– ರೈಲ್ವೆ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ
ಚಿಕ್ಕಬಳ್ಳಾಪುರ: ಅವೈಜ್ಞಾನಿಕ ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣ ಕೈಬಿಡುವಂತೆ ಚಿಕ್ಕಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಹತ್ತೂರ ಜನರ ಓಡಾಟಕ್ಕೆ ಅನುಕೂಲ ಆಗಲಿ ಅಂತ ಇರೋ ರೈಲ್ವೆ ಗೇಟ್ ಗೆ ಅಂಡರ್ ಬ್ರಿಡ್ಜ್ ಮಾಡಲು ರೈಲ್ವೆ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಅವೈಜ್ಞಾನಿಕವಾಗಿ ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣ ಮಾಡಲಾಗ್ತಿದೆ ಅಂತ ಚಿಕ್ಕಳ್ಳಾಪುರ ತಾಲೂಕಿನ ಅಗಲಗುರ್ಕಿ ಗ್ರಾಮಸ್ಥರು ಆರೋಪಿಸಿದ್ದಾರೆ. ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಬಂದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Advertisement
Advertisement
ಅಗಲಗುರ್ಕಿ ರೈಲ್ವೆ ಗೇಟ್ ಮೂಲಕ 15ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ರಸ್ತೆ ಇದೆ. ಇದೆ ರಸ್ತೆಯಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಹತ್ತಾರು ವಿದ್ಯಾ ಸಂಸ್ಥೆಗಳಿವೆ. ಹಗಲು ರಾತ್ರಿ ನಿರಂತರ ವಿದ್ಯಾರ್ಥಿಗಳು ನಡೆದಾಡುವ ಹಾಗೂ ಬಸ್ ಸಂಚಾರ ಇರುವ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣ ಮಾಡುತ್ತಿರುವ ಆರೋಪ ಕೇಳಿ ಬಂದಿವೆ.
Advertisement
Advertisement
ಕಿಷ್ಕಿಂದೆ ರೀತಿಯಲ್ಲಿ ಎರಡು ಬಸ್ ಗಳು ಒಂದೇ ಸಮಯದಲ್ಲಿ ಸಂಚರಿಸದ ಹಾಗೆ ಮಳೆ ಬಂದ್ರೆ ಬ್ರಿಡ್ಜ್ ಜಲಾವೃತವಾಗುತ್ತದೆ. ಸದ್ಯದ ಗೇಟ್ ಗೆ ನೇರವಾಗಿ ಮೇಲ್ಸುತುವೆ ನಿರ್ಮಾಣ ಮಾಡಿ ಅಂತ ಧರಣಿ ಮಾಡಿ ರೈಲ್ವೇ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಆದ್ರೆ ರೈಲ್ವೆ ಇಲಾಖೆ ಕ್ಯಾರೆ ಮಾಡಿಲ್ಲವೆಂದು ಸ್ಥಳೀಯರು ಕಿಡಿಕಾರುತ್ತಿದ್ದಾರೆ.
ಜನರ ಅನುಕೂಲಕ್ಕಾಗಿ ಕಾಮಗಾರಿ ನಡೆಸುವುದನ್ನ ಕೇಳಿದ್ದೇವೆ. ಆದ್ರೆ ನೀವು ಜನರ ವಿರೋಧದ ನಡುವೆ ಅವೈಜ್ಞಾನಿಕವಾಗಿ ರೈಲ್ವೆ ಗೇಟ್ ಗೆ ಅಂಡರ್ ಬ್ರಿಡ್ಜ್ ಮಾಡಲು ಮುಂದಾಗಿದ್ದೀರಿ, ಮೊದಲು ಕಾಮಗಾರಿ ನಿಲ್ಲಿಸಿ ಅಂತ ಗ್ರಾಮಸ್ಥರು ರೈಲ್ವೇ ಇಲಾಖೆ ವಿರುದ್ದ ಆಕ್ರೋಶ ಹೊರಹಾಕಿದರು.
ಜನ ಸಂದಣಿಯ ರಸ್ತೆಯಲ್ಲಿ ಅವೈಜ್ಞಾನಿಕ ರೈಲ್ವೆ ಅಂಡರ್ ಬ್ರಿಡ್ಜ್ ನಿರ್ಮಾಣವಾದರೆ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನುಕೂಲವೆ ಹೆಚ್ಚು. ಈಗಾಗಲೇ ಜಿಲ್ಲೆಯ ಹಲವು ರೈಲ್ವೇ ಅಂಡರ್ ಪಾಸ್ ಗಳಲ್ಲಿ ನೀರು ನಿಂತು ದೊಡ್ಡ ಅವಾಂತರಗಳನ್ನೇ ಸೃಷ್ಟಿಸುತ್ತಿದೆ. ಇಂತದ್ರಲ್ಲಿ ಅಗಲಗುರ್ಕಿ ಬಳಿ ನಿರ್ಮಾಣವಾಗುತ್ತಿರುವ ಅವೈಜ್ಜಾನಿಕ ರೈಲ್ವೇ ಅಂಡರ್ ಪಾಸ್ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಹೆಚ್ಚಾಗಲಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.