-ಮರದ ಕೆಳಗೆ ಬಾಣಂತಿ, ಮಗುವಿನ ಆರೈಕೆ
ಹುಬ್ಬಳ್ಳಿ: ಮಹಿಳೆಯರಿಗೆ ಹೆರಿಗೆ ಅಂದರೇ ಅದು ಪುನರ್ಜನ್ಮವೇ ಸರಿ. ಇನ್ನೊಂದು ಜೀವಕ್ಕೆ ಜನ್ಮ ನೀಡುವ ತಾಯಿ ಅದೆಷ್ಟೋ ನೋವನ್ನು ಅನುಭವಿಸುತ್ತಾಳೆ. ಅಲ್ಲದೇ ತನ್ನ ಹೆರಿಗೆ ತವರು ಮನೆಯಲ್ಲಿಯೇ ಆಗಬೇಕು ಎಂಬುವಂತ ಬಯಕೆ ಪ್ರತಿಯೊಬ್ಬ ತಾಯಿಯಲ್ಲಿಯೂ ಇದ್ದೆ ಇರುತ್ತದೆ. ಆದರೆ ಹುಬ್ಬಳ್ಳಿಯಲ್ಲಿ ರಸ್ತೆ ಬದಿಯಲ್ಲಿಯೇ ತಾಯಿ ಮಗುವಿಗೆ ಜನ್ಮ ನೀಡಿದ್ದಾಳೆ.
ಪಂಜಾಬ್ ಮೂಲದ ಮಹಿಳೆಯೊಬ್ಬರು ಲಾಕ್ಡೌನ್ನಿಂದ ಹುಬ್ಬಳ್ಳಿಯಲ್ಲೇ ಸಿಲುಕಿದ್ದು, ಆಸ್ಪತ್ರೆಗೂ ತೆರಳಲು ಸಾಧ್ಯವಾಗದೆ ರಸ್ತೆ ಬದಿಯಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಪಂಜಾಬ್ನ ಫರೀದಕೋಟ್ ಮೂಲದ ಧರ್ಮಸಿಂಗ್ ಬಾಬುಸಿಂಗ್ ಎಂಬುವವರ ಕುಟುಂಬ ಆಯುರ್ವೇದ ಔಷಧ ಮಾರಾಟ ಮಾಡಲು ಸುಮಾರು ಆರು ತಿಂಗಳ ಹಿಂದೆಯಷ್ಟೇ ವಾಣಿಜ್ಯನಗರಿ ಹುಬ್ಬಳ್ಳಿಗೆ ಆಗಮಿಸಿತ್ತು. ಲಾಕ್ಡೌನ್ ಹಿನ್ನಲೆಯಲ್ಲಿ ಊರಿಗೆ ಹೋಗಲು ಸಾಧ್ಯವಾಗದೆ ಹುಬ್ಬಳ್ಳಿಯ ಗಬ್ಬೂರ ಹತ್ತಿರದ ಆರ್.ಟಿ.ಒ ಕಚೇರಿ ಹಿಂಭಾಗದ ರಸ್ತೆ ಬದಿಯಲ್ಲಿ ಆಶ್ರಯ ಪಡೆದುಕೊಂಡಿದ್ದರು.
Advertisement
Advertisement
ಕುಟುಂಬದ ದಾನ್ಕೌರ್ ಹೆಸರಿನ ಮಹಿಳೆಗೆ ಬೆಳಗಿನ ಜಾವ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಮಾರ್ಗ ಮಧ್ಯದಲ್ಲಿಯೇ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಬಳಿಕ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದ್ದು, ತಾಯಿ ಮಗು ಇಬ್ಬರು ಕೂಡ ಆರೋಗ್ಯವಾಗಿದ್ದಾರೆ.
Advertisement
ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ತಾಯಿ ಮತ್ತು ಮಗು ಈಗ ಉಳಿದುಕೊಳ್ಳಲು ಸೂರು ಇಲ್ಲದೇ ಮರದ ಕೆಳಗೆ ಆಶ್ರಯ ಪಡೆದಿದ್ದು, ದಾನಿಗಳ ನೆರವಿನಿಂದ ಜೀವನ ನಡೆಸುತ್ತಿದ್ದಾರೆ. ಇನ್ನೂ ಊರಿಗೆ ಹೋಗಲು ವಾಹನಕ್ಕೆ ಡಿಸೇಲ್ ಹಾಕಿಸುವಷ್ಟು ಹಣವಿಲ್ಲ. ಅಲ್ಲದೇ ಬಾಣಂತಿಯ ಹಾಗೂ ಮಗುವಿನ ಆರೈಕೆಗೂ ಏನು ಇಲ್ಲದಂತಾಗಿದ್ದು, ಸರ್ಕಾರ ಏನಾದರೂ ಸಹಾಯ ಮಾಡಿ ಪಂಜಾಬ್ಗೆ ತೆರಳಲು ಅವಕಾಶ ಕಲ್ಪಿಸಬೇಕು ಎಂದು ಧರ್ಮಸಿಂಗ್ ಕುಟುಂಬ ಮನವಿ ಮಾಡಿದೆ.