ಮೈಸೂರು: ಸಾಂಸಕೃತಿಕ ನಗರಿ ಪ್ರವಾಸಿಗರ ಸ್ವರ್ಗ. ನಿತ್ಯವೂ ಸಾವಿರಾರು ಪ್ರವಾಸಿಗರು ಅರಮನೆ ನಗರಿಗೆ ಬಂದು ಹೋಗುತ್ತಾರೆ. ಈಗ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲು ಹೆಲಿ ಟೂರಿಸಂ ಪ್ರಾರಂಭಿಸಲಾಗುತ್ತಿದೆ. ಆದರೆ ಈ ಹೆಲಿ ಟೂರಿಸಂ ವಿರುದ್ಧ ಪರಿಸರ ಪ್ರೇಮಿಗಳು ತಿರುಗಿಬಿದ್ದಿದ್ದಾರೆ.
Advertisement
ಮೈಸೂರಿನಲ್ಲಿ ಹೆಲಿ ಟೂರಿಸಂ ಶುರು ಮಾಡ್ಬೇಕು ಅನ್ನೋದು ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೀಶ್ವರ್ ಅವರ ಕನಸಿನ ಯೋಜನೆ. ಈ ಮೂಲಕ ಮೈಸೂರಿನಿಂದ ಬೆಂಗಳೂರಿನವರೆಗೆ ಆಗಸದಿಂದಲೆ ಪ್ರವಾಸಿ ತಾಣಗಳನ್ನು ತೋರಿಸೋದು ಈ ಯೋಜನೆ ಉದ್ದೇಶವಾಗಿದೆ. ಇದಕ್ಕಾಗಿ ಈಗಾಗಲೇ ಹಲವು ಸುತ್ತಿನ ಸಭೆ, ಮಾತುಕತೆ ನಡೆದಿವೆ. ಲಲಿತ ಮಹಲ್ ಅರಮನೆ ಸಮೀಪದಲ್ಲಿರುವ ಖಾಲಿ ಜಾಗದಲ್ಲಿ ಹೊಸದಾಗಿ ಹೆಲಿಪ್ಯಾಡ್ ನಿರ್ಮಾಣ ಮಾಡಿ, ಅಲ್ಲಿಂದ ಟೂರಿಸಂ ಪ್ರಾರಂಭ ಮಾಡಲು ಡಿಪಿಆರ್ ಸಹ ಸಿದ್ಧಪಡಿಸಲಾಗಿದೆ. ಪ್ರಸ್ತಾವನೆ ಪ್ರಕಾರ ಹೆಲಿ ಪ್ಯಾಡ್ ನಿರ್ಮಾಣಕ್ಕಾಗಿ 4 ಎಕರೆ ಜಾಗ ಗುರುತಿಸಲಾಗಿದೆ.
Advertisement
Advertisement
ಸದರಿ ಜಾಗದಲ್ಲಿರುವ ಸಾವಿರಾರು ಮರಗಳಿದ್ದು, ಅದರಲ್ಲಿ 170ಕ್ಕೂ ಹೆಚ್ಚು ಮರಗಳನ್ನು ಕಡಿಯೋದು ಅನಿವಾರ್ಯವಾಗಿದೆ. ಹೀಗಾಗಿ ನೂರಾರು ಮರಗಳ ಹನನಕ್ಕೆ ನಿರ್ಧರಿಸಲಾಗಿದ್ದು ಇದಕ್ಕಾಗಿ ಮರಗಳನ್ನು ಕಡಿಯಲು ಮರಗಳನ್ನು ಗುರುತು ಸಹ ಮಾಡಲಾಗಿದೆ. ಆದ್ರೆ ಉದ್ದೇಶಿತ ಲಲಿತ ಮಹಲ್ ಸಮೀಪದಲ್ಲೇ ರಾಜವಂಶಸ್ಥರಿಗೆ ಸೇರಿದ ಜಾಗದಲ್ಲಿ ಹೆಲಿಪ್ಯಾಡ್ ಇದೆ. ಮಂಡಕಳ್ಳಿ ವಿಮಾನ ನಿಲ್ದಾಣದಲ್ಲೂ ಹೆಲಿಕಾಪ್ಟರ್ ಸೇವೆಗೆ ಅವಕಾಶ ಇದೆ. ಅಗತ್ಯವಿದ್ದರೆ ಸಿಎ ನಿವೇಶನ ಬಳಸಿಕೊಂಡು ಹೆಲಿ ಟೂರಿಸಂ ಶುರು ಮಾಡಿ. ಆದ್ರೆ ಮರಗಳ ಬುಡಕ್ಕೆ ಕೊಡಲಿ ಇಡಬೇಡಿ ಅನ್ನೋದು ಪರಿಸರಪ್ರಿಯರ ಆಗ್ರಹವಾಗಿದೆ.
Advertisement
ಹೆಲಿ ಟೂರಿಸಂ ಪ್ರಾಥಮಿಕ ಪ್ರಸ್ತಾವದಲ್ಲಿ ಸುಮಾರು 20 ಎಕರೆ ಜಾಗ ಗುರುತಿಸಲಾಗಿತ್ತು. ಅಷ್ಟು ದೊಡ್ಡ ಜಾಗ ಬಳಸಿಕೊಂಡಿದ್ದರೆ 600ರಿಂದ 1000 ಮರಗಳನ್ನು ಧರೆಗೆ ಉರುಳಿಸಬೇಕಿತ್ತು. ಆಗ ಸಾರ್ವಜನಿಕರ ವಿರೋಧ ಎದುರಿಸಬೇಕಾಗುತ್ತೆ ಅಂತ 20 ಎಕರೆ ಪ್ರಸ್ತಾವನೆಯನ್ನು ತಿದ್ದುಪಡಿ ಮಾಡಿ 4 ಎಕರೆಗೆ ಇಳಿಸಲಾಗಿದೆ. ಈಗಲೂ 170ಕ್ಕೂ ಹೆಚ್ಚು ಮರಗಳನ್ನು ಕಡಿಯೋದು ಅನಿವಾರ್ಯವಾಗಿದೆ. ಅದಕ್ಕೂ ಪರಿಸರಪ್ರಿಯರು ವಿರೋಧ ವ್ಯಕ್ತಪಡಿಸಿದ್ದಾರೆ. ಮರ ಕಡಿಯಲು ಅರಣ್ಯ ಇಲಾಖೆ ಅನುಮತಿ ನೀಡಿದ್ರೆ ಕಾನೂನು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಲಲಿತ ಮಹಲ್ ಅರಮನೆ ಆವರಣದಲ್ಲಿ ಈಗಾಗಲೇ ಹೆಲಿಪ್ಯಾಡ್ ಇದೆ. ಆ ಜಾಗ ರಾಜವಂಶಸ್ಥರಿಗೆ ಸೇರಿದ್ದು, ಸರ್ಕಾರ ಮನಸ್ಸು ಮಾಡಿದ್ರೆ ಬಾಡಿಗೆಗೆ ಪಡೆದುಕೊಳ್ಳಬಹುದು. ಅದೇ ಜಾಗದಿಂದ ಹೆಲಿ ಟೂರಿಸಂ ನಡೆಸಬಹುದು. ಆದರೆ ಹೊಸದಾಗಿ ಹೆಲಿಪ್ಯಾಡ್ ನಿರ್ಮಾಣ ಮಾಡುತ್ತಿರುವುದರ ಅಗತ್ಯವೇನಿದೆ ಎಂಬುದೇ ಪ್ರಶ್ನೆ.