ಚಾಮರಾಜನಗರ: ಕೆಲದಿನಗಳ ಹಿಂದಷ್ಟೇ ಲಾಡು ಪ್ರಸಾದದ ದರ ಏರಿಕೆ ಮಾಡಿದ್ದ ಮಲೆ ಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಇದೀಗ ಕೊರೊನಾ ಸಂಕಷ್ಟದಲ್ಲಿ ಮಹದೇಶ್ವರನ ವಿವಿಧ ಸೇವಾ ಶುಲ್ಕಗಳನ್ನು ಹೆಚ್ಚಳ ಮಾಡುವ ಮೂಲಕ ದರ ಏರಿಕೆಯ ಬರೆ ಎಳೆದಿದೆ.
Advertisement
ಜನರು ಆರ್ಥಿಕ ಸಂಕಷ್ಟದಲ್ಲಿರುವಾಗ ಹೀಗೆ ದರ ಏರಿಕೆ ಮಾಡಿರುವ ಬಗ್ಗೆ ಭಕ್ತ ಸಮೂಹದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. ಇತಿಹಾಸ ಪ್ರಸಿದ್ಧ ಮಲೈಮಹದೇಶ್ವರ ಬೆಟ್ಟದಲ್ಲಿ ಸದ್ದಿಲ್ಲದೆ ವಿವಿಧ ರೀತಿಯ ಸೇವಾ ಶುಲ್ಕಗಳನ್ನು ಏರಿಕೆ ಮಾಡಲಾಗಿದೆ. ಎಲ್ಲ ರೀತಿಯ ಸೇವೆಗಳ ದರವನ್ನು ಶೇ.30 ರಿಂದ 35 ರಷ್ಟು ಏರಿಕೆ ಮಾಡುವ ಮೂಲಕ ಮಹದೇಶ್ವರ ಬೆಟ್ಟ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಶಾಕ್ ನೀಡಿದೆ.
Advertisement
Advertisement
ಪ್ರಸ್ತುತ 2,501 ರೂಪಾಯಿ ಇದ್ದ ಚಿನ್ನದ ತೇರಿನ ಸೇವಾ ದರವನ್ನು 3,001 ರೂ.ಗೆ ಏರಿಕೆ ಮಾಡಲಾಗಿದೆ. ಮಹಾ ರುದ್ರಾಭಿಷೇಕ, ಹುಲಿವಾಹನ, ಬಸವ ವಾಹನ, ರುದ್ರಾಕ್ಷಿ ಮಂಟಪಗಳ ಉತ್ಸವಗಳ ಸೇವಾ ದರವನ್ನು ಹೆಚ್ಚಿಸಲಾಗಿದೆ. ಮಹದೇಶ್ವರ ಬೆಟ್ಟಕ್ಕೆ ವಾಹನಗಳ ಪ್ರವೇಶ ಶುಲ್ಕವನ್ನು ಸಹ ಹೆಚ್ಚಳ ಮಾಡಲಾಗಿದೆ. 100 ರೂಪಾಯಿ ಇದ್ದ ಮಿಶ್ರ ಪ್ರಸಾದದ ದರವನ್ನು 125 ರೂಪಾಯಿಗೆ ಏರಿಕೆ ಮಾಡಲಾಗಿದೆ.
Advertisement
ಕಳೆದ ಐದು ವರ್ಷಗಳಿಂದ ಯಾವುದೇ ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಇತ್ತೀಚೆಗೆ ನಿರ್ವಹಣಾ ವೆಚ್ಚ ಹೆಚ್ಚುತ್ತಿರುವುದರಿಂದ ಸೇವೆಗಳ ದರ ಏರಿಕೆ ಮಾಡಲಾಗಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ.
ನಿರ್ವಹಣಾ ವೆಚ್ಚದ ಹೆಸರಿನಲ್ಲಿ ವಿವಿಧ ಸೇವಾ ಶುಲ್ಕಗಳನ್ನು ಏರಿಕೆ ಮಾಡಿರುವುದು ಭಕ್ತರಲ್ಲಿ ಅಸಮಧಾನ ಮೂಡಿಸಿದೆ. ಕೊರೊನಾ ಪರಿಣಾಮ ಜನರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದಾರೆ ಇಂತಹ ಸಂದರ್ಭದಲ್ಲಿ ವಿವಿಧ ಸೇವೆಗಳ ದರ ಏರಿಕೆ ಮಾಡಿರುವುದಕ್ಕೆ ಭಕ್ತ ಸಮೂಹ ಭಾರೀ ವಿರೋಧ ವ್ಯಕ್ತಪಡಿಸಿದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲೂ ಮಹದೇಶ್ವರನ ಸನ್ನಿಧಿಗೆ ಕೋಟ್ಯಂತರ ರೂಪಾಯಿ ಕಾಣಿಕೆ ಹರಿದುಬರುತ್ತಿದೆ. ಆದರೂ ಪ್ರಾಧಿಕಾರ ಸೇವೆಗಳ ದರ ಏರಿಕೆಯ ಬರೆ ಎಳೆದಿದೆ.