ಬೆಂಗಳೂರು: ನಾವು ರಾಜ್ಯದಲ್ಲಿ ಕೈಗೊಂಡ ಕಠಿಣ ಕ್ರಮದಿಂದಾಗಿ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ
ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯಡಿಯೂರಪ್ಪ, ಮೇ 10 ರಿಂದ ಕಠಿಣ ಕ್ರಮ ಜಾರಿ ಮಾಡಲಾಗಿದೆ. ಏಪ್ರಿಲ್ 24 ರಿಂದ ಕೆಲವು ನಿರ್ಬಂಧ ಹೇರಲಾಗಿತ್ತು. ಮೇ 10 ರಿಂದ ಕಠಿಣ ಕ್ರಮ ಜಾರಿ ಮಾಡಲಾಗಿದೆ. ಮೇ 5 ರಂದು 50,112 ಕೇಸ್ ದಾಖಲಾಗಿತ್ತು, ಕಠಿಣ ಕ್ರಮದಿಂದ ನಿನ್ನೆ ರಾಜ್ಯದಲ್ಲಿ 39,900 ಕೇಸ್ ದಾಖಲಾಗಿ ಇಳಿಕೆ ಕಂಡಿದೆ. ಇದು ಸಮಾಧಾನ ಸಂಗತಿಯಾಗಿದ್ದು, ಲಾಕ್ಡೌನ್ ನಿಂದ ಈ ಪರಿಸ್ಥಿತಿ ಬಂದಿದೆ. ಪರಿಸ್ಥಿತಿ ಸುಧಾರಿಸುತ್ತಿದೆ. ಬೆಂಗಳೂರಿನಲ್ಲಿ 16 ಸಾವಿರಕ್ಕೆ ಇಳಿಕೆ ಆಗಿದೆ. ಪ್ರಾರಂಭದಲ್ಲಿ ಕೇಸ್ ಹೆಚ್ಚಳ ಇದ್ದ ಬೀದರ್, ಕಲಬುರಗಿ, ಬೆಂಗಳೂರಿನಲ್ಲಿ ಕೇಸ್ ಕಡಿಮೆ ಆಗುತ್ತಿದೆ ಎಂದು ಮಾಹಿತಿ ನೀಡಿದರು.
Advertisement
Advertisement
ಸುದ್ದಿಗೋಷ್ಠಿಯ ಮುಖ್ಯಾಂಶಗಳು
1. ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಏಪ್ರಿಲ್ 24 ರಿಂದ ಕೆಲವು ನಿರ್ಬಂಧಗಳನ್ನು ಹೇರಲಾಗಿತ್ತು. ಅಲ್ಲದೆ, ಮೇ 10 ರಿಂದ ಇನ್ನಷ್ಟು ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಯಿತು.
2. ರಾಜ್ಯದಲ್ಲಿ ಮೇ 5 ರಂದು ಗರಿಷ್ಠ 50,112 ಪ್ರಕರಣಗಳು ವರದಿಯಾಗಿದ್ದು, ಈ ಕಠಿಣ ಕ್ರಮಗಳಿಂದಾಗಿ ವರದಿಯಾಗುತ್ತಿರುವ ಪ್ರಕರಣಗಳ ಸಂಖ್ಯೆ ನಿನ್ನೆ 39,900ಕ್ಕೆ ಇಳಿದಿದೆ ಎಂಬುದು ಸಮಾಧಾನಕರ ಸಂಗತಿ. ಇದು ನಿರ್ಬಂಧಗಳ ಜಾರಿ ನಂತರ ಪರಿಸ್ಥಿತಿ ಸುಧಾರಿಸುತ್ತಿರುವುದಕ್ಕೆ ನಿದರ್ಶನ.
3. ಬೆಂಗಳೂರಿನಲ್ಲಿ ಮೇ 5 ರಂದು 23,106 ಪ್ರಕರಣಗಳಿದ್ದಿದ್ದು, ನಿನ್ನೆಗೆ 16,286 ಸಂಖ್ಯೆಗೆ ಇಳಿಕೆಯಾಗಿದೆ.
4. ಪ್ರಾರಂಭದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರ ಏರುಗತಿಯಲ್ಲ್ಲಿದ್ದ ಬೆಂಗಳೂರು, ಬೀದರ್ ಮತ್ತು ಕಲಬುರಗಿಯಲ್ಲಿ ಪ್ರಕರಣಗಳ ಸಂಖ್ಯೆ ಹಾಗೂ ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ.
Advertisement
ಹಾಸಿಗೆಗಳ ಹೆಚ್ಚಳ
5. ಕಳೆದ ವರ್ಷ ಮಾರ್ಚ್ನಲ್ಲಿ ಆರೋಗ್ಯ ಇಲಾಖೆ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ 1970 ಆಕ್ಸಿಜನೇಟೆಡ್ ಬೆಡ್ಗಳು, 444 ಐಸಿಯು ಗಳು ಹಾಗೂ 610 ವೆಂಟಿಲೇಟರ್ ಸಹಿತ ಐಸಿಯು ಗಳ ಸೌಲಭ್ಯವಿತ್ತು. ಈ ಎಲ್ಲ ಸೌಲಭ್ಯಗಳನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಪ್ರಸ್ತುತ ಇಲಾಖೆಯ ವ್ಯಾಪ್ತಿಯ ಆರೋಗ್ಯ ಸಂಸ್ಥೆಗಳಲ್ಲಿ 24 ಸಾವಿರ ಆಕ್ಸಿಜನೇಟೆಡ್ ಬೆಡ್ಗಳು, 1145 ಐಸಿಯು ಬೆಡ್ಗಳು, 2059 ವೆಂಟಿಲೇಟರ್ ಬೆಡ್ಗಳು ಹಾಗೂ 1248 ಹೆಚ್ಎಫ್ಎನ್ಸಿ ಸೌಲಭ್ಯಗಳು ಲಭ್ಯವಿದೆ.
6. ಅಂತೆಯೇ ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಆಕ್ಸಿಜನೇಟೆಡ್ ಬೆಡ್ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಿ, 4700 ರಿಂದ 9405 ಕ್ಕೆ ಹೆಚ್ಚಿಸಲಾಗಿದೆ. ವೆಂಟೆಲೇಟೆಡ್ ಬೆಡ್ಗಳ ಸಂಖ್ಯೆಯನ್ನು 341 ರಿಂದ 646ಕ್ಕೆ ಹೆಚ್ಚಿಸಲಾಗಿದೆ. ಎಚ್ಎಫ್ಎನ್ಸಿಗಳ ಸಂಖ್ಯೆಯನ್ನು 15 ರಿಂದ 570ಕ್ಕೆ ಹೆಚ್ಚಿಸಲಾಗಿದೆ.
7. ಆಸ್ಪತ್ರೆಗಳ ಮೂಲಸೌಕರ್ಯ ಬಲಪಡಿಸುವ ಪ್ರಕ್ರಿಯೆ ಇನ್ನೂ ಮುಂದುವರೆದಿದೆ. ಹೆಚ್ಚುವರಿ ವೆಂಟೆಲೇಟರುಗಳು ಮತ್ತಿತರ ಸೌಲಭ್ಯಗಳು ನಿರಂತರವಾಗಿ ಸೇರ್ಪಡೆಯಾಗುತ್ತಿವೆ. ಖಾಸಗಿ ಆಸ್ಪತ್ರೆಗಳಿಗೆ ಸುಮಾರು 200 ವೆಂಟಿಲೇಟರುಗಳನ್ನು ನೀಡಿದ್ದೇವೆ.
8. ಖಾಸಗಿ ವೈದ್ಯಕೀಯ ಕಾಲೇಜುಗಳು ಆಕ್ಸಿಜನ್ ಬೆಡ್ಗಳನ್ನು ಹೆಚ್ಚಿಸಲು ಹಾಗೂ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಸಹಾಯಧನ ನೀಡುತ್ತಿದ್ದೇವೆ. ಇಂತಹ ಆಸ್ಪತ್ರೆಗಳಿಗೆ ಸರ್ಕಾರ ಶೇ. 70ರ ಸಹಾಯ ಧನ ನೀಡಲಿದ್ದು, ಉಳಿದ ಶೇ. 30ರ ಮೊತ್ತವನ್ನು ಆಯಾ ಆಸ್ಪತ್ರೆಗಳು ಭರಿಸಬೇಕು.
Advertisement
ಆಮ್ಲಜನಕ ಪೂರೈಕೆ
9. ರಾಜ್ಯದಲ್ಲಿ ಹೆಚ್ಚುತ್ತಿರುವ ಆಮ್ಲಜನಕದ ಬೇಡಿಕೆಯನ್ನು ಸರಿದೂಗಿಸಲು ಮೂರು ಅಂಶಗಳ ಕಾರ್ಯತಂತ್ರವನ್ನು ರೂಪಿಸಿದೆ. ಅದರಂತೆ ಲಿಕ್ವಿಡ್ ಆಕ್ಸಿಜನ್ ಪೂರೈಕೆ ಹೆಚ್ಚಳ, ಆಕ್ಸಿಜನ್ ಜನರೇಟರುಗಳ ಮೂಲಕ ಸ್ಥಳೀಯವಾಗಿ ಆಮ್ಲಜನಕ ಉತ್ಪಾದನೆ ಹೆಚ್ಚಳ ಹಾಗೂ ಆಕ್ಸಿಜನ್ ಕಾನ್ಸಂಟ್ರೇಟರುಗಳು ಹಾಗೂ ಸಿಲಿಂಡರುಗಳನ್ನು ಹೆಚ್ಚಾಗಿ ಖರೀದಿಸುವ ಮೂಲಕ ಆಮ್ಲಜನಕ ಕೊರತೆ ನೀಗಿಸಲು ಪ್ರಯತ್ನಿಸಲಾಗುತ್ತಿದೆ.
10. ಭಾರತ ಸರ್ಕಾರವು ರಾಜ್ಯಕ್ಕೆ ಆಮ್ಲಜನಕ ಹಂಚಿಕೆಯನ್ನು 965 ಮೆಟ್ರಿಕ್ ಟನ್ ನಿಂದ 1015 ಮೆಟ್ರಿಕ್ ಟನ್ ಗೆ ಹೆಚ್ಚಿಸಿದೆ. ಇದರಲ್ಲಿ 765 ಮೆಟ್ರಿಕ್ ಟನ್ ಆಮ್ಲಜನಕವು ರಾಜ್ಯದಲ್ಲಿಯೇ ದೊರೆಯುತ್ತಿದೆ. 60 ಟನ್ ಪಿಎಸ್ಎ ಪ್ಲಾಂಟ್ಗಳಿಂದ ಹಾಗೂ 160 ಟನ್ ಒಡಿಶಾ ಹಾಗೂ 30 ಟನ್ ವಿಶಾಖಪಟ್ಟಣದಿಂದ ದೊರೆಯುತ್ತಿದೆ.
11. ನಮಗೆ ಹಂಚಿಕೆಯಾಗಿರುವ, ರಾಜ್ಯದೊಳಗೇ ಲಭ್ಯವಿರುವ ಆಮ್ಲಜನಕವನ್ನು ಸಂಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಜೊತೆಗೆ ಇತರ ರಾಜ್ಯಗಳಿಂದ ಆಮ್ಲಜನಕ ಪಡೆಯಲು ಸಹ ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ.
12. ಮೇ 11 ರಂದು ನಾವು 1050 ಮೆಟ್ರಿಕ್ ಟನ್ ಹಾಗೂ ಮೇ 12ರಂದು 800 ಮೆಟ್ರಿಕ್ ಟನ್ ಆಮ್ಲಜನಕ ಪಡೆದಿದ್ದೇವೆ.
13. ಬಹರೇನ್ ನಿಂದ 40 ಟನ್ ಹಾಗೂ ಕುವೈಟ್ ನಿಂದ 100 ಟನ್ ಆಮ್ಲಜನಕ ಪಡೆಯಲಾಗಿದೆ. ಜಮ್ಷೆಡ್ಪುರದಿಂದ ಟ್ರೇನ್ ಮೂಲಕ 120 ಟನ್ ಆಮ್ಲಜನಕ ತರಲಾಗಿದೆ.
14. ರಾಜ್ಯದಲ್ಲಿಯೂ ಆಮ್ಲಜನಕ ಉತ್ಪಾದನಾ ಸಾಮಥ್ರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಮೆಡಿಕಲ್ ಕಾಲೇಜು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳು ಸೇರಿದಂತೆ ಒಟ್ಟು 127 ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ.
• ಅದರಲ್ಲಿ 62 ಆಮ್ಲಜನಕ ಉತ್ಪಾದನಾ ಘಟಕಗಳನ್ನು ರಾಜ್ಯ ಸರ್ಕಾರದ ಅನುದಾನದಲ್ಲಿ ಸ್ಥಾಪಿಸಲಾಗುತ್ತಿದೆ.
• 28 ಘಟಕಗಳು ಭಾರತ ಸರ್ಕಾರದಿಂದ ಹಂಚಿಕೆಯಾಗಿವೆ.
• 24 ಘಟಕಗಳನ್ನು ಎನ್ಎಚ್ಎಐ ಸ್ಥಾಪಿಸುತ್ತಿದೆ.
• 11 ಘಟಕಗಳನ್ನು ವಿವಿಧ ಕಂಪೆನಿಗಳ ಸಿಎಸ್ಆರ್ ನೆರವಿನಡಿ ಸ್ಥಾಪಿಸಲಾಗುತ್ತಿದೆ.
• 2 ಘಟಕಗಳನ್ನು ವಿದೇಶಗಳು ಒದಗಿಸಿವೆ.
15. ಹೋಂ ಐಸೋಲೇಷನ್ ನಲ್ಲಿರುವ ಸೋಂಕಿತರ ಅನುಕೂಲಕ್ಕಾಗಿ ಓಲಾ ಮತ್ತು ಗಿವ್ಇಂಡಿಯಾ ಸಂಸ್ಥೆಯವರು ಒಂದು ಸಾವಿರ ಆಕ್ಸಿಜನ್ ಕಾನ್ಸಂಟ್ರೇಟರುಗಳನ್ನು ಉಚಿತವಾಗಿ ಎರವಲು ನೀಡಲು ಮುಂದಾಗಿರುವುದು ಹರ್ಷದಾಯಕ ಸಂಗತಿ. ಇದೇ ರೀತಿ ಸಂಚಾರಿ ಆಕ್ಸಿಜನ್ ಸೇವೆ ಒದಗಿಸುವ ಆಕ್ಸಿಬಸ್ಗಳಿಗೆ ಚಾಲನೆ ನೀಡಲಾಗಿದ್ದು, ಸರ್ಕಾರಿ ಆಸ್ಪತ್ರೆಗಳು ಮತ್ತು ಟ್ರಯೇಜ್ ಸೆಂಟರುಗಳ ಬಳಿ ತುರ್ತು ಅಗತ್ಯವಿರುವವರಿಗೆ ನೆರವಾಗುತ್ತಿವೆ.
16. ಜಿಲ್ಲೆಗಳಲ್ಲಿರುವ ಆಮ್ಲಜನಕ ಬೇಡಿಕೆಯ ಒತ್ತಡವನ್ನು ನಿವಾರಿಸಲು 10 ಸಾವಿರದ ವರೆಗೆ ಆಕ್ಸಿಜನ್ ಸಿಲಿಂಡರುಗಳನ್ನು ಪಡೆಯಲು ತೀರ್ಮಾನಿಸಲಾಗಿದೆ. ಕಳೆದ 15-20 ದಿನಗಳಲ್ಲಿ 730 ಆಮ್ಲಜನಕ ಸಿಲಿಂಡರುಗಳನ್ನು ತರಿಸಿದ್ದೇವೆ. 380 ಸಿಲಿಂಡರುಗಳನ್ನು ಭಾರತ ಸರ್ಕಾರ ಒದಗಿಸಿದ್ದು, 350 ಸಿಲಿಂಡರುಗಳನ್ನು ವಿದೇಶಗಳಿಂದ ಪಡೆಯಲಾಗಿದೆ. ಈ ಸಿಲಿಂಡರುಗಳನ್ನು ಅಗತ್ಯವಿರುವ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ.
17. ಮೂರು ಸಾವಿರ ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಈಗಾಗಲೇ ರಾಜ್ಯದೆಲ್ಲೆಡೆ ಹಂಚಿಕೆ ಮಾಡಲಾಗಿದೆ. ಸರ್ಕಾರ ಹಾಗೂ ವಿವಿಧ ಕಂಪೆನಿಗಳ ಸಿಎಸ್ಆರ್ ನೆರವಿನೊಂದಿಗೆ ಇನ್ನೂ ಏಳು ಸಾವಿರ ಕಾನ್ಸಂಟ್ರೇಟರ್ಗಳನ್ನು ಹಂಚಿಕೆ ಮಾಡಲಾಗುವುದು.
ಲಸಿಕೆ :
18. ಭಾರತ ಸರ್ಕಾರವು 45 ವರ್ಷ ಮೇಲ್ಪಟ್ಟ ನಾಗರಿಕರಿಗೆ, ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಮುಂಚೂಣಿಯ ಕಾರ್ಯಕರ್ತರಿಗೆ ಲಸಿಕೆ ಪೂರೈಕೆ ಮಾಡುತ್ತಿದೆ. ಈ ವರೆಗೆ 1.10 ಕೋಟಿ ಡೋಸ್ಗಳನ್ನು ಭಾರತ ಸರ್ಕಾರ ಒದಗಿಸಿದ್ದು, ಅದರಲ್ಲಿ 99.5 ಲಕ್ಷ ಕೋವಿಶೀಲ್ಡ್ ಹಾಗೂ 10.9 ಲಕ್ಷ ಕೋವ್ಯಾಕ್ಸಿನ್ ಲಸಿಕೆಗಳು.
19. ರಾಜ್ಯ ಸರ್ಕಾರವು 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡಲು 3 ಕೋಟಿ ಡೋಸ್ ಲಸಿಕೆಗಳ ಖರೀದಿಗೆ ಆದೇಶ ನೀಡಿದೆ. ಅದರಲ್ಲಿ 2 ಕೋಟಿ ಡೋಸ್ ಕೋವಿಶೀಲ್ಡ್ ಹಾಗೂ 1 ಕೋಟಿ ಡೋಸ್ ಕೊವ್ಯಾಕ್ಸಿನ್ ಸೇರಿದೆ. ಅಲ್ಲದೆ ಹೆಚ್ಚುವರಿಯಾಗಿ 2 ಕೋಟಿ ಡೋಸ್ ಇಂಜೆಕ್ಷನ್ ಸರಬರಾಜು ಮಾಡಲು ಜಾಗತಿಕ ಟೆಂಡರು ಕರೆಯಲಾಗಿದೆ.
20. ಈ ವರೆಗೆ 7.5 ಲಕ್ಷ ಕೋವಿಶೀಲ್ಡ್ ಹಾಗೂ 1.44 ಲಕ್ಷ ಕೊವ್ಯಾಕ್ಸಿನ್ ಸೇರಿದಂತೆ 8.94 ಲಕ್ಷ ಡೋಸ್ಗಳು ಲಭ್ಯವಾಗಿದೆ.
21. ಕೋವಿಶೀಲ್ಡ್ ಲಸಿಕೆ ಪಡೆದ 14.87 ಲಕ್ಷ ಫಲಾನುಭವಿಗಳು ಆರು ವಾರ ಪೂರೈಸಿದ್ದು, ಎರಡನೇ ಡೋಸ್ಗೆ ಅರ್ಹತೆ ಹೊಂದಿದ್ದಾರೆ. ಕೊ-ವ್ಯಾಕ್ಸಿನ್ ಮೊದಲ ಡೋಸ್ ಪಡೆದ 5.10 ಲಕ್ಷ ಫಲಾನುಭವಿಗಳು 4 ವಾರ ಪೂರೈಸಿದ್ದು, ಎರಡನೇ ಡೋಸ್ ಪಡೆಯಲು ಅರ್ಹತೆ ಹೊಂದಿದ್ದಾರೆ. ಅಂದರೆ ಇಂದಿನ ಅಂಕಿ ಅಂಶಗಳ ಪ್ರಕಾರ 19.97 ಲಕ್ಷ ಮಂದಿ ಎರಡನೇ ಡೋಸ್ ಲಸಿಕೆ ಪಡೆಯಲು ಅರ್ಹತೆ ಹೊಂದಿದ್ದಾರೆ.
22. ಮೊದಲ ಡೋಸ್ ಪಡೆದವರು ಸಂಪೂರ್ಣ ಸುರಕ್ಷತೆ ಹೊಂದಲು ಎರಡನೇ ಡೋಸ್ ಲಸಿಕೆ ನೀಡುವುದು ಅತಿ ಅಗತ್ಯ. ಆದ್ದರಿಂದ ಲಭ್ಯವಿರುವ ಲಸಿಕೆಯ ದಾಸ್ತಾನನ್ನು ಎರಡನೇ ಡೋಸ್ ಪಡೆಯಲು ಅರ್ಹತೆ ಹೊಂದಿರುವವರಿಗೆ ನೀಡಲು ನಿರ್ಧರಿಸಿದ್ದೇವೆ. ಈ ಕಾರಣಕ್ಕಾಗಿ 18 ರಿಂದ 44 ವರ್ಷದೊಳಗಿನವರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ನಾವು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ.
23. ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಲ್ಲಿ ಮೈಕ್ರೋ ಬಯಾಲಜಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರೊ. ಗಗನ್ದೀಪ್ ಕಾಂಗ್ ಅವರನ್ನು ರಾಜ್ಯದ ವ್ಯಾಕ್ಸಿನೇಷನ್ ಕಾರ್ಯತಂತ್ರದ ಸಲಹೆಗಾರರಾಗಿ ರಾಜ್ಯ ಸರ್ಕಾರವು ನೇಮಕ ಮಾಡುತ್ತಿದೆ. ಇವರು ವ್ಯಾಕ್ಸಿನ್ಗಳ ಸಂಶೋಧನೆ ಮತ್ತು ಅವುಗಳ ಬಳಕೆ ಕುರಿತಂತೆ ವಿಶ್ವ ಆರೋಗ್ಯ ಸಂಸ್ಥೆಯು ರಚಿಸಿರುವ ಸಲಹಾ ಸಮಿತಿಗಳ ಸದಸ್ಯರಾಗಿರುತ್ತಾರೆ.
ರೆಮ್ಡಿಸಿವಿರ್ ಇಂಜೆಕ್ಷನ್
24. ಭಾರತ ಸರ್ಕಾರವು ರಾಜ್ಯಕ್ಕೆ ಏಪ್ರಿಲ್ 21 ರಿಂದ ಮೇ 9 ರ ಅವಧಿಗೆ 3.01 ಲಕ್ಷ ರೆಮ್ಡಿಸಿವಿರ್ ಹಂಚಿಕೆ ಮಾಡಿದ್ದು, ಈ ಅವಧಿಯಲ್ಲಿ 2.72 ಲಕ್ಷ ಡೋಸ್ ರೆಮ್ಡಿಸಿವಿರ್ ಪೂರೈಕೆಯಾಗಿದೆ. ಇಂಜೆಕ್ಷನ್ ಪೂರೈಕೆಯಲ್ಲಿ ವಿಳಂಬ ಮಾಡಿದ ಕಂಪೆನಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ. ಮೇ 10 ರಿಂದ 16ರ ಅವಧಿಗೆ 2.74 ಲಕ್ಷ ಇಂಜೆಕ್ಷನ್ಗಳು ಹಂಚಿಕೆಯಾಗಿದೆ. ಇವು ಸಕಾಲದಲ್ಲಿ ಪೂರೈಕೆಯಾಗುವ ಕುರಿತು ನಿರಂತರ ಪರಿಶೀಲನೆ ಹಾಗೂ ಸಮನ್ವಯ ನಡೆಸಲಾಗುತ್ತಿದೆ.
25. ರಾಜ್ಯದಲ್ಲಿ ರೆಮ್ಡಿಸಿವಿರ್ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ ಇತರ ರಾಜ್ಯಗಳ ಕೋಟಾದಲ್ಲಿ ಬಳಕೆಯಾಗದೆ ಉಳಿದ ಇಂಜೆಕ್ಷನ್ಗಳನ್ನು ಪೂರೈಸುವಂತೆಯೂ ಭಾರತ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
26. ಖಾಸಗಿ ಆಸ್ಪತ್ರೆಗಳ ಬೇಡಿಕೆ ಪರಿಶೀಲಿಸಿ, ಸಮಾನವಾಗಿ ಹಂಚಿಕೆ ಮಾಡಲು ಪಾರದರ್ಶಕ ವ್ಯವಸ್ಥೆಯನ್ನು ರೂಪಿಸಲಾಗಿದೆ.
27. ರಾಜ್ಯದಲ್ಲಿ ಕೋವಿಡ್ 19ರ ಸಂಭವನೀಯ ಮೂರನೇ ಅಲೆಯನ್ನು ಎದುರಿಸಲು ಸಿದ್ಧತೆಗಾಗಿ ನಾರಾಯಣ ಹೆಲ್ತ್ನ ಛೇರ್ಮನ್ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಪಡೆಯನ್ನು ರಚಿಸಲಾಗುವುದು.
28. ಕಠಿಣ ನಿಯಮಾವಳಿಗಳನ್ನು ಜಾರಿಗೆ ತಂದ ನಂತರ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ. ಯಾರೂ ಆತಂಕ ಪಡಬೇಕಾದ ಅಗತ್ಯವಿಲ್ಲ.
29. ಜನತೆ ಎಲ್ಲ ನಿರ್ಬಂಧಗಳನ್ನೂ ಮುಕ್ತವಾಗಿ ಸ್ವೀಕರಿಸಿ ಅನುಸರಿಸಿದಾಗ ಮಾತ್ರ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯ. ಆದ್ದರಿಂದ ರಾಜ್ಯದ ಜನತೆ ಸಹಕರಿಸಲು ಕೋರಿದೆ.