ರಾಯಚೂರು: ತಾಲೂಕಿನ ಅರಷಿಗೆರೆಯಲ್ಲಿ ಮಂಗಳವಾರ ಸಂಜೆ ಸಿಡಿಲು ಬಡಿದು ಬಯಲು ಕೊಟ್ಟಿಗೆಯಲ್ಲಿ ಕಟ್ಟಿದ್ದ ನಾಲ್ಕು ಎತ್ತುಗಳು ಸಾವನ್ನಪ್ಪಿವೆ.
ಅರಷಿಗೆರೆಯ ರೈತ ಶೇಖರಯ್ಯವರಿಗೆ ಸೇರಿದ ಎತ್ತುಗಳು ಸಿಡಿಲಿಗೆ ಬಲಿಯಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಎತ್ತುಗಳನ್ನು ಕಳೆದುಕೊಂಡು ರೈತ ಕಂಗಾಲಾಗಿದ್ದಾನೆ. ಮುಂಗಾರು ಬಿತ್ತನೆಯ ಸಂದರ್ಭದಲ್ಲಿ ಎತ್ತುಗಳ ಕಳೆದುಕೊಂಡಿರುವುದು ರೈತನಿಗೆ ತುಂಬಲಾರದ ನಷ್ಟವಾಗಿದೆ. ಯಾಪಲದಿನ್ನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Advertisement
Advertisement
ರಾಯಚೂರು ತಾಲೂಕಿನ ಯದ್ಲಾಪುರ ಗ್ರಾಮದಲ್ಲಿ ಬಿರುಗಾಳಿಗೆ 9 ಟಿನ್ ಶೆಡ್ ಮನೆಗಳು ಸಂಪೂರ್ಣ ಜಖಂಗೊಂಡಿವೆ. ಟಿನ್ಗಳು ಗಾಳಿಗೆ ಹಾರಿ ವಿದ್ಯುತ್ ತಂತಿಯ ಮೇಲೆ ಬಿದ್ದಿವೆ. ಮನೆಯಲ್ಲಿನ ದವಸ ಧಾನ್ಯ ಸೇರಿದಂತೆ ಎಲ್ಲಾ ವಸ್ತುಗಳು ಬಿರುಗಾಳಿ ಸಹಿತ ಮಳೆಗೆ ಹಾಳಾಗಿವೆ. ಬಿರುಗಾಳಿಯಿಂದ ಒಂಭತ್ತು ಬಡ ಕುಟುಂಬಗಳು ಸೂರನ್ನು ಕಳೆದುಕೊಂಡು ವಾಸಮಾಡಲು ಜಾಗವಿಲ್ಲದೆ ಪರದಾಡುತ್ತಿವೆ.
Advertisement
Advertisement
ರಮೇಶ್, ಜಿಂದಾವಲಿ, ಅಬ್ದುಲ್ ಸಾಬ್, ಮಾರೆಪ್ಪ, ಹುಲಿಗೆಮ್ಮ, ಹನುಮಂತಿ ಸೇರಿ ಒಂಭತ್ತು ಜನರ ಮನೆಗಳು ಸಂಪೂರ್ಣ ಹಾಳಾಗಿವೆ. ತಾಲೂಕು ಆಡಳಿತ ಕೂಡಲೇ ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ಮನೆ ಕಳೆದುಕೊಂಡ ನಿರಾಶ್ರಿತರು ಒತ್ತಾಯಿಸಿದ್ದಾರೆ. ರಾಯಚೂರು ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಅಲ್ಲಲ್ಲಿ ಭಾರಿ ಗಾಳಿ ಹಾಗೂ ಮಳೆಯಾಗಿದೆ.