– ರಸ್ತೆಯ ಮೇಲ್ಭಾಗದಲ್ಲಿಯೇ ಹರಿಯಲಾರಂಭಿಸಿದ ನೀರು
– ಬೆಟ್ಟ ಕುಸಿತಕ್ಕೆ ಉಬ್ಬುತ್ತಿರುವ ಹೆದ್ದಾರಿಗಳು
– ಮನೆ ಮೇಲೆ ಉರುಳಿದ ಬಂಡೆಗಳು
ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿದ ಮಹಾಮಳೆಗೆ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳು ಕುಸಿದು ಬಂದ್ ಆಗುವ ಆತಂಕ ಎದುರಾಗಿದೆ. ಅಷ್ಟೇ ಅಲ್ಲದೇ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಹೆದ್ದಾರಿಗಳ ಮೇಲೆಯೇ ಇದೀಘ ಜಲಾದ ಮೂಲಗಳು ಹೆಚ್ಚಾಗಿದ್ದು, ರಸ್ತೆಯ ಮೇಲ್ಭಾಗದಲ್ಲಿ ನೀರು ಹರಿಯಲು ಅರಂಭಿಸಿದೆ.
Advertisement
ಬೆಟ್ಟ ಕುಸಿತಕ್ಕೆ ಉಬ್ಬುತ್ತಿರುವ ಹೆದ್ದಾರಿಗಳು:
ಕಳೆದ ಒಂದು ವಾರದವರೆಗೆ ಜಿಲ್ಲೆಯಲ್ಲಿ 1,600 ಮಿಲಿ ಮೀಟರ್ ಗೂ ಅಧಿಕ ಮಳೆ ಸುರಿದಿದೆ. ಪರಿಣಾಮವಾಗಿ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೂರು ಕಡೆಗಳಲ್ಲಿ ಅತ್ಯಂತ ಅಪಾಯಕಾರಿ ಮತ್ತು ತೀವ್ರ ಕುಸಿಯುವ ಸಾಧ್ಯತೆ ಇದೆ. ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಈಗಾಗಲೇ ಮೂರು ಕಡೆಗಳಲ್ಲಿ ಬಿರುಕು ಮೂಡಿದೆ. ಎರಡನೇ ಮೊಣ್ಣಂಗೇರಿಯಲ್ಲಿ ಎರಡು ಕಡೆ ಬಿರುಕು ಬಿಟ್ಟಿದ್ದರೆ, ಮದೆನಾಡು ಬಳಿ ರಸ್ತೆ ಉಬ್ಬುತ್ತಿದೆ. ಕರ್ತೋಜಿ ಬೆಟ್ಟ ಕುಸಿಯುತ್ತಿರುವುದರಿಂದ ಅದರ ಒತ್ತಡಕ್ಕೆ ಹೆದ್ದಾರಿ ಉಬ್ಬುತ್ತಿದೆ. ಹೀಗೆ ಉಬ್ಬಿದಂತೆಲ್ಲಾ ಮಣ್ಣು ತೆಗೆಯಲಾಗುತ್ತಿದ್ದು, ಕಳೆದ ಮೂರು ದಿನಗಳಿಂದ 100 ಲೋಡಿಗೂ ಹೆಚ್ಚು ಮಣ್ಣನ್ನು ಉಬ್ಬಿದ ಸ್ಥಳದಿಂದ ತೆಗೆಯಲಾಗಿದೆ.
Advertisement
Advertisement
ಉಕ್ಕುತ್ತಿರುವ ಅಂತರ್ಜಲ:
ಜೊತೆಗೆ ಎರಡನೇ ಮೊಣ್ಣಂಗೇರಿಯಿಂದ ಮದೆನಾಡುವರೆಗೆ ಹೆದ್ದಾರಿಯಲ್ಲೇ ಅಂತರ್ಜಲ ಉಕ್ಕುತ್ತಿದೆ. ಇದರ ಜೊತೆಗೆ ಬೆಟ್ಟದ ಕೆಳ ಭಾಗದಲ್ಲಿಯೂ ಜಲ ಹೊರ ಬರುತ್ತಿದೆ. ಇದರಿಂದಾಗಿ ಈ ಬಾಗದ ಜನರಲ್ಲಿ ಅತಂಕ ಶುರುವಾಗಿದೆ. ಕಾರಣ ಕಳೆದ ವರ್ಷ ತಲಕಾವೇರಿಯಲ್ಲಿ ನಡೆದ ಭೀಕರ ದುರಂತಕ್ಕೂ ಮೊದಲು ಗಜಗಿರಿ ಬೆಟ್ಟದಿಂದ ಭಾರೀ ಪ್ರಮಾಣದಲ್ಲಿ ಅಂತರ್ಜಲ ಹರಿಯಲಾರಂಭಿಸಿತ್ತು. ಹೀಗೆ ಅಂತರ್ಜಲ ಹರಿದ ಕೆಲವೇ ತಿಂಗಳಲ್ಲಿ ಇಡೀ ಗಜಗಿರಿ ಬೆಟ್ಟ ಕುಸಿದು ಹೋಗಿತ್ತು. ಇದೀಗ ಮದೆನಾಡು, ಮೊಣ್ಣಂಗೇರಿಗಳಲ್ಲಿ ಒಂದೆಡೆ ಹೆದ್ದಾರಿ ಕುಸಿದ್ದಿದ್ರೆ, ಮತ್ತೊಂದೆಡೆ ಭಾರೀ ಪ್ರಮಾಣದಲ್ಲಿ ಅಂತರ್ಜಲ ಉಕ್ಕಿ ಹರಿಯುತ್ತಿರುವುದು ಆತಂಕ ಮೂಡಿಸಿದೆ.
Advertisement
ಇನ್ನೂ ಮಡಿಕೇರಿ ಸೋಮವಾರಪೇಟೆ ನಡುವೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಹಟ್ಟಿಹೊಳೆ ಸಮೀಪ ಬರೋಬ್ಬರಿ ಅರ್ಧ ಕಿಲೋಮೀಟರ್ ದೂರದವರೆಗೆ ಭಾರೀ ಬಿರುಕುಬಿಟ್ಟಿದೆ. ಮತ್ತೊಂದೆಡೆ ಮಡಿಕೇರಿಯಿಂದ ಸಿದ್ದಾಪುರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಚೆಟ್ಟಳ್ಳಿ ಬಳಿ ಕುಸಿದಿದ್ದು, ಮಣ್ಣನ್ನು ತೆರವು ಮಾಡಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
ಆಗಸ್ಟ್ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ರಣಭೀಕರ ಮಳೆ ಸುರಿಯುವ ಸಾಧ್ಯತೆ ಇದೆ. ಒಂದು ವೇಳೆ ಭಾರೀ ಮಳೆಯಾದಲ್ಲಿ ಈ ಎಲ್ಲಾ ರಸ್ತೆಗಳು ಕುಸಿದು ಹೋಗುವ ಸಾಧ್ಯತೆ ಇದ್ದು ಮಡಿಕೇರಿ ಕುಶಾಲನಗರ ಸಂಪರ್ಕವನ್ನು ಬಿಟ್ಟು ಉಳಿದೆಲ್ಲಾ ಸಂಪರ್ಕವನ್ನು ಕಡಿದುಕೊಳ್ಳುವ ಸಾಧ್ಯತೆಯೇ ಹೆಚ್ಚಿದೆ. ಹೆದ್ದಾರಿ ಸಂಪರ್ಕದ ಬಗ್ಗೆ ನಿತ್ಯ ಪರಿಶೀಲನೆಗೆ ಸೂಚಿಸಲಾಗಿದ್ದು, ಭಾರೀ ವಾಹನಗಳ ನಿಯಂತ್ರಿಸಲಾಗುತ್ತಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ.
ಉರುಳಿದ ಬಂಡೆಗಳು:
ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮಪಂಚಾಯತಿ ವ್ಯಾಪ್ತಿಯ ನವಗ್ರಾಮದಲ್ಲಿ ಬಸಪ್ಪ ಮತ್ತು ಮಂಜುಳ ದಂಪತಿ ಮನೆ ಪಕ್ಕದಲ್ಲೇ ಬೆಟ್ಟ ಕುಸಿದಿದೆ. ಈ ವೇಳೆ ಭಾರೀ ಗಾತ್ರದ ಎರಡು ಬಂಡೆಗಳು ಬಸಪ್ಪ ಅವರ ಮನೆ ಮೇಲೆ ಉರುಳಿವೆ. ಭಾರೀ ಗಾತ್ರದ ಬಂಡೆಗಳು ಮನೆಗೆ ಅಪ್ಪಳಿಸಿದ್ದರಿಂದ ಮನೆಯ ಒಂದು ಭಾಗ ಸಂಪೂರ್ಣ ಕುಸಿದು ಬಿದ್ದಿದೆ. ಆ ವೇಳೆಗೆ ಮನೆಯಲ್ಲೇ ಎಲ್ಲರೂ ಇದ್ದರಾದರೂ ಬಂಡೆಗಳು ಉರುಳಿದ ಭಾಗದಲ್ಲಿ ಯಾರು ಇರಲಿಲ್ಲ. ಹೀಗಾಗಿ ಅದೃವಷಾತ್ ಎಲ್ಲರೂ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ.
ಸ್ಥಳಕ್ಕೆ ಕಂದಾಯ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಸದಸ್ಯ ಶಂಷುದ್ದಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ನಿಯಮ ಪ್ರಕಾರ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ. ಆದರೆ ಸ್ಥಳೀಯರು ತಮಗೆ ಸುರಕ್ಷಿತ ಸ್ಥಳದಲ್ಲಿ ಬದಲಿ ನಿವೇಶನ ಅಥವಾ ಮನೆ ನೀಡುವಂತೆ ಒತ್ತಾಯಿಸಿದ್ದಾರೆ.