ಮಡಿಕೇರಿ: ಜನರಲ್ ತಿಮ್ಮಯ್ಯ ಅವರ ಸೇನಾ ಸಾಹಸಗಾಥೆ ಬಿಂಬಿಸುವ `ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯ’ವನ್ನು ಇಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಲೋಕಾರ್ಪಣೆ ಮಾಡಿದರು.
Advertisement
ಜನರಲ್ ಕೆ.ಎಸ್. ತಿಮ್ಮಯ್ಯ ಅವರು ಹುಟ್ಟಿದ ಮನೆ `ಸನ್ನಿಸೈಡ್’ ನಿವಾಸವನ್ನೇ ವಸ್ತು ಸಂಗ್ರಹಾಲಯವನ್ನಾಗಿ ರೂಪಿಸಲಾಗಿದ್ದು, ಅವರ ಬಾಲ್ಯ ಹಾಗೂ ಸೇನಾ ಬದುಕಿನ ಅನೇಕ ಘಟನೆಗಳನ್ನು ಬಿಂಬಿಸುವ ಛಾಯಾಚಿತ್ರಗಳನ್ನು ಇಲ್ಲಿ ಸಂಗ್ರಹ ಮಾಡಲಾಗಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಪತ್ನಿ ಸವಿತಾ ಕೋವಿಂದ್ ಮತ್ತು ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್ ಅವರು ವಸ್ತು ಸಂಗ್ರಹಾಲಯದ ಒಳಾಂಗಣದಲ್ಲಿ ಇರುವ ಜನರಲ್ ತಿಮ್ಮಯ್ಯ ಅವರ ಭಾವಚಿತ್ರ ಸಮವಸ್ತ್ರ ಸೇರಿದಂತೆ ಅಂದಿನ ಕಾಲದ ಬಂದೂಕುಗಳು, ಮಿನಿ ರಾಕೆಟ್ ಲಾಂಚರ್, ಯುದ್ಧ ವಿಮಾನ, ಟ್ಯಾಂಕರ್, ಯುದ್ಧದಲ್ಲಿ ಬಳಸಲಾಗುತ್ತಿದ್ದ ವಸ್ತುಗಳನ್ನು ವೀಕ್ಷಣೆ ಮಾಡಿ ಕೊಡಗಿನ ವೀರ ಜನರಲ್ ತಿಮ್ಮಯ್ಯ ಅವರು ಮಾಡಿದ ಸಾಹಸಗಾಥೆಗಳನ್ನು ಕಣ್ ತುಂಬಿಕೊಂಡರು.
Advertisement
Advertisement
ರಾಷ್ಟ್ರಪತಿ ಅವರ ಪತ್ನಿ ಸವಿತಾ ಕೋವಿಂದ್, ಸೇನಾಪಡೆಯ ಮುಖ್ಯಸ್ಥ ಬಿಪಿನ್ ರಾವತ್, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ್ ಲಿಂಬಾವಳಿ, ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಹ್ಮಣಿ, ವೀಣಾ ಅಚ್ಚಯ್ಯ, ನಿವೃತ್ತ ಏರ್ ಮಾರ್ಷಲ್ ಕೆ.ಸಿ.ಕಾರ್ಯಪ್ಪ, ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿಲ್ಲಾ ಪಂಚಾಯಿತಿ ಸಿ.ಇ.ಒ. ಭನ್ವರ್ ಸಿಂಗ್ ಮೀನಾ ಹಾಜರಿದ್ದರು.
Advertisement
ಮ್ಯೂಸಿಯಂ ಲೋಕಾರ್ಪಣೆ ಬಳಿಕ ಬಿಗಿ ಭದ್ರತೆಯಲ್ಲಿ ತೆರಳುತ್ತಿದ್ದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜಿಲ್ಲಾ ಆಸ್ಪತ್ರೆಯ ಬಳಿ ಕಾರಿನಿಂದ ಇಳಿದು ರಸ್ತೆ ಬದಿಯಲ್ಲಿ ನೆರೆದಿದ್ದ ಜನರತ್ತ ಕೈಬೀಸಿದರು. ಜಿಲ್ಲಾ ಆಸ್ಪತ್ರೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಚಪ್ಪಾಳೆ ತಟ್ಟಿ ರಾಷ್ಟ್ರಪತಿಗಳನ್ನು ಬೀಳ್ಕೊಟ್ಟರು.