– ಕಡಲ ತೀರದಲ್ಲಿ ಮೊಟ್ಟೆ ಇಟ್ಟು, ಮರಿ ಮಾಡುತ್ತಿರುವ ಆಮೆಗಳು
ಕಾರವಾರ: ಕಳೆದ ಎರೆಡು ತಿಂಗಳಿಂದ ಲಾಕ್ಡೌನ್ ನಿಂದಾಗಿ ಮಾನವನ ಪರಿಸರದ ಮೇಲಿನ ದೌಜ್ರ್ಯನ್ಯ ಕಡಿಮೆಯಾಗಿದೆ. ಹೀಗಾಗಿ ಕರಾವಳಿ ಭಾಗದಲ್ಲಿ ಸಮುದ್ರದಲ್ಲಿ ಆಮೆಗಳ ಸಂಚಾರ ಹೆಚ್ಚಾಗಿದ್ದು, ಕಡಲ ತಡಿಯಲ್ಲಿ ಮೊಟ್ಟೆ ಇಟ್ಟು ಮರಿ ಮಾಡತೊಡಗಿವೆ.
Advertisement
ಕಳೆದ ಒಂದು ವರ್ಷದಿಂದ ಕರೊನಾ ಮಹಾಮಾರಿ ಮನುಷ್ಯರ ಓಡಾಟಕ್ಕೆ ನಿರ್ಬಂಧ ಹೇರಿದೆ. ಹೀಗಿರುವಾಗ ಪರಿಸರದ ಮೇಲಿನ ಮಾನವನ ಅತ್ಯಾಚಾರ ಇಳಿಮುಖವಾಗಿದೆ. ಇದರ ಪ್ರತಿಫಲವಾಗಿ ಪರಿಸರ ತನ್ನ ಶಕ್ತಿಯನ್ನ ವೃದ್ಧಿಸಿಕೊಳ್ಳುತ್ತಿದೆ. ಇದಕ್ಕೆ ಪುಷ್ಟಿ ನೀಡುವಂತೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕರಾವಳಿ ಭಾಗದಲ್ಲಿ ಆಮೆಗಳು ಸಮುದ್ರ ತೀರಕ್ಕೆ ಬಂದು ಮಾನವನ ಭಯವಿಲ್ಲದೇ ಮೊಟ್ಟೆ ಇಟ್ಟು ಮರಿ ಮಾಡತೊಡಗಿವೆ. ಹೊನ್ನಾವರದ ಕಾಸರಕೋಡು, ಟೊಂಕ ಸೇರಿದಂತೆ ತೀರ ಪ್ರದೇಶದಲ್ಲಿ ಓಲಿವ್ ರಿಡ್ಲಿ ಎಂಬ ಜಾತಿಯ ಅಳಿವಿನಂಚಿನ ಆಮೆಗಳು ಫೆಬ್ರವರಿಯಿಂದ ಈವರೆಗೆ ಸಾವಿರಾರು ಮೊಟ್ಟೆಗಳನ್ನು ಇಟ್ಟು ಮರಿಮಾಡಿ, ಸಮುದ್ರ ಸೇರುತ್ತಿವೆ.
Advertisement
Advertisement
ಇದನ್ನು ಗಮನಿಸಿದ ಹೊನ್ನಾವರ ವಿಭಾಗದ ಅರಣ್ಯ ಇಲಾಖೆ ಆಮೆ ಮೊಟ್ಟೆಗಳು ನಾಯಿ, ಮನುಷ್ಯರ ಪಾಲಾಗದಂತೆ ಅವುಗಳ ರಕ್ಷಣೆಗೆ ವ್ಯವಸ್ಥೆ ಮಾಡಿದ್ದು, ಈವರೆಗೆ 900 ಮೊಟ್ಟೆಗಳನ್ನು ರಕ್ಷಿಸಿ ಮರಿ ಮಾಡಿಸುವ ಮೂಲಕ ಕಡಲಿಗೆ ಬಿಟ್ಟಿದ್ದಾರೆ. ಈ ಭಾಗದಲ್ಲಿ ಅತೀ ಹೆಚ್ಚು ಆಮೆಗಳು ಮೊಟ್ಟೆ ಇಡುತ್ತಿದ್ದು, ಇವುಗಳ ಬಗ್ಗೆ ಮಾಹಿತಿ ನೀಡಿದವರಿಗೆ ರಕ್ಷಣೆ ಕಾರಣದಿಂದ ಬಹುಮಾನ ನೀಡಲಾಗುತ್ತಿದೆ. ಕಡಲ ತೀರದಲ್ಲಿ ಆಮೆಗಳ ಮಾಹಿತಿ ಕಲೆ ಹಾಕಲು ವಿಶೇಷ ನುರಿತ ಸಿಬ್ಬಂದಿ ಸಹ ನೇಮಕ ಮಾಡಲಾಗಿದೆ.
Advertisement
ಹೊನ್ನಾವರದ ಕಾಸರಕೋಡು ಭಾಗದಲ್ಲಿ ಮೊದಲಿನಿಂದಲೂ ಅಪರೂಪದ ಓಲಿವ್ ರಿಡ್ಲಿ ಜಾತಿಯ ಆಮೆಗಳು ಫೆಬ್ರವರಿಯಿಂದ ಮೊಟ್ಟೆ ಇಡಲು ಬರುತ್ತವೆ. ಜೂನ್ ತಿಂಗಳಲ್ಲಿ ಬಹುತೇಕ ಈ ಜಾತಿಯ ಆಮೆಗಳ ಮೊಟ್ಟೆ ಮರಿಯಾಗಿ ಸಮುದ್ರ ಸೇರುತ್ತವೆ.
ಓಲಿವ್ ರಿಡ್ಲಿ ವಿಶೇಷವೇನು?
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ, ಅಂಕೋಲ, ಕುಮಟಾ, ಭಟ್ಕಳ, ಹೊನ್ನಾವರ ತಾಲೂಕುಗಳು ಸಮುದ್ರವನ್ನು ಒಳಗೊಂಡಿವೆ. ಆದರೆ ಆಮೆಗಳು ಬಹುತೇಕ ಹೊನ್ನಾವರದ ಕಡಲ ತೀರದಲ್ಲೇ ಅತೀ ಹೆಚ್ಚು ಬರುತ್ತಿವೆ. ಇದಕ್ಕೆ ಕಾರಣ ಸಮುದ್ರ ದಡದಲ್ಲಿ ಮಾನವನ ಸಂಚಾರದ ವಿರಳತೆ.
ಉತ್ತರ ಕನ್ನಡ ಜಿಲ್ಲೆಯ ಕಡಲತೀರಗಳು ಪಶ್ಚಿಮ ಘಟ್ಟ ಪ್ರದೇಶವನ್ನು ಆವರಿಸಿಕೊಂಡಿದೆ. ಕೇರಳ, ಬಂಗಾಳ, ತಮಿಳುನಾಡಿಗೆ ಹೋಲಿಸಿದರೆ ಕರ್ನಾಟಕದ ಕಡಲತೀರದ ವಿಸ್ತಾರ ಕಡಿಮೆ. ಆದರೂ ಸಹ ಭಾರತದಲ್ಲಿ ಅತೀ ಹೆಚ್ಚು ಬದುಕಿರುವ ಓಲಿವ್ ರಿಡ್ಲಿ ಜಾತಿಯ ಆಮೆಗಳು ತಮ್ಮ ಜೀವನ ಚಕ್ರವನ್ನು ಈ ಭಾಗದಲ್ಲಿ ರೂಪಿಸಿಕೊಂಡಿವೆ.
ಹೊನ್ನಾವರದ ಕಡಲಜೀವಶಾಸ್ತ್ರಜ್ಞ ಡಾ.ಪ್ರಕಾಶ್ ಮೇಸ್ತಾ ಈ ಕುರಿತು ಮಾಹಿತಿ ನೀಡಿದ್ದು, ಈ ಹಿಂದೆ ಕಾರವಾರ, ಕುಮಟಾ, ಹೊನ್ನಾವರದಲ್ಲಿ ಓಲಿವ್ ರಿಡ್ಲಿ ಸೇರಿದಂತೆ ಹಲವು ಪ್ರಬೇಧದ ಆಮೆಗಳು ಮೊಟ್ಟೆ ಇಟ್ಟು ಮರಿ ಮಾಡುತ್ತಿದ್ದವು. ಆದರೆ ಕಾರವಾರ ಭಾಗದಲ್ಲಿನ ಸಮುದ್ರ ತೀರದಲ್ಲಿ ನೌಕಾದಳದ ಕಾಮಗಾರಿ, ಬಂದರು ಚಟುವಟಿಕೆ ಹೆಚ್ಚಾದ್ದರಿಂದ ಆಮೆಗಳು ಈ ಭಾಗದಲ್ಲಿ ಬರುವುದನ್ನು ಕಡಿಮೆ ಮಾಡಿವೆ. ಸದ್ಯ ಹೊನ್ನಾವರ ಭಾಗದ ಕಾಸರಕೋಡು ಭಾಗದ ಕಡಲ ತೀರ ಶಾಂತವಾಗಿದ್ದು, ಮಾನವನ ಚಟುವಟಿಕೆ ಕಡಿಮೆ ಇದೆ. ಹೀಗಾಗಿ ಇಲ್ಲಿಗೆ ಬರುತ್ತವೆ. ಆದರೆ ಈ ವರ್ಷ ಅತೀ ಹೆಚ್ಚು ಬರಲು ಕಾರಣ ಈ ಭಾಗದಲ್ಲಿ ಮೀನುಗಾರಿಕೆ ಸೇರಿದಂತೆ ಎಲ್ಲ ಚಟುವಟಿಕೆ ಸಂಪೂರ್ಣ ನಿಂತಿರುವುದು. ಆಮೆಗಳು ಅತೀ ಹೆಚ್ಚು ಮೊಟ್ಟೆ ಇಟ್ಟು ಮರಿ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಓಲಿವ್ ರಿಡ್ಲಿ ಅತೀ ಸೂಕ್ಷ್ಮ ಜೀವಿ ಆಮೆ. ಜನರ ಸಂಚಾರ, ವಿದ್ಯುತ್ ಬೆಳಕನ್ನು ಇಷ್ಟಪಡುವುದಿಲ್ಲ. ಒಂದು ಬಾರಿ ಯಾವ ಪ್ರದೇಶದಲ್ಲಿ ಹುಟ್ಟುತ್ತದೆಯೋ ಆ ಪ್ರದೇಶದಲ್ಲಿಯೇ ಮತ್ತೆ ಬಂದು ಮರಿ ಹಾಕುವುದು ಇವುಗಳ ವಿಶೇಷ. ಈ ಆಮೆಗಳು ಇದೀಗ ಅಳವಿನಂಚಿನಲ್ಲಿವೆ. ಇವುಗಳ ಮೊಟ್ಟೆಯನ್ನು ಆಹಾರದಲ್ಲಿ ಬಳಸಲಾಗುತ್ತದೆ. ಸಮುದ್ರದಲ್ಲಿ ಸೇರುವ ಈ ಆಮೆ ಮರಿಗಳು ದೊಡ್ಡ ಮೀನುಗಳಿಗೆ ಆಹಾರವಾದರೆ, ಮೀನುಗಾರಿಕಾ ಬೋಟ್, ಶಿಪ್ ಗಳಿಗೆ ಅಪಘಾತವಾಗಿ ಸಾಯುತ್ತವೆ. ಒಂದುಬಾರಿ 300 ಮೊಟ್ಟೆ ಮರಿಯಾದರೆ, ಬದುಕುವುದು ನೂರಕ್ಕಿಂತ ಕಡಿವೆ. ಹೀಗಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಇವುಗಳ ಸಂತತಿ ಕ್ಷೀಣಿಸಿದೆ. 60- 200 ಕೆ.ಜಿ. ತೂಕದಷ್ಟು ಬೆಳೆಯುವ ಇವು, ಭಾರತದಲ್ಲಿರುವ ಆಮೆಗಳ ಗಾತ್ರದಲ್ಲಿ ಹೋಲಿಸಿದರೆ ಅತೀ ಚಿಕ್ಕದಾಗಿದೆ. ಸಮುದ್ರದ ಆಹಾರ ಚಕ್ರದಲ್ಲಿ ಇವುಗಳ ಪಾತ್ರ ದೊಡ್ಡದಿದೆ. ಇವುಗಳು ಜಲ್ಲಿ ಫಿಷ್ ಗಳನ್ನು ತಿನ್ನುವುದರಿಂದ ಮೀನುಗಳ ಸಂತತಿ ಬೆಳೆಯಲು ಕಾರಣವಾಗಿದೆ. ಹೀಗಾಗಿ ಸಮುದ್ರದ ಆಹಾರ ಚಕ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ, ಓಲಿವ್ ರಿಡ್ಲಿ ಆಮೆಗಳ ಜೀವಿತಾವಧಿ ಈವರೆಗೂ ಇಂತಿಷ್ಟು ಎಂದು ಗುರುತಿಸಲಾಗಿಲ್ಲ. ಆದರೆ 300 ವರ್ಷದ ಹಳೆಯ ಆಮೆಗಳು ಬದುಕಿರುವ ದಾಖಲೆ ಇದೆ ಎಂದು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಬಂದರು ಚಟುವಟಿಕೆ, ಜನರ ಸಂಚಾರದಿಂದಾಗಿ ಹೊನ್ನಾವರ ಭಾಗದಲ್ಲಿ ಆಮೆಗಳು ಮೊಟ್ಟೆ ಇಟ್ಟು ಮರಿ ಮಾಡುವುದನ್ನು ಕಡಿಮೆ ಮಾಡಿದ್ದವು. ಅಲ್ಲದೆ ಮೊಟ್ಟೆಗಳು ಕಳ್ಳರ, ನಾಯಿಗಳ ಪಾಲಾಗುತ್ತಿದ್ದವು. ಆದರೆ ಹೊನ್ನಾವರ ವಿಭಾಗದ ಅರಣ್ಯ ಇಲಾಖೆ ಇದೀಗ ರಕ್ಷಣೆ ಮಾಡುತ್ತಿದೆ. ಇನ್ನು ರಾಜ್ಯದಲ್ಲೇ ಕರಾವಳಿ ಭಾಗದಲ್ಲಿ ಇದೀಗ ಹೆಚ್ಚು ಆಮೆಗಳು ಹೊನ್ನಾವರ ಭಾಗದಲ್ಲಿ ಬರುತ್ತಿವೆ. ಹೀಗಾಗಿ ಇವುಗಳ ರಕ್ಷಣೆ ಜೊತೆ ಪೂರಕ ವಾತಾವರಣ ಅತ್ಯವಶ್ಯಕ. ಈ ಕಾರಣದಿಂದ ಹೊನ್ನಾವರದ ಕಾಸರಕೋಡು ಭಾಗವನ್ನು ಆಮೆ ರಕ್ಷಿತ ವಲಯ ಎಂದು ಘೋಷಣೆ ಮಾಡಬೇಕು ಎಂದು ಕಡಲಜೀವಶಾಸ್ತ್ರಜ್ಞ ಪ್ರಕಾಶ್ ಮೇಸ್ತಾ ಆಗ್ರಹಿಸಿದ್ದಾರೆ.
ಕೊರೊನಾ ಸಂಕಷ್ಟ ಮುನುಷ್ಯನನ್ನು ಸೀಮಿತ ಪರಿಧಿಗೆ ನೂಕಿದೆ. ಹೀಗಿರುವಾಗ ಪರಿಸರ ತನ್ನ ಅಳಿದು ಹೋಗುತ್ತಿರುವ ಚೈತನ್ಯವನ್ನು ವೃದ್ಧಿಸಿಕೊಳ್ಳುತಿದ್ದು, ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಮೆಗಳ ಸಂತತಿ ವೃದ್ಧಿ ಸಾಕ್ಷಿಯಾಗಿದೆ.