರ ಹೆಸರಿನಲ್ಲಿ ಸಾಲವನ್ನೂ ಮಾಡಲಾಗಿದೆ. ಈಗ ವಕೀಲರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಒಂದು ಮಾಮೂಲಿ ಝೀರೋ ಬ್ಯಾಲೆನ್ಸ್ ಅಕೌಂಟ್ ಮಾಡಬೇಕಾದರೆ ಬ್ಯಾಂಕ್ ಅಧಿಕಾರಿಗಳು ಆ ಡಾಕ್ಯುಮೆಂಟ್ ಬೇಕು ಈ ಡಾಕ್ಯುಮೆಂಟ್ ಬೇಕು ಅಂತ ತಲೆ ತಿಂತಾರೆ. ಆದರೆ ಕೈಲಿ ಕಂಪ್ಲೇಂಟ್ ಕಾಪಿ ಹಿಡಿದು ನಿಂತಿರುವ ಈ ವ್ಯಕ್ತಿಯ ಹೆಸರಿನ ಮೇಲೆ ಎರಡು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಆ ಅಕೌಂಟ್ ಮೇಲೆ ಸಾಲವನ್ನು ಪಡೆದು ಮತ್ತೆ ಸಾಲ ಮರುಪಾವತಿ ಮಾಡಲಾಗಿದೆ. ರೇಣುಕಾ ಶುಗರ್ಸ್ ಕೊಕಟನೂರಿನ ಹೆಸರಿಗೆ ಸಾಲ ಮಂಜೂರು ಮಾಡಲಾಗಿದ್ದು ಅವರು ಅದನ್ನು ಮತ್ತೆ ವಾಪಸ್ ಮರುಪಾವತಿ ಮಾಡಿದ್ದಾರೆಂದು ಆರೋಪಿಸಿ ಅನ್ಯಾಯಕ್ಕೊಳಗಾದ ವಕೀಲ ಶಿವನಗೌಟ ಪಾಟೀಲ್ ಆರೋಪಿಸಿ ದೂರು ನೀಡಿದ್ದಾರೆ. ರಾಯಭಾಗದ ಕೆನರಾ ಬ್ಯಾಂಕ್ ಒಂದರಲ್ಲಿಯೇ ತಮ್ಮ ಖಾತೆ ಹಾಗೂ ವ್ಯವಹಾರವನ್ನಿಟ್ಟುಕೊಂಡಿರುವ ಶಿವನಗೌಡ ಸಿಬಿಲ್ ಹಾಕಿಸಿದಾಗ ಈ ಪ್ರಕರಣ ಹೊರಗೆ ಬಂದಿದೆ.
Advertisement
Advertisement
ಶಿವನಗೌಡ ಎಂಬವರ ಹೆಸರಿನ ಮೇಲೆ ಐಸಿಐಸಿಐ ಬ್ಯಾಂಕ್ ಚಿಂಚಲಿ ಶಾಖೆಯಲ್ಲಿ 651405009543 ಮತ್ತು 651405009721 ಅಕೌಂಟ್ ನಂಬರಿನ ಎರಡು ಫೇಕ್ ಅಕೌಂಟ್ ಕ್ರಿಯೇಟ್ ಮಾಡಲಾಗಿದೆ. ಇದೇ ಅಕೌಂಟ್ ಉಪಯೋಗಿಸಿಕೊಂಡು ಮೊದಲು 12,96,000 ರೂಪಾಯಿ ಸಾಲಕ್ಕೆ ಮನವಿ ಮಾಡಿ ಅದರಲ್ಲಿ 70,594 ರೂಪಾಯಿ ಸಾಲ ಪಡೆದು ಮತ್ತೆ ಮರುಪಾವತಿ ಮಾಡಲಾಗಿದೆ ಎಂದು ಶಿವನಗೌಡ ಪೊಲೀಸರಿಗೆ ಕೊಟ್ಟಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ಸಹ ದಾಖಲಾಗಿದೆ. ಇದು ಸಕ್ಕರೆ ಕಾರ್ಖಾನೆ ಅಧಿಕಾರಿಗಳು ಮತ್ತು ಬ್ಯಾಂಕ್ ನ ಅಧಿಕಾರಿಗಳು ಇಬ್ಬರೂ ಸೇರಿ ಮಾಡಿರುವ ಮಸಲತ್ತು ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ. ಅಲ್ಲದೆ ಇವರ ಮೇಲೆ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
Advertisement
ಹೆಬ್ಬೆಟ್ಟಿನ ಜನರನ್ನ ವಂಚಿಸೋದು ಅವರ ಹೆಸರಿನಲ್ಲಿದ್ದ ಹಣವನ್ನು ಕಬಳಿಸೋದು ನಾವು ನೀವು ಕೇಳಿದ್ವಿ. ಆದರೆ ಒಬ್ಬ ನ್ಯಾಯವಾದಿಯ ಹೆಸರಿನಲ್ಲೆ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಸಾಲ ಪಡೆದು ಅದನ್ನ ಮರುಪಾವತಿ ಮಾಡಿದ್ದು ಈಗ ಎಂಥವರನ್ನು ನಿಬ್ಬೆರಗಾಗುವಂತೆ ಮಾಡಿದೆ. ಪ್ರಕರಣ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ಸೂಕ್ತ ತನಿಖೆಯ ನಂತರ ಮತ್ತಷ್ಟು ಸತ್ಯಾಂಶ ಹೊರಬರಬೇಕಿದೆ.