ಮುಂಬೈ: ಮನೆಗೆ ತಂದ ಮೊಸರನ್ನ ತಿಂದಿದ್ದಕ್ಕೆ ಪತ್ನಿಗೆ ಚಾಕು ಇರಿದ ಪತಿಗೆ ನ್ಯಾಯಾಲಯ 8 ವರ್ಷ ಜೈಲು ಶಿಕ್ಷೆಯನ್ನ ವಿಧಿಸಿದೆ.
ಸಚಿನ್ ಮಾಲೊರೆ (39) ಆಂಟಾಪ್ ಹಿಲ್ ನಿವಾಸಿಯಾಗಿದ್ದಾನೆ. ಈತನಿಂದ ಹಲ್ಲೆಗೊಳಗಾದ ಪತ್ನಿ ರಂಜನಾ ಆಗಿದ್ದಾಳೆ. ದಂಪತಿ ಜಗಳ ಕೋರ್ಟ್ ಮೆಟ್ಟಲೇರಿತ್ತು. ಇದೀಗ ಆರೋಪಿಗೆ 8 ವರ್ಷ ಜೈಲು ಶಿಕ್ಷೆಯಾಗಿದೆ.
ಪ್ರಕರಣ ಹಿನ್ನೆಲೆ:
ಸಚಿನ್ ಮನೆಗೆ ತಂದಿದ್ದ ಮೊಸರನ್ನ ಪತಿಗೆ ನೀಡದೇ ರಂಜನಾ ತಿಂದಿದ್ದಳು. ಈ ವಿಚಾರವಾಗಿ ದಂಪತಿ ನಡುವೆ ಗಲಾಟೆಯಾಗಿದೆ. ಪತಿ ಆಕೆಗೆ ಬೆಕ್ಕು ನೀನು ಎಂದು ಕರೆದಿದ್ದಾನೆ. ಇದು ಅವರಿಬ್ಬರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿದೆ. ಕೋಪಗೊಂಡ ಪತಿ, ಪತ್ನಿಯ ಹೊಟ್ಟೆಗೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ. ಅಗ ನೆರೆಹೊರೆಯವರು ಬಂದು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ರಂಜನಾ ಪತಿ ವಿರುದ್ಧ ದೂರನ್ನು ದಾಖಲಿಸಿದ್ದಳು. 2 ವರ್ಷಗಳ ಹಿಂದೆ ನಡೆದಿರುವ ಈ ಪ್ರಕರಣಕ್ಕೆ ಸೆಷನ್ಸ್ ನ್ಯಾಯಾಲಯವು ಅಪರಾಧಿ ಪತಿರಾಯನಿಗೆ 8 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.
2017ರಲ್ಲಿ ಬಂಧನಕ್ಕೊಳಗಾದ ಸಚಿನ್ ನನ್ನು ಜೈಲಿನಲ್ಲಿ ಇಡಲಾಗಿತ್ತು. ವಿಚಾರಣೆಯ ಸಮಯದಲ್ಲಿ, ಸೆಷನ್ಸ್ ನ್ಯಾಯಾಲಯವು ಪತ್ನಿ ರಂಜನಾ ಆಕಸ್ಮಿಕವಾಗಿ ಉಕ್ಕಿನ ಪಾತ್ರೆ ಮೇಲೆ ಬಿದ್ದು ಗಾಯಗೊಂಡಿದ್ದಾಳೆ ಎಂದು ಆರೋಪಿ ಅಪವಾದವನ್ನು ತಳ್ಳಿ ಹಾಕಿದ್ದನು.
ಸಚಿನ್ ನಿರುದ್ಯೋಗಿ ಆಗಿದ್ದನು. ಕುಡಿದು ಮನೆಗೆ ಬರುತ್ತಿದ್ದನು. ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದನು ಎಂದು ರಂಜನಾ ತಾಯಿ ನ್ಯಾಯಾಲಯದಲ್ಲಿ ಹೇಳಿದ್ದಾರೆ. ದೂರುದಾರ ರಂಜನಾ ಸಾಕ್ಷ್ಯವನ್ನು ಹಾಗೂ ವೈದ್ಯಕೀಯ ಸಾಕ್ಷ್ಯಗಳು ಮತ್ತು ಪ್ರತ್ಯಕ್ಷದರ್ಶಿಗಳು ಆರೋಪಿ ಸಚಿನ್ ತನ್ನ ಹೆಂಡತಿಯ ಮೇಲೆ ಹಲ್ಲೆ ನಡೆಸಿರುವುದನ್ನು ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ. ಸಾಕ್ಷಿ ಆಧಾರಗಳನ್ನು ಪರಿಶೀಲನೆ ಮಾಡಿ ನ್ಯಾಯಾಲಯವಯ ತೀರ್ಪು ನೀಡಿದೆ.