ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನವಾಗಿರುವ ರೋಷನ್ ಬೇಗ್ ಅವರಿಂದ ಬಿಜೆಪಿ ಅಂತರ ಕಾಯ್ದುಕೊಂಡಿತ್ತು.
ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ರೋಷನ್ ಬೇಗ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದಲ್ಲಿ ವಕ್ಫ್ ಖಾತೆಯ ಸಚಿವರಾಗಿದ್ದರು. ಐಎಂಎ ಪ್ರಕರಣದಲ್ಲಿ ತನ್ನ ಹೆಸರು ಕೇಳಿ ಬಂದ ಬಳಿಕ ತಾನು ಯಾವುದೇ ಅಕ್ರಮ ಎಸಗಿಲ್ಲ ಹೇಳಿದ್ದರು. ಅಷ್ಟೇ ಅಲ್ಲದೇ ಕುಮಾರಸ್ವಾಮಿ ಸರ್ಕಾರದ ಎಸ್ಐಟಿ ತನಿಖೆಗಿಂತ ಸಿಬಿಐ ತನಿಖೆ ನಡೆಸುವುದೇ ಸೂಕ್ತ ಎಂದು ಹೇಳಿದ್ದರು.
Advertisement
Advertisement
ಈ ನಡುವೆ 2019ರಲ್ಲಿ ಕಾಂಗ್ರೆಸ್ ಶಾಸಕರ ಜೊತೆ ರೋಷನ್ ಬೇಗ್ ಸಹ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ಬಳಿಕ ಬಿಜೆಪಿ ಸೇರ್ಪಡೆಗೆ ರಾಜ್ಯ ನಾಯಕರು ಒಲವು ವ್ಯಕ್ತಪಡಿಸಿದ್ದರೂ ಹೈಕಮಾಂಡ್ ನಾಯಕರು ಒಪ್ಪಿಗೆ ನೀಡಿರಲಿಲ್ಲ.
Advertisement
ಎರಡ್ಮೂರು ಬಾರಿ ಸಿಎಂ ಯಡಿಯೂರಪ್ಪನವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅಷ್ಟೇ ಅಲ್ಲದೇ ರೋಷನ್ ಬೇಗ್ ಬೆಂಬಲಿಗರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ರೋಷನ್ ಬೇಗ್ ಸೇರ್ಪಡೆಗೆ ರಾಜ್ಯ ನಾಯಕರು ಒಪ್ಪಿದ್ದರೂ ಆ ಬಳಿಕ ಹೈಕಮಾಂಡ್ ಕೊಕ್ಕೆ ಹಾಕಿತ್ತು
Advertisement
ಶಿವಾಜಿನಗರ ಉಪಚುನಾವಣೆಯಲ್ಲಿ ಬಿಜೆಪಿ ತನಗೆ ಟಿಕೆಟ್ ನೀಡಬಹುದು ಎಂದು ನಿರೀಕ್ಷೆಯಲ್ಲಿ ರೋಷನ್ ಬೇಗ್ ಇದ್ದರು. ಆದರೆ ಬಿಜೆಪಿ ಸರವಣ ಅವರಿಗೆ ಟಿಕೆಟ್ ನೀಡಿತ್ತು. ಹೀಗಿದ್ದರೂ ಬಿಜೆಪಿ ಪರ ಒಳಗೊಳಗೆ ರೋಷನ್ ಬೇಗ್ ಕೆಲಸ ಮಾಡಿದ್ದರು.
ಐಎಂಎ ಪ್ರಕರಣದಲ್ಲಿ ಸಿಬಿಐನಿಂದ ಪಾರಾಗಲು ರೋಷನ್ ಬೇಗ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದರು. ಆದರೆ ಬಿಜೆಪಿಗೆ ರೋಷನ್ ಬೇಗ್ ಸೇರ್ಪಡೆಯಾಗಿರಲಿಲ್ಲ. ಇತ್ತ ಕಾಂಗ್ರೆಸ್ ನಾಯಕರ ಬೆಂಬಲವು ಸಿಗಲಿಲ್ಲ.
ಒಂದು ಕಾಲದಲ್ಲಿ ಮುಸ್ಲಿಮರ ಪ್ರಬಲ ನಾಯಕನಾಗಿ ಮೆರೆದಿದ್ದ ರೋಷನ್ ಬೇಗ್ ರಾಜೀನಾಮೆ ಬಳಿಕ ಯಾರ ಬೆಂಬಲ ಇಲ್ಲದ ಕಾರಣ ಒಂಟಿಯಾಗಿದ್ದರು. ಈಗ ಈ ಪ್ರಕರಣದಲ್ಲಿ ಬಂಧನವಾಗಿ ಪರಪ್ಪನ ಅಗ್ರಹಾರ ಸೇರಿದ್ದಾರೆ. ಈ ಮೂಲಕ ಐಎಂಎ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಮೊದಲ ರಾಜಕಾರಣಿ ರೋಷನ್ ಬೇಗ್ ಆಗಿದ್ದಾರೆ. ಇದನ್ನೂ ಓದಿ: ಎರಡು ಬಾರಿ ವಿಚಾರಣೆ ನಡೆಸಿದ್ದ ಸಿಬಿಐ ಇಂದು ಬಂಧಿಸಿದ್ದು ಯಾಕೆ? ಇಲ್ಲಿದೆ ಎಕ್ಸ್ಕ್ಲೂಸಿವ್ ವರದಿ ಓದಿ
ಬೇಗ್ ಮೇಲಿರುವ ಆರೋಪ ಏನು?
ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ನಿಂದ ಸುಮಾರು 200 ಕೋಟಿಗೂ ಹೆಚ್ಚು ಹಣದ ಜೊತೆ ಬೆಲೆಬಾಳುವ ಐಷಾರಾಮಿ ವಸ್ತುಗಳು, ಕಾರುಗಳನ್ನು ಗಿಫ್ಟ್ ಪಡೆದಿರುವ ಗಂಭೀರ ಆರೋಪ ರೋಷನ್ ಬೇಗ್ ಮೇಲಿದೆ.
ಐಎಂಎ ತನಿಖೆಗಾಗಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ವಿಶೇಷ ತನಿಖಾ ತಂಡ(ಎಸ್ಐಟಿ) ರಚಿಸಿತ್ತು. ಐಎಂಎ ನಿರ್ದೇಶಕರು ಸೇರಿದಂತೆ 20ಕ್ಕೂ ಹೆಚ್ಚು ಮಂದಿಯನ್ನು ಎಸ್ಐಟಿ ಬಂಧಿಸಿತ್ತು. ಈ ಪ್ರಕರಣದಲ್ಲೇ ಬೆಂಗಳೂರಿನ ಅಂದಿನ ಜಿಲ್ಲಾಧಿಕಾರಿ ಶಂಕರ್, ಬೆಂಗಳೂರು ಉತ್ತರ ಉಪ ವಿಭಾಗಾಧಿಕಾರಿ ಎಲ್.ಸಿ. ನಾಗರಾಜ್ ಕೂಡ ಅರೆಸ್ಟ್ ಆಗಿದ್ದರು.
ಕಾರಿನಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದಾಗ ರೋಷನ್ ಬೇಗ್ ಅವರನ್ನು ವಶಕ್ಕೆ ಪಡೆದು ಬಳಿಕ ಒಂದು ದಿನ ಪೂರ್ತಿ ರೋಷನ್ ಬೇಗ್ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು.
ಅಧಿವೇಶನ ನಡೆಯುತ್ತಿದ್ದರಿಂದ ರೋಷನ್ ಬೇಗ್ ಅವರನ್ನು ಎಸ್ಐಟಿ ಬಿಟ್ಟು ಕಳಿಸಿತ್ತು. ಆ ಬಳಿಕ ಮೈತ್ರಿ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ಐಎಂಎ ತನಿಖೆಯನ್ನು ಯಡಿಯೂರಪ್ಪ ಸರ್ಕಾರ ಸಿಬಿಐಗೆ ವಹಿಸಿತ್ತು.