ರಾಯಚೂರು: ಜಿಲ್ಲೆಯಲ್ಲಿ 50, 100 ರೂಪಾಯಿ ಆಸೆಗೆ ಅಂತರರಾಜ್ಯ ಚೆಕ್ಪೋಸ್ಟ್ನಲ್ಲಿನ ಸಿಬ್ಬಂದಿ ಕೊರೊನಾ ವೈರಸ್ ಹರಡಿಸುತ್ತಿದ್ದಾರಾ ಎನ್ನುವ ಆತಂಕ ಮೂಡಿದೆ.
ಆಂಧ್ರ ಪ್ರದೇಶದಿಂದ ಬರುವವರು ಚೆಕ್ಪೋಸ್ಟ್ನಲ್ಲಿನ ಪೊಲೀಸರಿಗೆ 100 ರೂ. ಕೊಟ್ಟರೆ ಸಾಕು ಹೋಂ ಕ್ವಾರಂಟೈನ್ ಭೀತಿಯೇ ಇಲ್ಲ. ಕೊರೊನಾ ಹರಡುವಿಕೆ ತಡೆಗಾಗಿ ಮಾಡಿರುವ ಚೆಕ್ಪೋಸ್ಟ್ ಸಿಬ್ಬಂದಿಯೇ ರಾಯಚೂರಿನಲ್ಲಿ ಕೊರೊನಾ ಹರಡುವುದಕ್ಕೆ ಕಾರಣರಾಗುತ್ತಿದ್ದಾರೆ. ಜಿಲ್ಲೆಯ ಗಿಲ್ಲೆಸುಗೂರು ಚೆಕ್ಪೋಸ್ಟ್ನಲ್ಲಿ ಪೋಲೀಸರು, ಆರೋಗ್ಯ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿ ಕೃತ್ಯ ಈಗ ಬಟಾಬಯಲಾಗಿದೆ.
Advertisement
Advertisement
ಆಂಧ್ರದ ಗಡಿಭಾಗದಲ್ಲಿನ ಗಿಲ್ಲೆಸುಗೂರು ಚೆಕ್ಪೋಸ್ಟ್ನಲ್ಲಿ ಹಣ ಕೊಟ್ಟರೆ ಸಾಕು ಆರಾಮಾಗಿ ಆಂಧ್ರಪ್ರದೇಶಕ್ಕೂ ಹೋಗಬಹುದು, ಆಂಧ್ರದಿಂದ ರಾಜ್ಯಕ್ಕೂ ಬರಬಹುದು ಅನ್ನೋ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಚೆಕ್ಪೋಸ್ಟ್ನಲ್ಲಿ ಯಾವುದೇ ವಾಹನಗಳ ತಪಾಸಣೆಯಾಗಲಿ, ಆರೋಗ್ಯ ತಪಾಸಣೆಯಾಗಲಿ ನಡೆಯುತ್ತಲೇ ಇಲ್ಲ. ಈಗ ಮಂತ್ರಾಲಯಕ್ಕೆ ಬಸ್ ಓಡಾಟ ಆರಂಭವಾಗಿದ್ದರೂ ಹೋಂ ಕ್ವಾರಂಟೈನ್ ಜಾರಿಯಲ್ಲಿದೆ. ಸೇವಾಸಿಂಧುವಿನಲ್ಲಿ ಅರ್ಜಿ ಹಾಕಿದವರಿಗೆ ಮಾತ್ರ ಸಾರಿಗೆ ಬಸ್ನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆದರೆ ಚೆಕ್ಪೋಸ್ಟ್ನಲ್ಲಿ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿರುವ ಪೊಲೀಸ್ ಸಿಬ್ಬಂದಿ ಹಣ ತೆಗೆದುಕೊಂಡು ಜನರನ್ನ ಒಳ ಬಿಡುತ್ತಿದ್ದಾರೆ. ಅಂತರರಾಜ್ಯ ಗಡಿಯಲ್ಲಿ ಬೈಕ್, ಕಾರ್, ಟಂಟಂಗಳು ಯಾವುದೇ ಆತಂಕವಿಲ್ಲದೆ ಓಡಾಡುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.
Advertisement
Advertisement
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 414ಕ್ಕೆ ಏರಿದ್ದು, ದಿನೇ ದಿನೇ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಹೀಗಾಗಿ ಜಿಲ್ಲಾಡಳಿತ ಖಾಸಗಿ ವೈದ್ಯರ ಮೊರೆ ಹೋಗಿದ್ದು ನಗರದ ನವೋದಯ ವೈದ್ಯಕೀಯ ಬೋಧಕ ಕಾಲೇಜಿನ ವೈದ್ಯರು ಹಾಗೂ ವಿದ್ಯಾರ್ಥಿಗಳನ್ನ ವೈದ್ಯಕೀಯ ಸೇವೆಗೆ ಬಳಸಿಕೊಳ್ಳಲು ಮುಂದಾಗಿದೆ. ಇಂತಹ ಸಂದರ್ಭದಲ್ಲಿ ಚೆಕ್ ಪೋಸ್ಟ್ ಗಳಲ್ಲಿನ ಸಿಬ್ಬಂದಿ ಹಣ ವಸೂಲಿ ಮಾಡಿ ಆಂಧ್ರಪ್ರದೇಶದಿಂದ ಬರುವವರನ್ನ ರಾಜ್ಯಕ್ಕೆ ಬಿಡುತ್ತಿರುವುದು ಜಿಲ್ಲೆಯಲ್ಲಿ ಆತಂಕವನ್ನ ಹೆಚ್ಚಿಸಿದೆ ಎಂದು ಸ್ಥಳೀಯರು ದೂರಿದ್ದಾರೆ.