– ಇನ್ಮುಂದೆ ಗೋವು ಕೊಂದ್ರೆ ಜೈಲು ಜೊತೆ ದಂಡ
ಬೆಂಗಳೂರು: ಬಿಜೆಪಿ ಸರ್ಕಾರ ಕೊನೆಗೂ ವಿವಾದಿತ ಗೋಹತ್ಯೆ ನಿಷೇಧ ಮಸೂದೆಯನ್ನು ಎರಡು ಮನೆಯಲ್ಲೂ ಅಂಗೀಕಾರ ಮಾಡಿಕೊಳ್ಳುವಲ್ಲಿ ಸಕ್ಸಸ್ ಆಗಿದೆ. ವಿಧಾನ ಪರಿಷತ್ನಲ್ಲಿ ಸೋಮವಾರ ವಿಪಕ್ಷ ಹಾಗೂ ಆಡಳಿತ ಪಕ್ಷಗಳ ಹೈಡ್ರಾಮಾದ ನಡುವೆಯೇ ಬಿಲ್ ಪಾಸ್ ಆಗಿದ್ದು, ರಾಜ್ಯಪಾಲರ ಸಹಿ ಬಳಿಕ ಕಾಯ್ದೆ ಅಧಿಕೃತವಾಗಿ ಜಾರಿಗೆ ಬರೋದಷ್ಟೇ ಬಾಕಿ ಇದೆ.
Advertisement
ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ವಿವಾದಿತ ಗೋಹತ್ಯೆ ಪ್ರತಿಬಂಧಕ ಕಾಯ್ದೆಗೆ ವಿಧಾನಪರಿಷತ್ನಲ್ಲೂ ಗ್ರೀನ್ಸಿಗ್ನಲ್ ಸಿಕ್ಕಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಭಾರೀ ವಿರೋಧದ ನಡುವೆಯೂ ಧ್ವನಿಮತದ ಮೂಲಕ ವಿಧೇಯಕ ಅಂಗೀಕಾರಗೊಂಡಿದೆ.
Advertisement
ಗೋಹತ್ಯೆ ನಿಷೇಧ ಕಾಯ್ದೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಪ್ರಬಲ ವಿರೋಧವಿತ್ತು. ಅಲ್ಲದೇ ಅನೇಕ ಅಂಶಗಳನ್ನ ತಿದ್ದುಪಡಿ ಮಾಡಲು ಸರ್ಕಾರಕ್ಕೆ ಸಲಹೆಗಳನ್ನು ಕೂಡಾ ನೀಡಲಾಗಿತ್ತು. ಇದಲ್ಲದೆ ವಿಧೇಯಕ ವಾಪಸ್ ಪಡೆಯುವಂತೆ ಕಾಂಗ್ರೆಸ್-ಜೆಡಿಎಸ್ ಆಗ್ರಹಿಸಿದವು. ವಿಧೇಯಕದ ಮೇಲೆ ಸತತ 3 ಗಂಟೆ ಚರ್ಚೆ ಕೂಡಾ ಆಯ್ತು. ಈ ವೇಳೆ ವಿಪಕ್ಷಗಳು ಚರ್ಚೆಗೆ ಇನ್ನಷ್ಟು ಸಮಯ ಬೇಕು ಅಂತ ಸಭಾಪತಿಗಳಿಗೆ ಮನವಿ ಮಾಡಿ ಗದ್ದಲ ಪ್ರಾರಂಭ ಮಾಡಿದವು. ಕೂಡಲೇ ಸಭಾಪತಿಗಳು ವಿಧೇಯಕ ಅಂಗೀಕಾರ ಪ್ರಕ್ರಿಯೆ ಪ್ರಾರಂಭ ಮಾಡಿದ್ರು. ಸರ್ಕಾರ ವಿಧೇಯಕ ಚರ್ಚೆಗೆ ಉತ್ತರ ನೀಡದೇ ವಿಧೇಯಕ ಅಂಗೀಕಾರ ಪ್ರಕ್ರಿಯೆ ನಡೀತು. ಸಭಾಪತಿಗಳ ನಡೆ ಮತ್ತು ಕಾಯ್ದೆ ವಿರೋಧಿಸಿ ಜೆಡಿಎಸ್ ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದ ಮುಂದೆ ಪ್ರತಿಭಟನೆ ನಡೆಸಿದ್ರು. ಕಾಂಗ್ರೆಸ್ಸಿನ ನಾರಾಯಣಸ್ವಾಮಿ, ಆರ್.ಬಿ. ತಿಮ್ಮಾಪುರ್ ವಿಧೇಯಕ ಪ್ರತಿ ಹರಿದು ಹಾಕಿದ್ರೆ, ಕಾಂಗ್ರೆಸ್ನ ನಜೀರ್ ಅಹಮ್ಮದ್ ವಿಧೇಯಕದ ಪ್ರತಿಯನ್ನ ಸಭಾಪತಿಗಳ ಮುಂದೆ ಎಡೆದ್ರು. ಗದ್ದಲ ಗಲಾಟೆಗಳ ನಡುವೆ ಧ್ವನಿಮತದ ಮೂಲಕ ವಿಧೇಯಕ ಅಂಗೀಕಾರ ಆಯ್ತು.
Advertisement
Advertisement
ಗೋಹತ್ಯೆ ಮಾಡಿದ್ರೆ ಜೈಲು..!
13 ವರ್ಷ ಕೆಳಗಿನ ಎಮ್ಮೆ ಮತ್ತು ಕೋಣಗಳ ಹತ್ಯೆ ನಿಷೇಧ. 13 ವರ್ಷ ಮೇಲ್ಪಟ್ಟ ದನ, ಹಸು ವಧೆಗೆ ಅವಕಾಶ. ಗೋಹತ್ಯೆ ಮಾಡಿದ್ರೆ 3-7 ವರ್ಷದವರೆಗೆ ಜೈಲು ಶಿಕ್ಷೆ. ಪ್ರತೀ ಗೋಹತ್ಯೆಗೆ 50 ಸಾವಿರದಿಂದ ಗರಿಷ್ಠ 5 ಲಕ್ಷ ರೂ. ದಂಡ. ಪುನರಾವರ್ತಿತ ಅಪರಾಧಕ್ಕೆ 1-10 ಲಕ್ಷದವರೆಗೆ ದಂಡ, 7 ವರ್ಷ ಜೈಲು. ಗೋ ಹತ್ಯೆ ಮಾಡುವವರಿಗೆ ನಿರ್ದಿಷ್ಟ ಅವಧಿವರೆಗೆ ಜಾಮೀನಿಲ್ಲ. ಅಂತಾರಾಜ್ಯ ಹಾಗೂ ರಾಜ್ಯದೊಳಗಡೆ ಗೋ ಸಾಗಾಟಕ್ಕೆ ನಿಷೇಧ ಹೇರಲಾಗಿದೆ. ಗೋಹತ್ಯೆ ತಡೆ, ಸಾಗಾಟ ತಡೆ ನಿರ್ವಹಣೆಗೆ ಸಕ್ಷಮ ಪ್ರಾಧಿಕಾರ ರಚನೆ ಮಾಡಲಾಗಿದೆ.
ಗೋ ಸಾಗಾಟಕ್ಕೆ ಅಧಿಕಾರಿಗಳ ಅನುಮತಿ ಅಗತ್ಯವಾಗಿದ್ದು, ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಸಾಗಾಟ ಮಾಡಬೇಕು. ನಿಯಮ ಉಲ್ಲಂಘಿಸಿದ್ರೆ 3-5 ವರ್ಷದವರೆಗೆ ಜೈಲು, 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಎಸ್ಐ ಶ್ರೇಣಿ ಹಾಗೂ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳಿಗೆ ತಪಾಸಣೆ ಮಾಡುವ ಅಧಿಕಾರ ನೀಡಲಾಗಿದೆ. ಮುಟ್ಟುಗೋಲು ಹಾಕಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ಗೆ ವರದಿ ಮಾಡಬೇಕು. ಗೋ ಸಾಗಾಟದ ವಾಹನ ಆರೋಪಿಗೆ ಹಿಂತಿರುಗಿಸಲು ಬ್ಯಾಂಕ್ ಗ್ಯಾರೆಂಟಿ ಅಗತ್ಯವಾಗಿದೆ. ಗೋಹತ್ಯೆ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಬಹುದು.
ಕಾಯ್ದೆಯಲ್ಲಿ ಯಾವುದಕ್ಕೆ ವಿನಾಯ್ತಿ?
ಸಂಶೋಧನೆಗೆ ಬಳಸುವ ಗೋವುಗಳಿಗೆ ಕಾನೂನಿನಿಂದ ವಿನಾಯಿತಿ. ಪಶು ವೈಧ್ಯಾಧಿಕಾರಿ ದೃಢೀಕರಿಸಿದರೆ ಗೋಹತ್ಯೆ ಮಾಡಲು ಅವಕಾಶ ನೀಡಲಾಗುತ್ತದೆ. ಪಶುವೈದ್ಯಾಧಿಕಾರಿಗಳು ದೃಢೀಕರಿಸಿದ, ರೋಗಗಳಿಂದ ಬಳಲುತ್ತಿರುವ ಗೋವುಗಳ ಹತ್ಯೆಗೆ ಮಾತ್ರ ಅವಕಾಶ ಇದೆ.
ಕಾಯ್ದೆಯಲ್ಲಿ ಉತ್ತರಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಗೋಹತ್ಯೆ ತಡೆ ಕಾಯ್ದೆಯ ಕಠಿಣ ನಿಯಮಗಳನ್ನು ಅಳವಡಿಕೆ ಮಾಡಿಕೊಳ್ಳಲಾಗಿದೆ. ಈಗಾಗಲೇ 2010ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ರೂಪಿಸಿದ್ದ ಕಾಯ್ದೆಯನ್ನು ಮತ್ತಷ್ಟು ಪರಿಷ್ಕರಿಸಿ ಹೊಸ ಮಸೂದೆ ರೂಪಿಸಲಾಗಿದೆ. ಒಟ್ಟಾರೆ ಗೋಹತ್ಯೆ ನಿಷೇಧ ಕಾಯ್ದೆ ಎರಡು ಮನೆಯಲ್ಲೂ ಅಂಗೀಕಾರವಾಗಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಅಧಿಕೃತವಾಗಿ ಕಾಯ್ದೆ ಜಾರಿಗೆ ಬರಲಿದೆ.