ಬೆಂಗಳೂರು: ರಾಜ್ಯದ ಹಲವೆಡೆ ಮತ್ತೆ ವರುಣದೇವ ಅಬ್ಬರಿಸಲು ಶುರುಮಾಡಿದ್ದು, ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದೆ. ಕಳೆದ ಮೂರು ದಿನಗಳಿಂದ ತಲಕಾವೇರಿ, ಭಾಗಮಂಡಲ ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು ಕಾವೇರಿ ನದಿ ಭೋರ್ಗರೆದು ಹರಿಯುತ್ತಿದೆ. ಮಳೆ ಮುಂದುವರೆದಲ್ಲಿ ತ್ರಿವೇಣಿ ಸಂಗಮ, ಭಾಗಮಂಡಲ ಮತ್ತೆ ಜಲಾವೃತವಾಗಲಿದೆ. ಬಹುತೇಕ ಕಡೆಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಜನರಲ್ಲಿ ಮತ್ತೆ ಪ್ರವಾಹ ಮತ್ತು ಭೂಕುಸಿತದ ಭೀತಿ ಎದುರಾಗಿದೆ.
Advertisement
ಕಳೆದ ರಾತ್ರಿಯಿಂದ ಬಳ್ಳಾರಿ ಜಿಲ್ಲೆಯ ಸಂಡೂರು ಸೇರಿದಂತೆ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಜಿಲ್ಲೆಯ ಬಹುತೇಕ ಹಳ್ಳಕೊಳ್ಳಗಳು ಭರ್ತಿಯಾಗಿ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಬರೋಬ್ಬರಿ ಒಂದು ದಶಕದ ಬಳಿಕ ಸಂಡೂರಿನ ನಾರಿಹಳ್ಳ ಜಲಾಶಯ ಭರ್ತಿಯಾಗಿದೆ. ಸಿರುಗುಪ್ಪ ತಾಲೂಕಿನ ಹೆಚ್.ಹೊಸಹಳ್ಳಿ ಮತ್ತು ಹಾಗಲೂರು ಗ್ರಾಮಗಳು ಸಂಪರ್ಕ ಕಡಿತವಾಗಿದೆ. ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
Advertisement
Advertisement
ಧಾರವಾಡದಲ್ಲಿ ರಾತ್ರಿ ಸುರಿದ ಮಳೆಗೆ ನಗರದ ಹಾಶ್ಮಿನಗರ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ರಸ್ತೆಗಳೆಲ್ಲ ಹಳ್ಳದಂತೆ ಆಗಿವೆ. ಬಡಾವಣೆಯ ನಿವಾಸಿಗಳು ಮನೆಯಿಂದ ಹೊರಬರಲು ಸಾಧ್ಯವಾಗದೆ ಪರದಾಡಿದ್ದಾರೆ. ಕೋಡಿ ಹರಿದ ಕೋಲಾರದ ಅಗ್ರಹಾರ ಕೆರೆಗೆ ಸಂಸದ ಎಸ್.ಮುನಿಸ್ವಾಮಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಾಗಿನ ಅರ್ಪಿಸಿದ್ದಾರೆ. ಚಿತ್ರದುರ್ಗದಲ್ಲಿ ಮಳೆಗೆ ಮನೆ ಗೋಡೆ ಕುಸಿದಿದ್ದು, ಅದೃಷ್ಟವಶಾತ್ ಬಾಣಂತಿ ಮಗು ಅಪಾಯದಿಂದ ಪಾರಾಗಿದ್ದಾರೆ