ಮಡಿಕೇರಿ: ಆರ್.ಟಿ.ಸಿಯಲ್ಲಿ ಹೆಸರು ಸೇರ್ಪಡೆಗಾಗಿ ವ್ಯಕ್ತಿಯೊಬ್ಬರಿಂದ ಲಂಚದ ರೂಪದಲ್ಲಿ ಹಣ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಿಗನನ್ನು ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿರುವ ಘಟನೆ ಮಡಿಕೇರಿಯಲ್ಲಿ ವರದಿಯಾಗಿದೆ.
Advertisement
ಮಡಿಕೇರಿ ತಾಲೂಕಿನ ಕಾರಗುಂದ ಗ್ರಾಮ ಲೆಕ್ಕಿಗ ದೇವಯ್ಯ ಎಂಬವರೇ ಬಂಧಿತ ಸರ್ಕಾರಿ ನೌಕರನಾಗಿದ್ದಾರೆ. ಕಾರಗುಂದ ನಿವಾಸಿ ಎಂ.ಎನ್ ಯೋಗೇಶ್ ಅವರ ಸರ್ವೇ ನಂಬರ್ 226/11ರಲ್ಲಿ 0.70 ಎಕರೆ ಹಾಗೂ 224/6ರಲ್ಲಿ 2.20 ಎಕರೆ ಆಸ್ತಿ ಇದ್ದು, ಆರ್.ಟಿ.ಸಿಯಲ್ಲಿ ಮೃತರ ಹೆಸರನ್ನು ತೆಗೆದು ಎಂ.ಎನ್. ಯೋಗೇಶ್ ಹೆಸರು ಸೇರ್ಪಡೆಗಾಗಿ ಮಾರ್ಚ್ ತಿಂಗಳಲ್ಲಿ ಮಡಿಕೇರಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಈ ಅರ್ಜಿ ಕಾರಗುಂದ ಗ್ರಾಮ ಲೆಕ್ಕಿಗರ ಕಚೇರಿಗೆ ವಿಲೇವಾರಿಯಾಗಿತ್ತು. ಈ ನಡುವೆ ಯೋಗೇಶ್ ಅವರು ಕಾರಗುಂದ ಗ್ರಾಮ ಲೆಕ್ಕಿಗ ದೇವಯ್ಯ ಅವರ ಬಳಿ ವಿಚಾರಿಸಿದಾಗ ಖಾಲಿ ಕೈಯಲ್ಲಿ ಕಚೇರಿಗೆ ಬರಬೇಡವೆಂದು ಹೇಳಿದ್ದರು ಎನ್ನಲಾಗಿದೆ. ತದನಂತರ ಯೋಗೇಶ್ ಅವರು ಅನಾರೋಗ್ಯಕ್ಕೆ ಒಳಗಾದ ಸಂದರ್ಭ ಪೌತಿ ಖಾತೆಯಲ್ಲಿ ಹೆಸರು ಬದಲಾವಣೆ ಮಾಡಿಸಿ ಕೊಡುವಂತೆ ಕಾರಗುಂದ ನಿವಾಸಿಯಾದ ಬೊಳದಂಡ ನಾಚಪ್ಪ ಅವರನ್ನು ಯೋಗೇಶ್ ಕೋರಿದ್ದರು. ಅದರಂತೆ ಏಪ್ರಿಲ್ 8 ರಂದು ನಾಚಪ್ಪ ಅವರು ಗ್ರಾಮ ಲೆಕ್ಕಿಗರ ಕಚೇರಿಗೆ ತೆರಳಿ ವಿಚಾರಣೆ ನಡೆಸಿದ ಸಂದರ್ಭ ಖಾತೆ ಬದಲಾವಣೆಗೆ 2500ರೂ. ನೀಡುವಂತೆ ಗ್ರಾಮ ಲೆಕ್ಕಿಗ ದೇವಯ್ಯ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ.
Advertisement
ಈ ಹಿನ್ನೆಲೆಯಲ್ಲಿ ಏಪ್ರಿಲ್ 16 ರಂದು ಬೊಳದಂಡ ನಾಚಪ್ಪ ಅವರು ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಲಿಖಿತ ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಪ್ರಕರಣ ದಾಖಲಿಸಲಾಗಿತ್ತು. ಅದರಂತೆ ನಾಚಪ್ಪ ಅವರಿಂದ ಗ್ರಾಮ ಲೆಕ್ಕಿಗ ದೇವಯ್ಯ ಅವರು 2500ರೂ. ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭ ಮೈಸೂರು, ಕೊಡಗು ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿ ಗ್ರಾಮ ಲೆಕ್ಕಿಗನನ್ನು ಬಂಧಿಸಿ 2500ರೂ ನಗದನ್ನು ವಶಕ್ಕೆ ಪಡೆದಿದ್ದಾರೆ.
Advertisement