– ಮೂರು ದಿನ ಕಾದ್ರೂ ಶ್ರಮಿಕ ರೈಲಿನಲ್ಲಿ ಸೀಟ್ ಸಿಕ್ಕಿಲ್ಲ
ಲಕ್ನೋ: ಶ್ರಮಿಕ ವಿಶೇಷ ರೈಲಿನಲ್ಲಿ ತನಗೆ ಮತ್ತು ತನ್ನ ಕುಟುಂಬಕ್ಕೆ ಸೀಟು ಸಿಗದ ಕಾರಣ ವ್ಯಕ್ತಿಯೊಬ್ಬ ತಾನು ಕೂಡಿಟ್ಟಿದ್ದ ಹಣದಲ್ಲಿ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸಿರುವ ಘಟನೆ ಉತ್ತರ ಪ್ರದೇಶದ ಗೋರಖ್ಪುರನಲ್ಲಿ ನಡೆದಿದೆ.
ಗೋರಖ್ಪುರದ ಪಿಪಿ ಗಂಜ್ನಲ್ಲಿರುವ ಕೈಥೋಲಿಯಾ ಗ್ರಾಮದ ನಿವಾಸಿ ಲಾಲನ್ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿ ತನ್ನ ಗ್ರಾಮಕ್ಕೆ ಮರಳಿದ್ದಾರೆ. ಲಲನ್ ಗಾಜಿಯಾಬಾದ್ನಲ್ಲಿ ಪೇಂಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಲಾಕ್ಡೌನ್ನಿಂದಾಗಿ ತನ್ನ ಗ್ರಾಮಕ್ಕೆ ಹೋಗಲು ಸಾಧ್ಯವಾಗಿಲ್ಲ. ಇತ್ತೀಚೆಗೆ ಶ್ರಮಿಕ ರೈಲನ್ನು ಸರ್ಕಾರ ಪ್ರಾರಂಭ ಮಾಡಿದೆ. ಈ ರೈಲಿನಲ್ಲಿ ತನ್ನ ಗ್ರಾಮ ತಲುಪಲು ಮೂರು ದಿನಗಳ ಕಾಲ ತನಗಾಗಿ ಮತ್ತು ತನ್ನ ಕುಟುಂಬಕ್ಕೆ ಟಿಕೆಟ್ ಬುಕ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಶ್ರಮಿಕ ರೈಲಿನಲ್ಲಿ ಸೀಟು ಸಿಗಲಿಲ್ಲ.
Advertisement
Advertisement
ಕೊನೆಗೆ ಲಾಲನ್ ನಾಲ್ಕನೇ ದಿನ ನೇರವಾಗಿ ಬ್ಯಾಂಕಿಗೆ ಹೋಗಿ ತಾನು ಉಳಿತಾಯ ಮಾಡಿದ್ದ 1.9 ಲಕ್ಷ ರೂ.ಗಳನ್ನು ಡ್ರಾ ಮಾಡಿಕೊಂಡು ಕಾರ್ ಶೋ ರೂಮ್ಗೆ ಹೋಗಿದ್ದಾರೆ. ಅಲ್ಲಿ 1.5 ಲಕ್ಷ ರೂಪಾಯಿಗೆ ಸೆಕೆಂಡ್ ಹ್ಯಾಂಡ್ ಕಾರ್ ಖರೀದಿಸಿದ್ದಾರೆ. ನಂತರ ಆ ಕಾರಿನಲ್ಲಿ ತನ್ನ ಕುಟುಂಬದವರ ಜೊತೆ ಗೋರಖ್ಪುರದ ತಮ್ಮ ಗ್ರಾಮಕ್ಕೆ ಸುರಕ್ಷಿತವಾಗಿ ತಲುಪಿದ್ದಾರೆ.
Advertisement
Advertisement
ಲಾಕ್ಡೌನ್ ವಿಸ್ತರಣೆಯಾದಾಗ ನಮ್ಮ ಗ್ರಾಮಕ್ಕೆ ಹೋಗುವುದು ಸುರಕ್ಷಿತ ಎನಿಸಿತ್ತು. ಹೀಗಾಗಿ ರೈಲಿನಲ್ಲಿ ಸೀಟ್ ಬುಕ್ ಮಾಡಲು ಪ್ರಯತ್ನ ಮಾಡಿದೆ. ಆದರೆ ಪ್ರಯಾಣಿಕರು ಅಧಿಕವಾಗಿದ್ದರಿಂದ ಸೀಟ್ ಸಿಗಲಿಲ್ಲ. ಇನ್ನೂ ಸರ್ಕಾರ ಬಸ್ಸಗಳನ್ನು ಬಿಟ್ಟಿದ್ದರೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಕಷ್ಟವಾಗಿತ್ತು. ಒಂದು ವೇಳೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಪ್ರಯಾಣಿಸಿದರೆ ನನ್ನ ಕುಟುಂಬಕ್ಕೆ ಕೊರೊನಾ ಸೋಂಕು ತಗುಲಬಹುದು ಎಂಬ ಆತಂಕವಾಯಿತು ಎಂದು ಲಾಲನ್ ಹೇಳಿದರು.
ಅಂತಿಮವಾಗಿ ನಾನು ಶ್ರಮಿಕ್ ರೈಲುಗಳಲ್ಲಿ ಸೀಟ್ ಪಡೆಯಲು ವಿಫಲವಾದಾಗ ಕಾರು ಖರೀದಿಸಲು ನಿರ್ಧಾರ ಮಾಡಿದೆ. ಅದರಂತೆಯೇ ನನ್ನ ಉಳಿತಾಯವನ್ನು ನಾನು ಖರ್ಚು ಮಾಡಿ ಕಾರು ಖರೀದಿ ಮಾಡಿದೆ. ಆದರೆ ನನ್ನ ಕುಟುಂಬವನ್ನು ಸುರಕ್ಷಿತವಾಗಿ ಗ್ರಾಮಕ್ಕೆ ಕರೆದುಕೊಂಡು ಬಂದ ತೃಪ್ತಿ ಇದೆ ಎಂದು ತಿಳಿಸಿದರು.
ಲಾಲನ್ ಮತ್ತು ಅವರ ಕುಟುಂಬ ಮೇ29 ರಂದು ಗಾಜಿಯಾಬಾದ್ನಿಂದ ಹೊರಟು, 14 ಗಂಟೆಗಳ ಪ್ರಯಾಣದ ನಂತರ ಗೋರಖ್ಪುರದ ತಮ್ಮ ಗ್ರಾಮಕ್ಕೆ ತಲುಪಿದರು. ಈಗ ಕುಟುಂಬದವರು ಹೋಮ್ ಕ್ವಾರಂಟೈನ್ನಲ್ಲಿದ್ದಾರೆ. ಲಾಲನ್ ಗೋರಖ್ಪುರದಲ್ಲೇ ಕೆಲಸ ಮಾಡಲು ನಿರ್ಧರಿಸಿದ್ದಾರೆ. ನಾನು ಇಲ್ಲಿಯೇ ಕೆಲಸ ಮಾಡಲು ಇಷ್ಟ ಪಡುತ್ತೇನೆ. ನಾನು ಗಾಜಿಯಾಬಾದ್ಗೆ ಹಿಂತಿರುಗುವುದಿಲ್ಲ. ನನಗೆ ಗೋರಖ್ಪುರದಲ್ಲಿ ಕೆಲಸ ಸಿಗುವ ಭರವಸೆ ಇದೆ ಎಂದು ಲಾಲನ್ ಹೇಳಿದರು.