– ಗದ್ದೆ ಕೆಲಸದ ಖುಷಿ ಹಂಚಿಕೊಂಡ ಮಾಜಿ ಶಾಸಕಿ
ಮಂಗಳೂರು: ವಿಶ್ವದಾದ್ಯಂತ ಹಬ್ಬಿರುವ ಕೊರೊನಾ ಮಹಾಮಾರಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಎಲ್ಲೆಡೆ ಲಾಕ್ಡೌನ್ ಜಾರಿಯಲ್ಲಿದೆ. ಲಾಕ್ಡೌನ್ ಕೆಲವರ ಜೀವನ ವಿಧಾನದಲ್ಲೂ ಕೊಂಚ ಬದಲಾವಣೆ ತಂದಿದೆ. ಹಾಗೆಯೇ ಸದಾ ಸಭೆ-ಸಮಾರಂಭಗಳಲ್ಲಿ ಬ್ಯುಸಿಯಾಗುತ್ತಿದ್ದ ರಾಜಕಾರಣಿಗಳನ್ನೂ ಮನೆಯಿಂದ ಹೊರ ನಡೆಯದಂತೆ ಪರಿಸ್ಥಿತಿಗೆ ಕೊರೊನಾ ತಂದಿದೆ. ಇದೇ ಪರಿಸ್ಥಿತಿಯನ್ನು ಸದುಪಯೋಗಪಡಿಸಿಕೊಳ್ಳಲು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ರಾಜಕೀಯ ಫೀಲ್ಡ್ ಬಿಟ್ಟು ಭತ್ತದ ಫೀಲ್ಡ್ಗೆ ಇಳಿದಿದ್ದಾರೆ.
Advertisement
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ, ಕಾಂಗ್ರೆಸ್ ಮುಖಂಡೆ ಶಕುಂತಲಾ ಶೆಟ್ಟಿಯವರಿಗೆ ಕೂಡ ಲಾಕ್ಡೌನ್ ಘೋಷಣೆಯಾದ ಬಳಿಕ ಮನೆಯಿಂದಲೇ ಫೋನ್ ಮೂಲಕ ರಾಜಕೀಯದಲ್ಲಿ ತೊಡಗಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ಮನೆಯಲ್ಲೇ ಇದ್ದು ಬೇಸರವಾದಾಗ ತನ್ನ ತವರು ಮನೆಯಲ್ಲಿ ಗದ್ದೆಯ ಬೇಸಾಯಕ್ಕೆ ಅಣಿಯಾಗುತ್ತಿರುವ ವಿಚಾರ ಶಕುಂತಲಾ ಅವರಿಗೆ ತಿಳಿಯಿತು. ತಕ್ಷಣ ತವರು ಮನೆಯಲ್ಲಿನ ಗದ್ದೆ ಬೇಸಾಯದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ಮೂಲಕ ಲಾಕ್ಡೌನ್ ಸಮಯವನ್ನು ಭರಪೂರವಾಗಿ ಉಪಯೋಗಿಸಿಕೊಂಡಿದ್ದಾರೆ.
Advertisement
Advertisement
ನಾಟಿ ಮಾಡುವುದರಿಂದ ಹಿಡಿದು, ನಾಟಿ ಸಂಗ್ರಹಿಸುವ ಕಾರ್ಯದಲ್ಲೂ ತೊಡಗಿಸಿಕೊಂಡ ಶಕುಂತಲಾ ಶೆಟ್ಟಿ, ಗದ್ದೆಯ ಕೆಲಸ ಖುಷಿ ತರುತ್ತದೆ ಎಂದು ಸಂತಸವನ್ನೂ ಕೂಡ ಹಂಚಿಕೊಂಡಿದ್ದಾರೆ. ಎಲ್ಲಾ ಕೆಲಸಗಳಿಗಿಂತಲೂ ಶ್ರೇಷ್ಠವಾದುದು ಕೃಷಿ ಕೆಲಸ. ಭತ್ತ ಬೆಳೆದರೆ ಮಾತ್ರ ದೇಶದ ಪ್ರಧಾನಿಯಾದಿಯಾಗಿ ಎಲ್ಲಾ ಜನರಿಗೂ ಆಹಾರ ಪೂರೈಕೆಯಾಗುತ್ತದೆ. ಇದರಿಂದಾಗಿ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಾ, ಉಳಿದವರನ್ನೂ ಪ್ರೋತ್ಸಾಹಿಸುವ ಕಾರ್ಯದಲ್ಲೂ ಶಕುಂತಲಾ ಶೆಟ್ಟಿ ನಿರತರಾಗಿದ್ದಾರೆ.
Advertisement
ಮಂಗಳೂರು ಹೊರವಲಯದ ಕುತ್ತಾರಿನ ಬೋಳ್ಯಗುತ್ತು ಮಾಜಿ ಶಾಸಕಿಯ ತವರು ಮನೆ. ಈ ಗುತ್ತಿನ ಮನೆಗೆ ಸೇರಿದ 15 ವರ್ಷ ಬೇಸಾಯ ಮಾಡದೇ ಉಳಿದಿದ್ದ ಗದ್ದೆಯಲ್ಲಿ ಈ ವರ್ಷ ಭತ್ತದ ನಾಟಿ ಮಾಡಲಾಗುತ್ತಿದೆ. ಲಾಕ್ಡೌನ್ ಘೋಷಣೆಯಾಗುವುದಕ್ಕೂ ಮೊದಲು ಮುಂಬಯಿಯಿಂದ ಊರಿಗೆ ಬಂದಿದ್ದ ಶಕುಂತಲಾ ಶೆಟ್ಟಿಯವರ ತವರು ಮನೆಯ ಹಲವು ಸದಸ್ಯರೂ ಇದೀಗ ಊರಲ್ಲೇ ಉಳಿಯುವಂತಾಗಿದೆ. ಇದರಿಂದಾಗಿ ಅವರು ಕೂಡ ಬೇಸಾಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಜೀವಮಾನದಲ್ಲಿ ಗದ್ದೆಗೆ ಇಳಿಯದಿದ್ದ ಜನ ಇದೀಗ ಗದ್ದೆಯಲ್ಲಿ ಮಣ್ಣು ಮೆತ್ತಿಸಿಕೊಂಡು ನಾಟಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಭತ್ತದ ನಾಟಿಯ ಅನುಭವವನ್ನು ಕೊರೊನಾ ಲಾಕ್ಡೌನ್ ಕಲ್ಪಿಸಿದೆ ಎಂದು ಮುಂಬಯಿಯಿಂದ ಊರಿಗೆ ಬಂದು ಲಾಕ್ಡೌನ್ನಲ್ಲಿ ಸಿಲುಕಿಕೊಂಡ ಮಹಿಳೆ ಗುಣವತಿ ಹೇಳುತ್ತಾರೆ.
ಒಟ್ಟಿನಲ್ಲಿ ಸದಾ ಅಲ್ಲೊಂದು ಇಲ್ಲೊಂದು ರಾಜಕೀಯ ಸಭೆ, ಹೇಳಿಕೆ ನೀಡುತ್ತಾ ಸುದ್ದಿಯಲ್ಲಿದ್ದ ಶಕುಂತಲಾ ಶೆಟ್ಟಿ ಇದೀಗ ಗದ್ದೆ ಬೇಸಾಯದಲ್ಲಿ ತೊಡಗಿಕೊಂಡು ಮತ್ತೆ ಸುದ್ದಿಯಾಗಿದ್ದಾರೆ. ಲಾಕ್ಡೌನ್ ಸಮಯವನ್ನು ಈ ರೀತಿಯ ಒಳ್ಳೆಯ ಕೆಲಸಗಳಲ್ಲಿ ತೊಡಗಿಕೊಂಡ ತೃಪ್ತಿ ಶಕುಂತಲಾ ಶೆಟ್ಟಿಯವರಲ್ಲಿದೆ.