ಬೆಂಗಳೂರು: ಲಸಿಕೆಯೊಂದರಿಂದಲೇ ಕೊರೊನಾ ಸೋಂಕಿನಿಂದ ದೂರವಿರಲು ಸಾಧ್ಯ. ಡಿಸೆಂಬರ್ ಅಂತ್ಯಕ್ಕೆ ಎಲ್ಲರಿಗೂ ಎರಡೂ ಡೋಸ್ ಲಸಿಕೆಯನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
Advertisement
ರಾಜ್ಯ ವಕೀಲರ ಪರಿಷತ್ತಿನಲ್ಲಿ ಕೋವಿಡ್-19 ಉಚಿತ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಡಿಸೆಂಬರ್ ಅಂತ್ಯದಲ್ಲಿ ಕರ್ನಾಟಕದ ಸಮಸ್ತ ಜನರಿಗೆ ಎರಡೂ ಡೋಸ್ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ. ಲಸಿಕೆಯೊಂದರಿಂದಲೇ ನಾವು ಕೊರೊನಾದಿಂದ ದೂರವಿರಲು ಸಾಧ್ಯ. ಇಲ್ಲದಿದ್ದರೆ ಯಾವಾಗಲೂ ಮಾಸ್ಕ್ ಧರಿಸಿಕೊಂಡೇ ಇರಬೇಕಾಗುತ್ತದೆ. ಮಾಸ್ಕ್ ಬಿಟ್ಟು ಮುಕ್ತವಾಗಿ ಮೊದಲಿನಂತೆ ಇರುವ ಸ್ಥಿತಿ ಬರಲು ಎಲ್ಲರೂ ಲಸಿಕೆ ಪಡೆಯಬೇಕು ಎಂದರು.
Advertisement
Advertisement
ಕೋವಿಡ್ ಎರಡನೇ ಅಲೆಯಲ್ಲಿ ನಿರೀಕ್ಷೆಗೆ ಮೀರಿ ಸೋಂಕು ಹೆಚ್ಚಿದ್ದರೂ, ಸರ್ಕಾರದ ಕ್ರಮಗಳಿಂದ ಸಾವಿನ ಪ್ರಮಾಣ ಬಹಳ ಕಡಿಮೆಯಾಗಿದೆ. ಸೋಂಕು ನಿಯಂತ್ರಣಕ್ಕೆ ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯ ಹೆಚ್ಚಿಸಲಾಗಿದೆ. ಕಳೆದ ಇಪ್ಪತ್ತೈದು ವರ್ಷಗಳಲ್ಲೇ ವೈದ್ಯರ ನೇರ ನೇಮಕ ಆಗಿರಲಿಲ್ಲ. ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಿಂದ, ಜಿಲ್ಲಾಸ್ಪತ್ರೆಗಳವರೆಗೂ ಖಾಲಿ ಇರುವ 1,760 ವೈದ್ಯ, ವೈದ್ಯಾಧಿಕಾರಿ ಹುದ್ದೆಗಳನ್ನು ತುಂಬಲಾಗಿದೆ. ಮೂರನೇ ಅಲೆಗೆ ಸಂಬಂಧಿಸಿದಂತೆ ಡಾ.ದೇವಿಶೆಟ್ಟಿ ಸಮಿತಿ ನೀಡಿದ ವರದಿಯ ಶಿಫಾರಸು ಆಧರಿಸಿ ಜಿಲ್ಲಾಮಟ್ಟದಲ್ಲಿ ಆರೋಗ್ಯ ಸೌಕರ್ಯ ಬಲಪಡಿಸಲಾಗುತ್ತಿದೆ ಎಂದು ಹೇಳಿದರು.
Advertisement
ಲಸಿಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿ ಹರಡಲಾಗುತ್ತಿದೆ. ಅದನ್ನೇ ಜನರು ಬೇಗ ನಂಬುತ್ತಿದ್ದಾರೆ. ಆದರೆ ಸರ್ಕಾರ ನೀಡುವ ಅಂಕಿ ಅಂಶಗಳನ್ನು ನಂಬಬೇಕು. ಸಿಡುಬು ರೋಗಕ್ಕೆ ಲಸಿಕೆ ಕಂಡುಹಿಡಿದಾಗ ಅದನ್ನು ನಂಬಲು ಹಲವು ವರ್ಷಗಳೇ ಬೇಕಾಯಿತು. ಹೆಪಟೈಟಿಸ್ ಬಿ ಲಸಿಕೆ ಆವಿಷ್ಕಾರವಾದರೂ ಭಾರತಕ್ಕೆ ಬರಲು 20 ವರ್ಷ ಬೇಕಾಯಿತು. ಆದರೆ ಕೋವಿಡ್ ಆರಂಭವಾದ ಬಳಿಕ ಬೇಗ ಲಸಿಕೆ ದೊರೆತಿದೆ. ಇದು ವಿದೇಶದ್ದಾಗಿರದೆ, ದೇಶೀಯವಾಗಿಯೇ ತಯಾರಾಗಿರುವುದು ಹೆಮ್ಮೆಯ ವಿಚಾರ. ಅತ್ಯಂತ ಪರಿಣಾಮಕಾರಿಯಾದ ಈ ಲಸಿಕೆಗಳನ್ನು ಎಲ್ಲರೂ ಪಡೆಯಬೇಕು ಎಂದರು. ಇದನ್ನೂ ಓದಿ: ಹಾಸನ ಪೊಲೀಸರ ಕಾರ್ಯಾಚರಣೆಯಿಂದ ಸುರಕ್ಷಿತವಾಗಿ ಪೋಷಕರನ್ನು ಸೇರಿದ ಹೆಣ್ಣುಮಕ್ಕಳು
ವಿದೇಶದ ಲಸಿಕೆಗಳು ಹೆಚ್ಚು ದರ ಹೊಂದಿವೆ. ಆದರೆ ನಮ್ಮ ದೇಶದ ಲಸಿಕೆಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಸಂಪೂರ್ಣ ಉಚಿತವಾಗಿ ನೀಡಿದ್ದಾರೆ. ಲಸಿಕೆಯ ಬಗ್ಗೆ ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅರ್ಥ ಮಾಡಿಕೊಂಡು ಜನರಿಗೆ ಉತ್ತಮ ಸಂದೇಶ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿರುವ ಸುಮಾರು 1 ಲಕ್ಷ ವಕೀಲರು ಹಾಗೂ ಅವರ ಕುಟುಂಬ ಸದಸ್ಯರಿಗೆ ಪ್ರಾಶಸ್ತ್ಯದಲ್ಲಿ ಲಸಿಕೆ ನೀಡಲು ರಾಜ್ಯ ಸರ್ಕಾರ ಕ್ರಮ ವಹಿಸಿದೆ. ಹೆಚ್ಚು ಜನರ ಸಂಪರ್ಕ ಇರುವ ವೃತ್ತಿಪರರಿಗೆ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಎರಡು ಡೆಲ್ಟಾ ಪ್ಲಸ್ ಕೇಸ್ ದಾಖಲು – ಸುಧಾಕರ್