ಇಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಈಗ್ಗೆ ವರ್ಷಗಳಿಂದೀಚೆಗೆ ಯೋಗಕ್ಕೆ ವಿಶ್ವ ಮಾನ್ಯತೆ ಸಿಕ್ಕಿ ಅದು ಎಲ್ಲೆಡೆ ಹಬ್ಬಿಕೊಂಡಿದೆ. ಯೋಗದ ಪರಿಚಯವೇ ಇಲ್ಲದಿದ್ದ ದೇಶಗಳ ಜನರೂ ಕೂಡಾ ಅದರ ಮನೋ ದೈಹಿಕ ಪರಿಣಾಮಗಳನ್ನು ಅನುಭವಿಸಿ ಮುದಗೊಳ್ಳುತ್ತಿದ್ದಾರೆ. ಕೇವಲ ದೈಹಿಕ ಧೃಡತ್ವ ಮಾತ್ರವಲ್ಲ; ಮಾನಸಿಕ, ಭಾವನಾತ್ಮಕವಾಗಿಯೂ ಪವಾಡದಂಥಾ ಪರಿಣಾಮ ಬೀರಬಲ್ಲ ಯೋಗ ಅಧ್ಯಾತ್ಮಿಕ ಸಾಧನೆಯೊಂದಿಗೂ ನೇರ ಕೊಂಡಿಯನ್ನೊಳಗೊಂಡಿದೆ. ಆದರೆ, ನಮ್ಮ ನೆಲದಲ್ಲಿ ಆವಿರ್ಭವಿಸಿರುವ ಯೋಗ ಇಂದು ವಿಶ್ವವ್ಯಾಪಿಯಾಗಿದ್ದರೂ ನಮಗೇ ಅದರ ಮಹತ್ವ ಗೊತ್ತಿಲ್ಲದ ದುಃಸ್ಥಿತಿಯಿದೆ. ಈ ಸಂದರ್ಭದಲ್ಲಿ ಯೋಗದಲ್ಲಿ ಸಾಧನೆ ಮಾಡಿ ಯೋಗಾಚಾರ್ಯರೆಂದೇ ಹೆಸರಾಗಿರುವ, ಸತ್ವ ಯೋಗಪೀಠದ ಸಂಸ್ಥಾಪಕರಾಗಿರುವ ಬಾಳೆಕುಡಿಗೆ ಪರಮೇಶ್ವರ ಯೋಗಾಭ್ಯಾಸದಲ್ಲಿ ಅಗಾಧ ಸಾಧ್ಯತೆಗಳ ಬಗ್ಗೆ ಒಂದಷ್ಟು ಅಚ್ಚರಿದಾಯಕ ಅಂಶಗಳನ್ನು ತೆರೆದಿಟ್ಟಿದ್ದಾರೆ.
Advertisement
ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಅದರ ಬಗ್ಗೆ ಒಂದಷ್ಟು ಮಂದಿ ಮಾತಾಡುತ್ತಾರೆ. ಆದರೆ ಅದನ್ನು ವ್ಯವಸ್ಥಿತವಾಗಿ ಹೇಗೆ ಜನರ ಜೀವನದ ಭಾಗವಾಗಿಸಬೇಕು, ಆ ಮೂಲಕ ಎಲ್ಲರನ್ನೂ ಆರೋಗ್ಯದಿಂದಿರುವಂತೆ ಪ್ರೇರೇಪಿಸಬೇಕೆಂಬ ರೂಪುರೇಷೆಯಾಗಲಿ, ಇಚ್ಛಾಶಕ್ತಿಯಾಗಲಿ ಹೆಚ್ಚಿನವರಿಗೆ ಇದ್ದಂತಿಲ್ಲ. ಈಗಂತೂ ಜನ ಅನಾರೋಗ್ಯದ ಕಟಾಂಜನದಂತಾಗಿ ಕಂಗಾಲಾಗಿದ್ದಾರೆ. ಅದಕ್ಕೆ ಆ ಕ್ಷಣದ ಪರಿಹಾರ ಸೂಚಿಸೋದಷ್ಟಕ್ಕೇ ವ್ಯದ್ಯಕೀಯ ಕ್ಷೇತ್ರ ಹೈರಾಣಾಗುತ್ತಿದೆ. ಒತ್ತಡದ ಬದುಕು, ಅದು ಕರುಣಿಸೋ ಎಲ್ಲ ಬಗೆಯ ಆಘಾತ, ಅನಾರೋಗ್ಯಗಳಿಗೂ ಯೋಗ ಹೇಗೆ ಪರಿಹಾರವಾಗಬಲ್ಲುದೆಂಬುದನ್ನು ಪರಮೇಶ್ವರರಂಥಾ ಯೋಗಾಚಾರ್ಯರೇ ಸ್ಪಷ್ಟವಾಗಿ ಪ್ರಚುರಪಡಿಸುತ್ತಾರೆ.
Advertisement
Advertisement
ಕ್ರಿಸ್ತಪೂರ್ವ ಮೂರನೇ ಶತಮಾನದ ಸುಮಾರಿಗೆ ಪತಂಜಲಿ ಋಷಿಯಿಂದ ಜೀವ ಪಡೆದ ಯೋಗ ಅನೂಚಾನವಾಗಿ ಭಾರತೀಯ ಪರಂಪರೆಯಲ್ಲಿ ಹಾಸುಹೊಕ್ಕಾಗಿದೆ. ದುರಂತವೆಂದರೆ, ಶತಮಾನಗಳೇ ಕಳೆದರೂ ಯೋಗವೆಂಬುದು ಶಾಸ್ತ್ರವಲ್ಲ; ಅದೊಂದು ದರ್ಶನ ಎಂಬ ಪರಿಕಲ್ಪನೆ ಸಾರ್ವತ್ರಿಕವಾಗಿ ಪಡಿಮೂಡಿಕೊಂಡಿಲ್ಲ. ಈ ಬಗ್ಗೆ ಒಂದು ಕೊರಗಿಟ್ಟುಕೊಂಡೇ ಯೋಗಾಭ್ಯಾಸವನ್ನು ಹಬ್ಬಿಸಲು ಶ್ರಮಿಸುತ್ತಿರುವವರು ಬಾಳೆಕುಡಿಗೆ ಪರಮೇಶ್ವರ್. ಬನಶಂಕರಿ ಎರಡನೇ ಹಂತದಲ್ಲಿರುವ ಸತ್ವ ಯೋಗಪೀಠದ ಮೂಲಕ ಅವರು ಸಂಸದ ತೇಜಸ್ವಿ ಸೂರ್ಯರಿಗೆ ಯೋಗ ಗುರುವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಸ್ಟರ್ ಹಿರಣ್ಣಯ್ಯರಂಥ ಸಾಧಕರಿಗೆ ಯೋಗಾಭ್ಯಾಸದ ರುಚಿ ಹತ್ತಿಸಿದ ಕೀರ್ತಿಯೂ ಪರಮೇಶ್ವರ್ ಅವರದ್ದಾಗಿದೆ. ಇನ್ನುಳಿದಂತೆ ಕನ್ನಡ ಚಿತ್ರರಂಗದ ಯುವ ನಟಿ ಸಂಯುಕ್ತಾ ಹೊರನಾಡು ಕೂಡಾ ಸತ್ವ ಯೋಗಪೀಠದಲ್ಲಿ ಯೋಗಾಭ್ಯಾಸ ಮಾಡುತ್ತಿದ್ದಾರೆ. ಈ ಮೂಲಕ ಯುವ ಸಮುದಾಯವೂ ಯೋಗದತ್ತ ವಾಲಿಕೊಳ್ಳುವ ಆಶಾವಾದ ಚಿಗುರಿಕೊಂಡಿದೆ.
Advertisement
ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳ ಪತಂಜಲಿ ಯೋಗಮಹಾವಿದ್ಯಾಲಯದಲ್ಲಿ ಯೋಗ ಡಿಪ್ಲೊಮೋ ಪಡೆದುಕೊಂಡಿರುವವರು ಬಾಳೆಕುಡಿಗೆ ಪರಮೇಶ್ವರ್. ಮಲ್ಲಾಡಿಹಳ್ಳಿ ಸ್ವಾಮಿಗಳ ಪ್ರೀತಿಪಾತ್ರರಾಗಿದ್ದುಕೊಂಡು ಅವರ ಆಣತಿಯಂತೆ ಕೊಡಗು ಸೇರಿದಂತೆ ನಾಡಿನ ಉದ್ದಗಲಕ್ಕೂ ಯೋಗಾಭ್ಯಾಸ ಶಿಬಿರಗಳನ್ನು ನಡೆಸಿದ ಕೀರ್ತಿ ಅವರಲ್ಲಿದೆ. ಇದರೊಂದಿಗೆ ಸ್ವತಃ ಕಾಲೇಜು ದಿನಗಳಿಂದಲೇ ಯೋಗಪಟುವಾಗಿದ್ದುಕೊಂಡು ಅದರಲ್ಲಿ ಸಾಧನೆ ಮಾಡಿರುವ ಪರಮೇಶ್ವರ್ ಯೋಗದ ಕರಾಮತ್ತುಗಳ ಬಗ್ಗೆ ಹೇಳುತ್ತಿದ್ದರೆ ಯಾರಿಗಾದರೂ ಅಚ್ಚರಿಯಾಗದಿರೋದಿಲ್ಲ.
ಯುವ ಸಮುದಾಯವನ್ನು ಯೋಗದತ್ತ ವಾಲುವಂತೆ ಮಾಡಿದರೆ ಒಂದೊಳ್ಳೆ ಸಮಾಜ ಸೃಷ್ಟಿಸಿದಂತಾಗುತ್ತದೆ. ಯುವ ಸಮೂಹವನ್ನು ಮಾನಸಿಕವಾಗಿ, ದೈಹಿಕವಾಗಿ ಗಟ್ಟಿಗೊಳಿಸುವಂಥಾ ಎಲ್ಲ ಅಂಶಗಳನ್ನೂ ಯೋಗ ಒಳಗೊಂಡಿದೆ. ಈವತ್ತಿಗೆ ಫಿಟ್ನೆಸ್ ಅಂದರೆ ಜಿಮ್, ವರ್ಕೌಟ್ ಎಂಬಂತಾಗಿದೆ. ಆದರೆ ಯೋಗವೆಂಬುದು ಮಾನಸಿಕ, ದೈಹಿಕ ಮತ್ತು ಅಧ್ಯಾತ್ಮಿಕ ಅಣಂಶಗಳ ಸಂಪೂರ್ಣ ಪ್ಯಾಕೇಜ್ ಇದ್ದಂತೆ. ನಿರಂತರವಾದ ಅಭ್ಯಾಸದಿಂದ ನಿರಾಳವಾಗಿ ಬದುಕು ನಡೆಸುವ, ಸದಾ ಚೈತನ್ಯದಿಂದಿರುವ ಮತ್ತು ಹಣ್ಣಣ್ಣು ಮುದುಕರಾದರೂ ಕಾಯಿಲೆ ಕಸಾಲೆಗಳ ಹಂಗಿಲ್ಲದೆ ಲವಲವಿಕೆಯಿಂದಿರೋ ವಿಫುಲ ಅವಕಾಶಗಳ ಯೋಗದಲ್ಲಿವೆ.
ಈವತ್ತಿಗೂ ಪರಮೇಶ್ವರ್ ಅವರನ್ನು ಅದೆಷ್ಟೋ ಮಂದಿ ನಾನಾ ಬಾಧೆಗಳನ್ನಿಟ್ಟುಕೊಂಡು ಸಂಧಿಸುತ್ತಾರೆ. ಆದರೆ ಅಂಥವರಿಗೆ ಯೋಗವೆಂಬುದು ಕಾಯಿಲೆಯನ್ನು ಆ ಕ್ಷಣಕ್ಕೆ ಹೋಗಲಾಡಿಸೋ ಗುಳಿಗೆಯಲ್ಲ; ಅದು ಖಾಯಿಲೆಗಳೇ ಬಾರದಂತೆ ತಡೆಗಟ್ಟುವ ಮಂತ್ರದಂಡವೆಂಬ ಕಿಂಚಿತ್ ಜ್ಞಾನವಿರೋದಿಲ್ಲ. ಪರಮೇಶ್ವರ್ ಅವರ ಪ್ರಕಾರ ಯೋಗ ನಿರಂತರವಾದ, ನಿಯಮಿತವಾದ ಅಭ್ಯಾಸಗಳಿಗೆ ಒಲಿಯುವಂಥಾದ್ದು. ಇದರಿಂದ ಬಿಪಿ, ಶುಗರ್ನಂಥಾ ರೋಗಗಳೇ ತಹಬಂದಿಗೆ ಬಂದಿರೋದು ಕಣ್ಣ ಮುಂದಿನ ದರ್ಶನ. ಇದಕ್ಕೆ ಪರಮೇಶ್ವರ್ ಅವರ ಬಳಿ ದಂಡಿ ದಂಡಿ ಉದಾಹರಣೆಗಳಿದ್ದಾವೆ.
ಯೋಗದಿಂದ ಅಪರಿಮಿತವಾದ ಧೀಶಕ್ತಿ ಪ್ರತಿಯೊಬ್ಬರಿಗೂ ದಕ್ಕುತ್ತದೆ. ಆದರೆ ಅದನ್ನು ನುರಿತವರ ಮಾರ್ಗದರ್ಶನದಲ್ಲಿಯೇ ಮಾಡಿದರಷ್ಟೇ ಪರಿಣಾಮಕಾರಿಯಾಗಿರುತ್ತದೆ. ಒಂದಷ್ಟು ಆಸನ, ವಿದ್ಯೆಗಳನ್ನು ಕಲಿತು ಅದನ್ನೇ ಯೋಗ ಎಂಬಂತೆ ಅಂಗಡಿ ತೆರೆದು ಕೂತವರು ಸಾಕಷ್ಟಿದ್ದಾರೆ. ಬೆಂಗಳೂರಿನಂಥಾ ನಗರಗಳಲ್ಲಿ ಅದೊಂದು ವ್ಯವಹಾರವಾಗಿದೆ. ಆದರೆ ಇಂಥವುಗಳಿಂದ ಯೋಗದ ನೈಜ ಘನತೆ ಮುಕ್ಕಗುತ್ತಿದೆ. ಆದರದು ಯೋಗಾಚಾರ್ಯ ಪರಮೇಶ್ವರ್ ಅವರಂಥ ಯೋಗ ಸಾಧಕರ ಸಮ್ಮುಖದಲ್ಲಿಯಷ್ಟೇ ಸಾರ್ಥಕ್ಯ ಪಡೆದುಕೊಳ್ಳಲು ಸಾಧ್ಯ.
ಈವತ್ತಿಗೆ ಕರ್ನಾಟಕದಲ್ಲಿ ಯೋಗದ ಬಗ್ಗೆ ನಿಖರವಾದ, ಮಹತ್ತರವಾದ ಜ್ಞಾನ ಹೊಂದಿರುವ ಕೆಲವೇ ಕೆಲ ಜನರಲ್ಲಿ ಪರಮೇಶ್ವರ್ ಮೊದಲಿಗರಾಗಿ ನಿಲ್ಲುತ್ತಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಪುಟ್ಟ ಊರು ಕೊಗ್ರೆ. ಅದರ ಭಾಗವಾಗಿರೋ ಬಾಳೆಕುಡಿಗೆ ಮೂಲದವರಾದ ಪರಮೇಶ್ವರ್ ಎಂಭತ್ತರ ದಶಕದಲ್ಲಿಯೇ ಯೋಗ ವಿದ್ಯೆಯ ಪ್ರವರ್ತಕರಾಗಿ ಬೆಳೆಯಲಾರಂಭಿಸಿದವರು. ಆರಂಭದಲ್ಲಿ ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದುಕೊಂಡು ಮಲೆನಾಡು ಭಾಗದಲ್ಲಿ ಯೋಗವನ್ನು ಪ್ರಚುರಪಡಿಸುತ್ತಾ ಬಂದಿದ್ದವರು ಬಾಳೆಕುಡಿಗೆ ಪರಮೇಶ್ವರ್.
ವೈಯಕ್ತಿಕ ಸಂಕಷ್ಟ, ಏಳುಬೀಳುಗಳೆಲ್ಲವನ್ನೂ ಯೋಗವೆಂಬೋ ಧೀಶಕ್ತಿಯ ಮೂಲಕವೇ ಗೆಲ್ಲುತ್ತಾ ಬಂದಿರೋ ಪರಮೇಶ್ವರರ ಯಾನವೇ ಯೋಗದ ಸಾಧ್ಯತೆಗಳಿಗೂ ಉದಾಹರಣೆಯಂತಿದೆ. ಶಾಲಾ ಮಟ್ಟದಲ್ಲಿಯೇ ಯೋಗಾಭ್ಯಾಸ ಮಾಡುವಂಥಾ ವ್ಯವಸ್ಥೆಯಾಗಬೇಕೆಂಬ ಕನಸು ಹೊಂದಿರೋ ಅವರು ಈ ಕ್ಷಣಕ್ಕೂ ದಿನಕ್ಕೆ ಹದಿಮೂರು ಘಂಟೆಗಳ ಕಾಲ ಯೋಗದ ಸಾನಿಧ್ಯದಲ್ಲಿಯೇ ಕಳೆಯುತ್ತಾರೆ. ಐವತ್ತನಾಲಕ್ಕು ವರ್ಷದಲ್ಲಿಯೂ ಲವಲವಿಕೆಯಿಂದಿರೋ ಅವರಿಗೆ ನಾಡಿನಾದ್ಯಂತ ಶಿಷ್ಯವರ್ಗವಿದೆ.
ಯೋಗದಿಂದ ಇಡೀ ನಾಡು ಸ್ವಸ್ಥವಾಗೋ ಕಾಲ ಬರಲೆಂದು ಆಶಿಸುವ ಪರಮೇಶ್ವರ್ ಸತ್ವ ಯೋಗಪೀಠವನ್ನು ಅಂಥಾದ್ದೊಂದು ಪರಿವರ್ತನೆಯ ಶಕ್ತಿಪೀಠವಾಗಿಸಿಕೊಂಡಿದ್ದಾರೆ. ಯೋಗವನ್ನು ವ್ಯವಹಾರವಾಗಿಸದೆ ಅದನ್ನು ಅಧ್ಯಾತ್ಮಿಕ ಪಾವಿತ್ರ್ಯದಿಂದಲೇ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಸತ್ವ ಯೋಗ ಕೇಂದ್ರದಲ್ಲಿ ಸಂಸದ ತೇಜಸ್ವಿ ಸೂರ್ಯ, ಆನಂದ ಗುರೂಜಿ, ನಟಿ ಸಂಯುಕ್ತಾ ಹೊರನಾಡು ಮುಂತಾದವರೆಲ್ಲ ತರಬೇತಿ ಪಡೆಯುತ್ತಾ ಬಂದಿದ್ದಾರೆ. ಮಲೆನಾಡು ಭಾಗದ ಹೆಮ್ಮೆಯ ಸಾಧಕರಾಗಿದ್ದುಕೊಂಡು ಈಗ ಬೆಂಗಳೂರಿನಲ್ಲಿ ನೆಲೆ ನಿಂತಿರುವ ಯೋಗಾಚಾರ್ಯ ಬಾಳೆಕುಡಿಗೆ ಪರಮೇಶ್ವರ್ ಬನಶಂಕರಿ ಎರಡನೇ ಹಂತದಲ್ಲಿರುವ ಸತ್ವ ಯೋಗಪೀಠ ಯೋಗಾಭ್ಯಾಸದ ಶಕ್ತಿಪೀಠವಾಗಿ ಕಾರ್ಯನಿರ್ವಹಿಸುತ್ತಿದೆ.