ರಾಯಚೂರು: ಜಿಲ್ಲೆಯ ರಾಯಚೂರು ಹಾಗೂ ಸಿಂಧನೂರು ನಗರಗಳ 3ನೇ ದಿನದ ಲಾಕ್ಡೌನ್ನಲ್ಲೂ ಜನ ಯಾವುದೇ ಭೀತಿಯಿಲ್ಲದೆ ರಸ್ತೆಗಿಳಿಯುತ್ತಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಎರಡು ನಗರಗಳನ್ನು ಒಂದು ವಾರ ಕಾಲ ಲಾಕ್ಡೌನ್ ಮಾಡಲಾಗಿದೆ.
ಅನಗತ್ಯವಾಗಿ ಜನ ರಸ್ತೆಗೆ ಇಳಿಯುತ್ತಲೇ ಇದ್ದಾರೆ. ಹೀಗಾಗಿ ಲಾಕ್ಡೌನ್ ಬಿಗಿಗೊಳಿಸಲು ಪೋಲಿಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಲಾಕ್ಡೌನ್ ಹಿನ್ನೆಲೆ ಶಾಸಕರ ಕಾರನ್ನು ಸಹ ವಾಪಸ್ ಕಳುಹಿಸಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ. ರಾಯಚೂರಿನ ಬಸವೇಶ್ವರ ವೃತ್ತದಲ್ಲಿ ಬಂದ ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಕಾರನ್ನು ತಡೆದು ನಿಲ್ಲಿಸಿದ ಪೊಲೀಸರು ಕಾರಿನಲ್ಲಿ ಶಾಸಕರಿಲ್ಲದೆ ಚಾಲಕ ಮಾತ್ರ ಅನಗತ್ಯವಾಗಿ ತೆರಳುತ್ತಿದ್ದ ಹಿನ್ನೆಲೆ ವಾಪಸ್ ಕಳುಹಿಸಿದ್ದಾರೆ.
Advertisement
Advertisement
ನಗರದಲ್ಲಿ ಲಾಕ್ಡೌನ್ ಇದ್ದರೂ ವಾಹನಗಳ ಓಡಾಟ ನಿಂತಿಲ್ಲ. ಅಂಬ್ಯುಲೆನ್ಸ್ ಓಡಾಟಕ್ಕೂ ಅಡ್ಡಿಯಾಗುತ್ತಿರುವ ಹಿನ್ನೆಲೆ ಕ್ರಮ ಕೈಗೊಳ್ಳಲಾಗುತ್ತಿದೆ. ನಗರದ ಬಸವೇಶ್ವರ ವೃತ್ತ, ಸ್ಟೇಷನ್ ವೃತ್ತದಲ್ಲಿ ಅನಾವಶ್ಯಕವಾಗಿ ಓಡಾಡುವವರಿಗೆ ದಂಡ ಹಾಕಿ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಲಾಕ್ಡೌನ್ ನಡುವೆಯೂ ರಸ್ತೆ ಬದಿಯಲ್ಲಿ ವ್ಯಾಪಾರ ಜೋರಾಗಿ ನಡೆಸಿದ್ದ ವ್ಯಾಪಾರಿಗಳಿಗೆ ಪೊಲೀಸರು ಚುರುಕು ಮುಟ್ಟಿಸಿದರು.
Advertisement
Advertisement
ನಗರದ ಅಂಬೇಡ್ಕರ್ ವೃತ್ತದಲ್ಲಿ ಪೊಲೀಸರ ಲಾಠಿ ರುಚಿ ಭಯಕ್ಕೆ ಗಲ್ಲಾ ಪೆಟ್ಟಿಗೆ ಡಬ್ಬ ಅಂಗಡಿಯಲ್ಲೇ ಬಿಟ್ಟು ವ್ಯಾಪಾರಿಗಳು ಪರಾರಿಯಾಗಿದ್ದಾರೆ. ಗಲ್ಲಾ ಪೆಟ್ಟಿಗೆ, ಅಂಗಡಿಯನ್ನು ಪೊಲೀಸರು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜುಲೈ 22ರವರೆಗೆ ರಾಯಚೂರು ಹಾಗೂ ಸಿಂಧನೂರು ನಗರ ಲಾಕ್ಡೌನ್ ಇರಲಿದ್ದು ಅಗತ್ಯ ಹಾಗೂ ತುರ್ತು ಸೇವೆಗೆ ಮಾತ್ರ ಅವಕಾಶ ನೀಡಲಾಗಿದೆ.