ಧಾರವಾಡ: ರಸ್ತೆ ಕೆಟ್ಟಿರುವುದನ್ನು ಖಂಡಿಸಿ ರೈತರು ಗ್ರಾಮಕ್ಕೆ ಬಂದ ಅಧಿಕಾರಿಯ ವಾಹನ ಟೈಯರ್ ಅನ್ನು ಪಂಕ್ಚರ್ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಗ್ರಾಮದಲ್ಲಿ ನಡೆದಿದೆ.
ಕಳೆದ ಮೂರು ವರ್ಷಗಳಿಂದ ಮಲಪ್ರಭಾ ಬಲದಂಡೆ ಕಾಲುವೆಯ ದುರಸ್ತಿ ಕಾರ್ಯ ನಡೆದಿದೆ. ಈ ಹಿನ್ನೆಲೆ ಕಾಲುವೆ ಪಕ್ಕದಲ್ಲಿ ನೀರಾವರಿ ಇಲಾಖೆಯ ವಾಹನ ಓಡಾಡಿದ್ದರಿಂದ ಹೊಲಕ್ಕೆ ಹೋಗುವ ರಸ್ತೆ ಎಲ್ಲ ಹಾಳಾಗಿದೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಇದನ್ನು ದುರಸ್ತಿ ಮಾಡದೇ ನಿರ್ಲಕ್ಷ್ಯ ವಹಿಸಿದ್ದರು.
Advertisement
Advertisement
ಇವತ್ತು ಈ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಶ್ರೀಧರ್ ಬಂದಿರುವುದನ್ನು ನೋಡಿದ ಶಿರೂರ ಗ್ರಾಮಸ್ಥರು, ಅಧಿಕಾರಿಯ ವಾಹನದ ಟೈಯರ್ನ ಗಾಳಿಯನ್ನು ತೆಗೆದು ನಿಲ್ಲಿಸಿದ್ದಾರೆ. ಅಲ್ಲದೇ ಶಿರೂರ ಹಾಗೂ ಹಿರೇಕುಂಬಿ ಗ್ರಾಮದ ರಸ್ತೆ ದುರಸ್ತಿ ಮಾಡದೇ ಇದ್ದಲ್ಲಿ ವಾಹನಕ್ಕೆ ಬೆಂಕಿ ಹಚ್ಚುವ ಎಚ್ಚರಿಕೆ ಕೂಡ ನೀಡಿದ್ದಾರೆ. ಕಳೆದ ಮೂರು ವರ್ಷಗಳಿಂದ ರೈತರಿಗೆ ಹೊಲಕ್ಕೆ ಹೋಗಲು ಹಾಗೂ ಬೆಳೆದ ಬೆಳೆಯನ್ನು ತರಲು ಇದೇ ರಸ್ತೆ ಉಪಯೋಗ ಮಾಡುತ್ತಿದ್ದರು. ಆದರೆ ರಸ್ತೆ ಹಾಳಾಗಿದ್ದರಿಂದ ರೈತರಿಗೆ ತೊಂದರೆಯಾಗಿತ್ತು.