ಬೆಂಗಳೂರು: ಪಾಕಿಸ್ತಾನದ ಮೂಲಕ ದೇಶದ ವಿವಿಧ ರಾಜ್ಯಗಳಲ್ಲಿ ದಾಳಿ ನಡೆಸುತ್ತಿರುವ ಆಫ್ರಿಕನ್ ಮಿಡತೆಯ ಬಗ್ಗೆ ರಾಜ್ಯದ ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಧೈರ್ಯ ತುಂಬಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗಾಳಿಯ ವಿರುದ್ಧ ದಿಕ್ಕಿಗೆ ಆಫ್ರಿಕನ್ ಮಿಡತೆ ಸಂಚರಿಸುವುದಿಲ್ಲ. ಮುಂದಿನ 8 ದಿನಗಳ ಕಾಲ ಗಾಳಿ ಉತ್ತರ ಭಾಗದತ್ತ ತಿರುಗಲಿದೆ. ಆದ್ದರಿಂದ ರಾಜ್ಯಕ್ಕೆ ಮಿಡತೆ ಬರುವ ಸಾಧ್ಯತೆ ಕಡಿಮೆ. ಉತ್ತರದಲ್ಲಿ ಬೀಸುತ್ತಿರುವ ಬಿಸಿ ಗಾಳಿ ಕರ್ನಾಟಕದತ್ತ ಬರೋದಿಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಈಶಾನ್ಯದಿಂದ ನೈರುತ್ಯ ಭಾಗಕ್ಕೆ ಗಾಳಿ ಬೀಸುತ್ತಿದೆ. ಹೀಗಾಗಿ ಶೇಕಡಾ 99 ರಷ್ಟು ಭಾಗ ಮಿಡತೆ ಕರ್ನಾಟಕಕ್ಕೆ ಪ್ರವೇಶ ಮಾಡುವ ಸಾಧ್ಯತೆ ಇಲ್ಲ. ರಾಜ್ಯದ ರೈತರು ಈ ಕುರಿತು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
Advertisement
#2020 Locust attack Jaipur. pic.twitter.com/S5tJAITTQ6
— Chittukuruvi (@chittukuruvi4) May 26, 2020
Advertisement
ಜಿಲ್ಲಾ ಮಟ್ಟದ ಕೃಷಿ ಸಮಿತಿಗೆ ಈ ಬಗ್ಗೆ ಎಲ್ಲಾ ಸೂಚನೆ ನೀಡಿದ್ದೇವೆ. ಅಗ್ನಿ ಶಾಮಕ ಇಲಾಖೆ ಹಾಗೂ ಡ್ರೋನ್ ಮೂಲಕ ಕೀಟನಾಶಕ ಸಿಂಪಡಣೆಗೆ ತಯಾರಿ ನಡೆಸಿದ್ದೇವೆ. ಕೃಷಿ ನಿರ್ದೇಶಕರು ಹಾಗೂ ತೋಟಗಾರಿಕಾ ನಿರ್ದೇಶಕರ ನೇತೃತ್ವದಲ್ಲಿ ಉನ್ನತ ಮಟ್ಟದ ತಂಡ ರಚಿಸಲಾಗಿದೆ. ಈ ತಂಡ ಕೊಪ್ಪಳ ಯಾದಗಿರಿ ಬೀದರ್, ರಾಯಚೂರಿಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಲಿದೆ ಎಂದು ವಿವರಿಸಿದರು. ಇದನ್ನು ಓದಿ: 2 ದಿನದಲ್ಲಿ ಬೀದರ್ಗೆ ಮಿಡತೆ ಸೈನ್ಯ ಎಂಟ್ರಿ – ದಾಳಿ ತಡೆಯಲು ಏನೆಲ್ಲ ಕ್ರಮಕೈಗೊಳ್ಳಲಾಗಿದೆ?
Advertisement
ಭಾರತ ಸರ್ಕಾರದ ಸಂಶೋಧನಾ ಕೇಂದ್ರದಲ್ಲಿ ಮಿಡತೆಗಳ ದಾಳಿ ಕುರಿತಂತೆ ಹೆಚ್ಚಿನ ಸಂಶೋಧನೆಗಳು ನಡೆಯಲಿವೆ. ರೈತರು ಕೂಡ ಕೀಟಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬಹುದು. ರಾಜ್ಯ ಸರ್ಕಾರ ಮಹಾರಾಷ್ಟ್ರ ಸಹಭಾಗಿತ್ವದಲ್ಲಿ ಚರ್ಚೆ ನಡೆಸಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಸದ್ಯ ಉತ್ತರದಲ್ಲಿ ದಾಳಿ ನಡೆಸಿರುವ ಮಿಡತೆಗಳು ದಕ್ಷಿಣ ಆಫ್ರಿಕಾದಿಂದ ಬಂದಿದೆ. ಒಂದು ಮಿಡತೆ ದಿನಕ್ಕೆ ಒಂದು ಗ್ರಾಂ ನಿಂದ ಎರಡು ಗ್ರಾಂ ಆಹಾರ ತಿನ್ನುತ್ತೆ. ಸಂಜೆ 4 ರಿಂದ 7 ಗಂಟೆವರೆಗೂ ಮಾತ್ರ ಆಹಾರ ತಿನ್ನುತ್ತವೆ. ಕ್ಲೋರೋಫೈಪಾಸ್ ಮಿಡತೆ ಹಾವಳಿ ತಡೆಗೆ ಔಷಧಿಯಾಗಿದೆ. ಇದನ್ನ ಬೆಳೆಗಳಿಗೆ ಸಿಂಪಡಣೆ ಮಾಡಿ ರೈತರು ಮಿಡತೆ ದಾಳಿಯನ್ನು ತಡೆಯಬಹುದು. ಅಲ್ಲದೇ ಲಾಂಡಾಸಾಹಲೋತ್ರಿನ್ ಎಂಬ ಔಷಧಿಯನ್ನು ಸಹ ಸಿಂಪಡಣೆ ಮಾಡಬಹುದು. 200 ಕೋಟಿ ಹಣವನ್ನು ಕೀಟನಾಶಕಕ್ಕೆ ಬಳಸಿಕೊಳ್ಳಬಹುದು ಎಂದು ಕೇಂದ್ರ ಹೇಳಿದೆ ಎಂದು ಮಾಹಿತಿ ನೀಡಿದರು. ಇದನ್ನು ಓದಿ: ಉತ್ತರ ಭಾರತ, ಮಹಾರಾಷ್ಟ್ರ ಆಯ್ತು, ಈಗ ಕರ್ನಾಟಕಕ್ಕೂ ಮಿಡತೆ ಆತಂಕ