– ಜಿಲ್ಲೆಯಲ್ಲೇ ಇದ್ದರೂ ಬಾರದ ಜಿಲ್ಲಾಧಿಕಾರಿ
– ಜಿಲ್ಲಾಧಿಕಾರಿ ಭರವಸೆ ನೀಡುವವರೆಗೂ ಪ್ರತಿಭಟನೆ ಬಿಡದ ಎಂಎಲ್ಎ
ಕೋಲಾರ: ರಸ್ತೆ ಅಗಲೀಕರಣಕ್ಕಾಗಿ ಒತ್ತಾಯಿಸಿ ಕೆಜಿಎಫ್ ಶಾಸಕಿ ರೂಪ ಶಶಿಧರ್ ಸತತ ಆರು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದು, ಮೂರು ಗಂಟೆಗಳ ಕಾಲ ಮಳೆಯಲ್ಲೇ ನೆನೆದು, ಜಿಲ್ಲಾಧಿಕಾರಿ ಸತ್ಯಭಾಮ ಭರವಸೆ ನೀಡುವವರೆಗೆ ಪ್ರತಿಭಟನೆ ಹಿಂಪಡೆದಿಲ್ಲ.
Advertisement
ಜಿಲ್ಲಾಡಳಿತದ ಭವನದ ಎದುರು ಮಳೆಯಲ್ಲೆ ಶಾಸಕಿ ಒಬ್ಬಂಟಿಯಾಗಿ ಮೌನ ಪ್ರತಿಭಟನೆ ನಡೆಸಿದರು. ಅಲ್ಲದೆ ಜಿಲ್ಲಾಧಿಕಾರಿ ಹಾಗೂ ಶಾಸಕಿ ನಡುವೆ ವಾಕ್ಸಮರ ತಾರಕಕ್ಕೇರಿತ್ತು. ಜಿಲ್ಲೆಯ ಕೆಜಿಎಫ್ ನಗರದ ಅಶೋಕ ರಸ್ತೆ ಅಗಲೀಕರಣ ಕಾಮಗಾರಿ ಹಲವು ಕಾರಣಗಳಿಂದ ನಿಂತು ಹೋಗಿದೆ. ಕೆಲವರು ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದರು. ನಂತರ ಇದೀಗ ತಡೆಯಾಜ್ಞೆ ತೆರವುಗೊಳಿಸಿ ಎಂಟು ತಿಂಗಳಾಗಿದೆ. ಆದರೂ ಕಾಮಗಾರಿ ಆರಂಭಿಸಿಲ್ಲ ಎಂಬುದು ರೂಪಾ ಶಶಿಧರ್ ಆರೋಪಿಸಿದರು.
Advertisement
ರಸ್ತೆ ಅಗಲೀಕರಣದ ಬಗ್ಗೆ ಸಾಕಷ್ಟು ಬಾರಿ ಅಧಿಕಾರಿಗಳ ಬಳಿ ಮನವಿ ಮಾಡಿದರೂ ಅಧಿಕಾರಿಗಳಿಂದ ಸರಿಯಾದ ಸ್ಪಂದನೆ ಸಿಕ್ಕಿಲ್ಲ. ಹೀಗಾಗಿ ಶಾಸಕಿ ರೂಪ ಜಿಲ್ಲಾಧಿಕಾರಿ ಕಚೇರಿ ಎದುರು ಸುಮಾರು 6 ಗಂಟೆಗಳ ಕಾಲ ನಿಂತುಕೊಂಡೇ ಪ್ರತಿಭಟನೆ ನಡೆಸಿದರು. ಈ ವೇಳೆ ಮಳೆ ಬಂದರೂ ಜಗ್ಗದೆ, ಮಳೆಯಲ್ಲೇ ನೆನೆಯುತ್ತ ಪ್ರತಿಭಟನೆ ಮಾಡಿದರು. ಪ್ರತಿಭಟನೆ ವಿಷಯ ಗೊತ್ತಿದ್ದೂ ಜಿಲ್ಲಾಧಿಕಾರಿ ಸತ್ಯಭಾಮ ತಮ್ಮ ಕಚೇರಿಗೆ ಬಾರದೆ, ಕೋಲಾರ ತಾಲೂಕು ಹೊನ್ನೇನಹಳ್ಳಿ ಬಳಿ ಅಧಿಕಾರಿಗಳ ಸಭೆ ನಡೆಸುತ್ತಿದ್ದರು. ಇತ್ತ ಸ್ಥಳಕ್ಕೆ ಬಾರದ ಡಿಸಿಗಾಗಿ ಶಾಸಕಿ ಮಳೆಯಲ್ಲಿ ನೆನೆಯುತ್ತಾ ನಿಂತು ಸುಸ್ತಾಗಿದ್ದರು. ನಾಲ್ಕು ಗಂಟೆಗಳ ನಂತರ ಸ್ಥಳಕ್ಕೆ ಬಂದ ಡಿಸಿ, ಶಾಸಕಿಯ ಜೊತೆಗೆ ಮಾತುಕತೆ ನಡೆಸಿದರು.
Advertisement
Advertisement
ಆರು ಗಂಟೆಗಳ ಪ್ರತಿಭಟನೆ ಬಳಿಕ ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ಸತ್ಯಭಾಮ ಹಾಗೂ ಶಾಸಕಿ ರೂಪ ಶಶಿಧರ್ ನಡುವೆ ಮಾತಿನ ಸಮರವೇ ಶುರುವಾಗಿತ್ತು. ಇಬ್ಬರ ನಡುವೆ ಏರು ಧ್ವನಿಯಲ್ಲೇ ಮಾತಿನ ಚಕಮಕಿ ಶುರುವಾಗಿತ್ತು. ಉದ್ದೇಶ ಪೂರ್ವಕವಾಗಿ ಕೆಲಸ ವಿಳಂಬ ಮಾಡುತ್ತಿದ್ದೀರಿ ಎಂದು ಜಿಲ್ಲಾಧಿಕಾರಿ ವಿರುದ್ಧ ಶಾಸಕಿ ರೂಪ ಕೂಗಾಡಿದರು. ಇತ್ತ ಡಿಸಿ ಸತ್ಯಭಾಮ ಕೂಡಾ ತನಗೆ ಮಾಡಲು ಸಾಕಷ್ಟು ಕೆಲಸಗಳಿವೆ. ಕೊರೊನಾ ಕೆಲಸ ಇದೆ, ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಇದೆ, ಜೊತೆಗೆ ಈಗ ಜಿಲ್ಲಾಪಂಚಾಯತ್ ಜವಾಬ್ದಾರಿ ಕೂಡಾ ಇದೆ ಎಂದು ಪ್ರತ್ಯುತ್ತರ ನೀಡಿದರು.
ಕೊನೆಗೆ ವಿಧಾನಸಭೆ ಅಧಿವೇಶನದ ಬಳಿಕ ರಸ್ತೆ ಕಾಮಗಾರಿ ಆರಂಭಿಸುವುದಾಗಿ ಭರವಸೆ ನೀಡಿದರು. ಅವರ ಮಾತಿಗೆ ಒಪ್ಪಿದ ಶಾಸಕಿ, ಇದರ ಹಿಂದೆ ಯಾರ ಒತ್ತಡ ಇದೆ, ಏನು ಅನ್ನೋದು ಗೊತ್ತಿದೆ ಅದೇನೆ ಇದ್ದರೂ, ನನಗೆ ಕೆಲಸ ಮಾಡಿಕೊಡಿ. ಇದು ನನ್ನ ವೈಯಕ್ತಿಕ ಕೆಲಸ ಅಲ್ಲ. ಆಗ ಆದಷ್ಟು ಬೇಗ ಕೆಲಸ ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿದ ಮೇಲೆ ಶಾಸಕಿ ಪ್ರತಿಭಟನೆ ಕೈಬಿಟ್ಟು ಪ್ರತಿಭಟನಾ ಸ್ಥಳದಿಂದ ತೆರಳಿದರು.
ರಸ್ತೆ ವಿಚಾರವಾಗಿ ಶಾಸಕಿ ರೂಪ ಈಗಾಗಲೇ ಒಂದು ಬಾರಿ ಮಳೆಯಲ್ಲೇ ನೆನೆಯುತ್ತಾ ಪ್ರತಿಭಟನೆ ಮಾಡಿದ್ದರು. ಈಗ ಎರಡನೇ ಬಾರಿ ಪ್ರತಿಭಟನೆ ಮಾಡುತ್ತಿದ್ದು, ಕೋರ್ಟ್ ಆದೇಶವಿದ್ದರೂ ಕೆಲಸ ಆರಂಭಿಸಿಲ್ಲ. ಅಲ್ಲದೆ ರಸ್ತೆ ಕಿರಿದಾದ್ದರಿಂದ ನಿತ್ಯ ಜನರಿಗೆ ಸಮಸ್ಯೆಯಾಗುತ್ತಿದೆ.