ಚೆನ್ನೈ: ಅಭ್ಯಾಸ ವೇಳೆ ಎಂಎಸ್ ಧೋನಿಯವರು ಮೈದಾನದ ಮೂಲೆ ಮೂಲೆಗೂ ಸಿಕ್ಸ್ ಹೊಡೆದರು ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಿಇಓ ವಿಶ್ವನಾಥನ್ ಅವರು ಹೇಳಿದ್ದಾರೆ.
ಮುಂದಿನ ತಿಂಗಳು ಯುಎಇಯಲ್ಲಿ ನಡೆಯುವ ಐಪಿಎಲ್ಗಾಗಿ ಎಲ್ಲ ತಂಡಗಳು ಭರ್ಜರಿ ಸಿದ್ಧತೆ ನಡೆಸಿವೆ. ಅಂತೆಯೇ ಸಿಎಸ್ಕೆ ತಂಡದ ಆಟಗಾರರು ಕೂಡ ಕಳೆದ ಶುಕ್ರವಾರ ಚೆನ್ನೈಗೆ ಆಗಮಿಸಿ ಅಭ್ಯಾಸ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಧೋನಿ ಫಿಟ್ ಆಗಿ ಇದ್ದು, ಮೈದಾನದ ಎಲ್ಲ ದಿಕ್ಕುಗಳಿಗೂ ಸಿಕ್ಸರ್ ಹೊಡೆದರು ಎಂದು ವಿಶ್ವನಾಥನ್ ತಿಳಿಸಿದ್ದಾರೆ.
Advertisement
Advertisement
ಈ ವಿಚಾರವಾಗಿ ಮಾತನಾಡಿರುವ ವಿಶ್ವನಾಥನ್, ಧೋನಿ ಅಭ್ಯಾಸದ ವೇಳೆ ಚೆನ್ನಾಗಿ ಬ್ಯಾಟ್ ಬೀಸುತ್ತಿದ್ದಾರೆ. ಮೈದಾನದ ಮೂಲೆ ಮೂಲೆಗೂ ಸಿಕ್ಸರ್ ಚಚ್ಚಿದ್ದಾರೆ. ಅವರು ಎಂದಿನಂತೆ ತಾಳ್ಮೆ, ಆತ್ಮವಿಶ್ವಾಸ ಮತ್ತು ಸಂತೋಷದಿಂದ ನೆಟ್ನಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಅವರು ನಿವೃತ್ತಿ ಹೊಂದುತ್ತಾರೆ ಎಂಬ ವಿಚಾರ ನಮಗೂ ಮುಂಚೆಯೇ ತಿಳಿದಿರಲಿಲ್ಲ. ಇನ್ಸ್ಟಾಗ್ರಾಮ್ ಪೋಸ್ಟ್ ನೋಡಿದ ಮೇಲೆಯೇ ನಮಗೂ ಗೊತ್ತಾಯ್ತು ಎಂದು ಹೇಳಿದ್ದಾರೆ.
Advertisement
Advertisement
ಇದೇ ವೇಳೆ ತಂಡದ ಬಗ್ಗೆ ಮಾತನಾಡಿರುವ ವಿಶ್ವನಾಥನ್, ಕೊರೊನಾ ಲಾಕ್ಡೌನ್ ಬ್ರೇಕ್ನ ನಂತರ ತಂಡದ ಆಟಗಾರಿಗೆ ಹೆಚ್ಚು ಅಭ್ಯಾಸ ಮಾಡಿಸಿಲ್ಲ. ಒಮ್ಮೆಲೆ ದೇಹಕ್ಕೆ ಹೆಚ್ಚಿನ ಒತ್ತಡ ಬಿದ್ದರೆ ಗಾಯವಾಗುವ ಸಾಧ್ಯತೆಯಿದೆ. ಹೀಗಾಗಿ ಕೇವಲ ಐದು ದಿನದ ಅಭ್ಯಾಸದ ನಂತರ ಇಂದು ನಮ್ಮ ತಂಡ ಯುಎಇಗೆ ಪ್ರಯಾಣ ಬೆಳೆಸಲಿದೆ. ಇಲ್ಲಿ ನಮ್ಮ ಆಟಗಾರರು 6 ದಿನ ಕ್ವಾರಂಟೈನ್ಗೆ ಒಳಗಾಗಲಿದ್ದಾರೆ ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್ ಕಾರಣದಿಂದ ಮುಂದೂಡಲಾಗಿದ್ದ ಐಪಿಎಲ್ ಅನ್ನು ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಆಡಿಸಲು ಬಿಸಿಸಿಐ ತೀರ್ಮಾನ ಮಾಡಿದೆ. ಐಪಿಎಲ್-2020 ಸೆಪ್ಟಂಬರ್ 19ರಿಂದ ನವೆಂಬರ್ 10ರವರಗೆ ನಡೆಯಲಿದೆ. ಈಗಾಗಲೇ ಕೆಲ ತಂಡಗಳು ಯುಎಇಗೆ ಪ್ರಯಾಣ ಬೆಳೆಸಿವೆ. ಬಿಸಿಸಿಐ ಹೊರಡಿಸಿರುವ ಮಾರ್ಗಸೂಚಿಯಂತೆ ಕೊರೊನಾ ನೆಗೆಟಿವ್ ಬಂದ ಆಟಗಾರರು ಮಾತ್ರ ಐಪಿಎಲ್ನಲ್ಲಿ ಭಾಗವಹಿಸಲಿದ್ದಾರೆ.