ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಿಡಿದೆದ್ದು ಗುರುವಾರ ಸಂಜೆ ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಸಂಚಲನ ಸೃಷ್ಟಿಸಿದ್ದರು. ರಾಜೀನಾಮೆ ಘೋಷಣೆಯನ್ನು ಮಾಡಿದ್ದ ಆಯುಕ್ತೆ ಸರ್ಕಾರಿ ವಾಹನ ಬಿಟ್ಟು ಅಜ್ಞಾತ ಸ್ಥಳಕ್ಕೆ ತೆರಳಿದ್ದರು, ಶುಕ್ರವಾರ ಬೆಳಗ್ಗೆ ನಡೆದ ಸರ್ಕಾರಿ ಕಾರ್ಯಕ್ರಮದಲ್ಲೂ ಭಾಗಿಯಾಗಿರಲಿಲ್ಲ. ಆದರೆ ಮಧ್ಯಾಹ್ನದ ವೇಳೆಗೆ ಸುತ್ತೂರು ಮಠದ ಕಾರ್ಯಕ್ರಮದಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡರು.
Advertisement
ಈ ಸಂದರ್ಭದಲ್ಲಿ ಸುತ್ತೂರು ಶ್ರೀಗಳು, ಸಚಿವ ಎಸ್.ಟಿ. ಸೋಮಶೇಖರ್, ಶಾಸಕರಾದ ಜಿ.ಟಿ. ದೇವೇಗೌಡ ಮತ್ತು ತನ್ವೀರ್ ಸೇಠ್ ಸಮ್ಮುಖದಲ್ಲಿ ಶಿಲ್ಪನಾಗ್ರನ್ನು ಕೂರಿಸಿಕೊಂಡು ಪ್ರತ್ಯೇಕ ಸಭೆ ನಡೆಸಿದರು. ಏನಮ್ಮ ಸಮಸ್ಯೆ ಎಂದು ಶ್ರೀಗಳು ಕೇಳಿದಾಗ, ಇಡೀ ವೃತ್ತಾಂತವನ್ನು ಶಿಲ್ಪಾ ನಾಗ್ ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. ರೋಹಿಣಿ ಸಿಂಧೂರಿ ವಿನಾ ಕಾರಣ ನಮ್ಮನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ದಿನಕ್ಕೊಂದು ರಿಪೋರ್ಟ್ ಕೇಳುತ್ತಾರೆ. ಅಧಿಕಾರಿಗಳಲ್ಲಿ ಭಯ ಮೂಡಿಸ್ತಿದ್ದಾರೆ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.
Advertisement
Advertisement
ಕೋವಿಡ್ ನಿಯಂತ್ರಣ ವಿಚಾರದಲ್ಲಿ ಜಿಲ್ಲಾಡಳಿತದಲ್ಲಿ ಸಾಕಷ್ಟು ಲೋಪ ಇತ್ತು. ಸಿಎಸ್ಆರ್ ಫಂಡ್ ಬಗ್ಗೆ ಯಾರು ಜವಾಬ್ದಾರಿ ತೆಗೆದುಕೊಂಡಿರಲಿಲ್ಲ. ಹೀಗಾಗಿ ನಾನೇ ಇದರ ಜವಾಬ್ದಾರಿ ತೆಗೆದುಕೊಂಡೆ ಅಷ್ಟೇ. ನನಗೆ ಈಗೋ ಇಲ್ಲ, ಕೆಲಸ ಮಾಡುವುದಷ್ಟೇ ನನ್ನ ಉದ್ದೇಶ ಆಗಿತ್ತು. ಯಾರಿಗೂ ಈಗೋ ಇಷ್ಟು ದೊಡ್ಡದಾಗಿ ಇರಬಾರದು. ಎಲ್ಲವನ್ನು ಎಲ್ಲರನ್ನು ಸಮನಾಗಿ ನೋಡಬೇಕು. ಆದರೆ ಒಬ್ಬ ಅಧಿಕಾರಿಯ ಅಹಂನಿಂದ ಇಷ್ಟೆಲ್ಲ ಆಗ್ತಿದೆ. ರಾಜೀನಾಮೆ ನನ್ನ ದುಡುಕಿನ ನಿರ್ಧಾರ ಅಲ್ಲ ಎಂದು ಶಿಲ್ಪಾ ನಾಗ್ ಸ್ಪಷ್ಟನೆ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಶಿಲ್ಪಾ ನಾಗ್ ರಾಜೀನಾಮೆ ಬೆನ್ನಲ್ಲೇ ಹೊಸ ಟೆನ್ಶನ್ -ಕಠಿಣ ನಿರ್ಧಾರಕ್ಕೆ ಬಂದ್ರಾ ಜಿಲ್ಲಾ ಉಸ್ತುವಾರಿ ಸಚಿವ?
Advertisement
ರಾಜೀನಾಮೆ ವಾಪಸ್ ಪಡೆಯಿರಿ, ನೀವು ದುಡುಕಬಾರದು. ನೀವು ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಮೊದಲು ನೀವು ನಿಮ್ಮ ಸ್ಥಾನಕ್ಕೆ ನೀಡಿರುವ ರಾಜೀನಾಮೆ ವಾಪಾಸ್ ಪಡೆಯಿರಿ. ನಿಮ್ಮ ಸೇವೆ ಮೈಸೂರಿಗೆ, ರಾಜ್ಯಕ್ಕೆ ಬೇಕಿದೆ ಎಂದು ಸುತ್ತೂರು ಶ್ರೀಗಳು ಶಿಲ್ಪಾ ನಾಗ್ ಅವರಿಗೆ ಹಿತವಚನ ನೀಡಿದ್ದಾರೆ ಎನ್ನಲಾಗಿದೆ. ಸುತ್ತೂರು ಸ್ವಾಮೀಜಿಗಳ ಈ ಮಾತಿಗೆ ಧ್ವನಿಗೂಡಿಸಿದ ಸಚಿವ ಎಸ್.ಟಿ. ಸೋಮಶೇಖರ್, ನಾವು ರಾಜೀನಾಮೆ ಅಂಗೀಕಾರಕ್ಕೆ ಬಿಡಲ್ಲ. ನಿಮ್ಮ ಮನಸ್ಸಿನ ನೋವು ನಮಗೆ ಅರ್ಥವಾಗಿದೆ. ನೀವು ಸ್ವಾಮೀಜಿ ಅವರು ಹೇಳಿದಂತೆ ರಾಜೀನಾಮೆ ವಾಪಾಸ್ ಪಡೆದು ಕೆಲಸಕ್ಕೆ ಹಾಜರಾಗಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅಧಿಕಾರಿಗಳ ಮಧ್ಯೆ ಸಂಘರ್ಷ – ಎಲ್ಲವನ್ನೂ ಚಾಮುಂಡಿ ತಾಯಿ ನೋಡುತ್ತಿದ್ದಾಳೆ ಎಂದ ಎಸ್ಟಿಎಸ್
ಎಲ್ಲರ ಮಾತು ಕೇಳಿದ ಬಳಿಕ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತೆ ಶಿಲ್ಪಾನಾಗ್, ಸ್ವಾಮೀಜಿಗಳ ಆದೇಶ ಮೀರುವಷ್ಟು ದೊಡ್ಡವಳಲ್ಲ ನಾನು. ಆದರೆ ನನಗೆ ಮಾನಸಿಕವಾಗಿ ತುಂಬಾ ನೋವಾಗಿದೆ. ಬಹಳ ನೊಂದು ನೊಂದು ಈ ತೀರ್ಮಾನಕ್ಕೆ ಬಂದಿದ್ದೇನೆ. ದಿಢೀರನೆ ತೀರ್ಮಾನ ಬದಲಾಯಿಸುವ ಸ್ಥಿತಿಯಲ್ಲಿ ಇಲ್ಲ. ನನಗೆ ಸ್ವಲ್ಪ ಸಮಯ ಕೊಡಿ. ಮನಸ್ಸು ತಿಳಿಯಾದ ಮೇಲೆ ನಿರ್ಧಾರ ಮರುಪರಿಶೀಲಿಸುವ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 12 ಕೋಟಿ ಸಿಎಸ್ಆರ್ ಫಂಡ್ ಖರ್ಚಿನ ಮಾಹಿತಿ ಕೇಳಿದ್ದೆ ಅಷ್ಟೇ – ರೋಹಿಣಿ ಸಿಂಧೂರಿ
ರಾಜೀನಾಮೆ ವಾಪಾಸ್ ಪಡೆಯುವ ವಿಚಾರದಲ್ಲಿ ಶಿಲ್ಪನಾಗ್ ಒಂದು ಹೆಜ್ಜೆ ಮುಂದೆ ಬಂದಿರುವುದು ಸ್ಪಷ್ಟ. ಸ್ವಾಮೀಜಿಗಳ ಮಾತು, ಸಚಿವರು ಮತ್ತು ಹಿರಿಯ ಶಾಸಕರ ಮಾತಿಗೆ ಶಿಲ್ಪನಾಗ್ ಬೆಲೆ ಕೊಟ್ಟು ರಾಜೀನಾಮೆ ವಾಪಾಸ್ ಪಡೆಯುವ ಬಗ್ಗೆ ಯೋಚನೆ ಆರಂಭಿಸಿದ್ದಾರೆ. ಈ ಮಟ್ಟಿಗೆ ಈ ಸಭೆ ಫಲ ಕೊಟ್ಟಂತೆ ಆಗಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ: ರಾಜೀನಾಮೆ ನೀಡಿ ಕಣ್ಣೀರಿಟ್ಟ ಶಿಲ್ಪಾನಾಗ್